ಕನ್ನಡಪ್ರಭ ವಾರ್ತೆ ಆಲೂರು
ಜೈನ ಸಾಹಿತ್ಯ, ಮಹಿಳಾ ಹಾಗೂ ಜೀವಪರ ಸಂವೇದನೆಯ ಜೊತೆಗೆ ಸಾಮಾಜಿಕ ಬದ್ಧತೆ, ಸಾಂಸ್ಕೃತಿಕ ಕಾಳಜಿ ಡಾ. ಕಮಲಾ ಹಂಪನಾರವರ ಪ್ರಮುಖ ಆಸಕ್ತಿಗಳಾಗಿದ್ದವು. ಇವರು ಮಹಿಳಾ ಪರ ಬಹುಗಟ್ಟಿ ಧ್ವನಿಯಾಗಿದ್ದರು ಎಂದು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್ ಅಭಿಪ್ರಾಯಪಟ್ಟರು.ಕನ್ನಡ ಸಾರಸ್ವತ ಲೋಕದ ಹಿರಿಯ, ಸಜ್ಜನ ಸಾಹಿತಿಯಾಗಿದ್ದ ಡಾ. ಕಮಲಾ ಹಂಪನಾರವರ ಅಕಾಲಿಕ ಅಗಲಿಕೆಯ ಹಿನ್ನೆಲೆಯಲ್ಲಿ ಆಲೂರು ತಾಲೂಕು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯು ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ಪ್ರಾಧ್ಯಾಪಕಿ, ಸಂಶೋಧಕಿ, ಲೇಖಕಿ, ವಿಮರ್ಶಕಿ, ಆಧುನಿಕ ವಚನಗಾರ್ತಿಯಾದ ನಾಡೋಜ ಡಾ. ಕಮಲಾ ಹಂಪನಾರವರ ಅಗಲಿಕೆ ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಹಳಗನ್ನಡ ಹಾಗೂ ಜೈನ ಸಾಹಿತ್ಯದ ಸಂಶೋಧನಾ ವಿಭಾಗದಲ್ಲಿ ಅಗ್ರಗಣ್ಯ ಸೇವೆ ಸಲ್ಲಿಸಿದ್ದ ಇವರು, ಆಧುನಿಕ ಸಾಹಿತ್ಯದಲ್ಲಿ ತಮ್ಮದೇಯಾದ ಛಾಪು ಮೂಡಿಸಿದವರು. ತಮ್ಮ ಐವತ್ತಕ್ಕೂ ಹೆಚ್ಚು ಸೃಜನಶೀಲ, ಸೃಜನೇತರ ಕೃತಿಗಳಲ್ಲಿ ಸಾಮಾಜಿಕ, ಸಾಂಸ್ಕೃತಿಕ, ಸಾಹಿತ್ಯಿಕ ಮೌಲ್ಯಗಳನ್ನು ಕಟ್ಟಿಕೊಟ್ಟವರು. ಕಥೆ, ಕಾವ್ಯ, ಪಠ್ಯ ವಿಮರ್ಶೆ, ಸಾಹಿತ್ಯ ವಿಮರ್ಶೆ, ಕಾದಂಬರಿ, ಜೀವನ ಚರಿತ್ರೆ ಮುಂತಾದ ಪ್ರಕಾರಗಳಲ್ಲಿ ಹಲವು ದಶಕಗಳ ಕಾಲ ನಿರಂತರವಾಗಿ ದುಡಿದಿದ್ದಾರೆ. ತರಂಗ ಭಾರತ ಒಂದು ಅಧ್ಯಯನ, ಅನೇಕನಾಥವಾದ, ಜೈನ ಸಾಹಿತ್ಯ ಪರಿಸರ ಇವರ ಪ್ರಮುಖ ಕೃತಿಗಳು. ಬಿಂದಲಿ ಮತ್ತು ಬುಗುಡಿ ಇವು ಕಮಲಾ ಹಂಪನಾರವರ ಶ್ರೇಷ್ಠ ಆಧುನಿಕ ವಚನ ಕೃತಿಗಳಾಗಿವೆ. ಇವರ ವಚನಗಳಲ್ಲಿ ಸಾಮಾಜಿಕ ಜಂಜಾಟಗಳು, ಸಾಮಾಜಿಕ ಅನಿಷ್ಟಗಳು, ಮುಖವಾಡದ ಬದುಕು, ಅಸಮಾನತೆ, ಸಾಮಾಜಿಕ ಸಂಘರ್ಷ ಮುಂತಾದ ವಿಷಯಗಳು ಅಗ್ರವಾಗಿ ಚರ್ಚಿಸಲ್ಪಟ್ಟಿವೆ ಎಂದರು.
ಕಸಾಪ ಮಾಜಿ ಅಧ್ಯಕ್ಷ ಎಸ್.ಎಸ್.ಶಿವಮೂರ್ತಿ ಮಾತನಾಡಿ, ಡಾ. ಕಮಲಾ ಹಂಪನಾರವರು ಕನ್ನಡ ನಾಡು, ನುಡಿ ಕಂಡಂತಹ ಧೀಮಂತ ಬರಹಗಾರ್ತಿಯಾಗಿದ್ದರು. ಇವರು ಕನ್ನಡ ಸಾಹಿತ್ಯದ ಸುದೀರ್ಘ ಬರಹಗಾರ್ತಿ. ಹಲವಾರು ಮೌಲ್ಯಭರಿತ ಕೃತಿರತ್ನಗಳನ್ನು ಸಾಹಿತ್ಯ ಮಡಿಲಿಗೆ ನೀಡಿದ್ದಾರೆ. ಅವರು ಶಾರೀರಿಕವಾಗಿ ನಮ್ಮೊಂದಿಗಿಲ್ಲದಿದ್ದರೂ ಸಾಹಿತ್ಯಿಕವಾಗಿ ಹಾಗೂ ಮಾನಸಿಕವಾಗಿ ಕನ್ನಡ ಸಾಹಿತ್ಯ ಚರಿತ್ರೆ ಇರುವವರೆಗೂ ಮುಖಾಮುಖಿಯಾಗುತ್ತಾರೆ. ಅವರು ಅಗಲಿಕೆಯು ನೋವುಂಟು ಮಾಡಿದೆ. ಮುಂದಿನ ದಿನಗಳಲ್ಲಿ ಅವರಿಂದ ರಚಿತವಾದ ಸಾಹಿತ್ಯ ಹೆಚ್ಚೆಚ್ಚು ವಿಮರ್ಶೆಗೊಂಡು ಜನಮಾನಸದಲ್ಲಿ ವಿಸ್ತಾರತೆಯನ್ನು ಪಡೆದುಕೊಳ್ಳಲಿ ಎಂದರು.ಆಲೂರು ತಾಲೂಕು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಗೌರವಾಧ್ಯಕ್ಷ ಎಂ.ಬಾಲಕೃಷ್ಣ ಮಾತನಾಡಿ, ೨೦೦೩ರಲ್ಲಿ ಮೂಡಬಿದರೆಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆಯಾಗಿದ್ದ ಹಂಪನಾ, ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅವಿಶ್ರಾಂತವಾಗಿ ಶ್ರಮಿಸಿದವರು. ಇವರ ಸಾಧನೆಗಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ, ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಚಾವುಂಡರಾಯ ಪ್ರಶಸ್ತಿ, ನಾಡೋಜ ಪ್ರಶಸ್ತಿ ಸೇರಿ ನೂರಾರು ಬಿರುದು, ಸನ್ಮಾನಗಳು ಸಂದಿರುವುದು ಡಾ. ಕಮಲಾ ಹಂಪನಾರವರ ಸಾಧನೆಗೆ ಹಿಡಿದ ಕನ್ನಡಿಯಾಗಿವೆ ಎಂದರು. ಆಲೂರು ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಎಚ್.ವಿ.ರಾಘವೇಂದ್ರ, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಉಪಾಧ್ಯಕ್ಷ ಟಿ.ಕೆ.ನಾಗರಾಜ್, ಕಾರ್ಯದರ್ಶಿ ಧರ್ಮ ಕೆರಲೂರು, ನಿಂಗೇಗೌಡ, ಅತಿಥಿ ಉಪನ್ಯಾಸಕ ಕಲ್ಲೇಶ್ ಸೇರಿ ಹಲವರು ಉಪಸ್ಥಿತರಿದ್ದರು.