ಹಂಪಿ ಉತ್ಸವ: ಮಹಾನವಮಿ ದಿಬ್ಬದಲ್ಲೂ ಈ ಬಾರಿ ಗತವೈಭವ

KannadaprabhaNewsNetwork |  
Published : Feb 22, 2025, 12:45 AM IST
21ಎಚ್‌ಪಿಟಿ1- ಹೊಸಪೇಟೆ ನಾಡಹಬ್ಬ ಮೈಸೂರು ದಸರೆಗೆ ಪ್ರೇರಣೆಯಾಗಿರುವ ಐತಿಹಾಸಿಕ ಹಂಪಿಯ ಮಹಾನವಮಿ ದಿಬ್ಬದಲ್ಲೂ ಈ ಬಾರಿ ಹಂಪಿ ಉತ್ಸವದ ನಿಮಿತ್ತ ವೇದಿಕೆ ನಿರ್ಮಿಸಿ ಗತ ವೈಭವ ಮರುಕಳಿಸುವ ಕಾರ್ಯ ನಡೆಯಲಿದೆ. | Kannada Prabha

ಸಾರಾಂಶ

ವಿಜಯನಗರದ ಸಾಮ್ರಾಜ್ಯದ ಮಾಂಡಲೀಕರಾಗಿದ್ದ ಮೈಸೂರು ಅರಸರು ಹಂಪಿಯಲ್ಲಿ ನಡೆಯುತ್ತಿದ್ದ ದಸರೆ ಮುಂದುವರಿಸಿದ್ದರು

ಕೃಷ್ಣ ಎನ್‌. ಲಮಾಣಿ ಹೊಸಪೇಟೆ

ನಾಡಹಬ್ಬ ಮೈಸೂರು ದಸರೆಗೆ ಪ್ರೇರಣೆಯಾಗಿರುವ ಐತಿಹಾಸಿಕ ಹಂಪಿಯ ಮಹಾನವಮಿ ದಿಬ್ಬದಲ್ಲೂ ಈ ಬಾರಿ ಹಂಪಿ ಉತ್ಸವದ ನಿಮಿತ್ತ ಗತವೈಭವ ಮರುಕಳಿಸಲಿದೆ.

ವಿಜಯನಗರದ ಸಾಮ್ರಾಜ್ಯದ ಮಾಂಡಲೀಕರಾಗಿದ್ದ ಮೈಸೂರು ಅರಸರು ಹಂಪಿಯಲ್ಲಿ ನಡೆಯುತ್ತಿದ್ದ ದಸರೆ ಮುಂದುವರಿಸಿದ್ದರು. ಆದರೆ, ಹಂಪಿಯ ಈ ದಿಬ್ಬದಲ್ಲೂ ಯಾವುದೇ ಕಾರ್ಯಕ್ರಮಗಳು ನಡೆಯುತ್ತಿರಲಿಲ್ಲ. ಆದರೆ, ಇದೇ ಮೊದಲ ಬಾರಿಗೆ ವಿಜಯನಗರ ಜಿಲ್ಲಾಡಳಿತ ಮಹಾನವಮಿ ದಿಬ್ಬದಲ್ಲೂ ವಿಜಯನಗರದ ಆಳರಸರ ಕಾಲದಲ್ಲಿ ನಡೆಯುತ್ತಿದ್ದ ವೈಭವ ಮರುಕಳಿಸುವ ಕಾರ್ಯ ಮಾಡುತ್ತಿದೆ.

ದಿಬ್ಬದಲ್ಲಿ ಐದನೇ ವೇದಿಕೆ: ಹಂಪಿ ಉತ್ಸವ ಫೆ. 28, ಮಾ. 1 ಮತ್ತು 2ರಂದು ಮೂರು ದಿನಗಳ ವರೆಗೆ ನಡೆಯಲಿದೆ. ಉತ್ಸವದ ನಿಮಿತ್ತ ವಿಜಯನಗರ ಜಿಲ್ಲಾಡಳಿತ ಗಾಯತ್ರಿ ಪೀಠದಲ್ಲಿ ಪ್ರಧಾನ ವೇದಿಕೆ, ಎದುರು ಬಸವಣ್ಣ ಮಂಟಪದಲ್ಲಿ ಎರಡನೇ ವೇದಿಕೆ, ಶ್ರೀ ವಿರೂಪಾಕ್ಷೇಶ್ವರ ದೇವಾಲಯದಲ್ಲಿ ಮೂರನೇ ವೇದಿಕೆ ಮತ್ತು ಸಾಸಿವೆ ಕಾಳು ಗಣಪತಿ ಮಂಟಪದಲ್ಲಿ ನಾಲ್ಕನೇ ವೇದಿಕೆ ನಿರ್ಮಿಸುತ್ತಿದೆ. ಈ ನಡುವೆ ಮಹಾನವಮಿ ದಿಬ್ಬದಲ್ಲಿ ಐದನೇ ವೇದಿಕೆ ನಿರ್ಮಾಣ ಮಾಡಿ ಈ ಮೂಲಕ ಗತ ಕಾಲದ ವೈಭವ ಮರುಕಳಿಸುವ ಕಾರ್ಯವನ್ನು ಜಿಲ್ಲಾಡಳಿತ ಮಾಡುತ್ತಿದೆ.

ದಸರಾ ಐತಿಹ್ಯ: ವಿಜಯನಗರ ಅರಸರ ಕಾಲದಲ್ಲಿ ಮಹಾನವಮಿ ದಿಬ್ಬದಲ್ಲಿ ದಸರಾ ಹಬ್ಬ ಆಚರಿಸಲಾಗುತ್ತಿತ್ತು. ಇಲ್ಲಿ ರಾಜರು ಪ್ರಜೆಗಳೊಂದಿಗೆ ದಸರಾ ಹಬ್ಬ ಆಚರಿಸುತ್ತಿದ್ದರು. ಒಂಬತ್ತು ದಿನಗಳ ವರೆಗೆ ಮಹಾನವಮಿ ದಿಬ್ಬದಲ್ಲಿ ವೈಭವ ಮೇಳೈಸುತ್ತಿತ್ತು. ವಿಜಯನಗರ ಸಾಮ್ರಾಜ್ಯದ ದೊರೆಗೆ ಮಾಂಡಲೀಕರು ಹಾಗೂ ವಿದೇಶಿ ರಾಯಭಾರಿಗಳು ಕಾಣಿಕೆ ಸಲ್ಲಿಸುತ್ತಿದ್ದರು. ಅಲ್ಲದೆ ಆನೆ, ಕುದುರೆಗಳ ಮೆರವಣಿಗೆ ನಡೆಸಲಾಗುತ್ತಿತ್ತು. ನೃತ್ಯಗಾರರು ಹಾಗೂ ಸಂಗೀತಗಾರರು ಕಲೆ ಪ್ರದರ್ಶಿಸುತ್ತಿದ್ದರು. ಮಹಾನವಮಿ ಹಬ್ಬದ ದಿನಗಳಲ್ಲಿ ವಿಜಯನಗರ ಅರಸರು ಈ ವೇದಿಕೆಯಿಂದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಚಟುವಟಿ ನಡೆಸುತ್ತಿದ್ದರು.

ವಿಜಯನಗರದ ಆಳರಸರ ಕಾಲದಲ್ಲಿ ಸೈನಿಕರ ಶೌರ್ಯ, ಕುಸ್ತಿ, ಮಲ್ಲಕಂಬ ಪ್ರದರ್ಶನಗಳನ್ನು ದಸರಾ ಸಂದರ್ಭದಲ್ಲಿ ಏರ್ಪಡಿಸಲಾಗುತ್ತಿತ್ತು. ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನವರಾತ್ರಿಗೆ ವಿಶೇಷ ಕಳೆ ತರುತ್ತಿದ್ದವು. ಈ ದಸರಾ ವೈಭವ ಕಣ್ಣದುಂಬಿಕೊಳ್ಳಲು ಆಗಿನ ಕಾಲದಲ್ಲೇ ವಿದೇಶಿ ರಾಯಭಾರಿಗಳು, ವಿದೇಶಿ ಪ್ರವಾಸಿಗರು ಕೂಡ ಆಗಮಿಸುತ್ತಿದ್ದರು. ಅವರ ಪ್ರವಾಸ ಕಥನಗಳಲ್ಲೇ ವಿಜಯನಗರದ ದಸರಾ ವೈಭವ ವರ್ಣನೆ ಮಾಡಲಾಗಿದೆ.

ನಾಟಕಗಳ ಪ್ರದರ್ಶನ:ದಸರಾ ದಿಬ್ಬದ ವೇದಿಕೆಯಲ್ಲಿ ಈ ಬಾರಿ ನಾಟಕ ಹಾಗೂ ವಿವಿಧ ಕಲೆಗಳ ಪ್ರದರ್ಶನ ನಡೆಯಲಿದೆ. ರಂಗಭೂಮಿ ಹಾಗೂ ಸ್ಥಳೀಯ ಕಲಾವಿದರಿಗೆ ಅವಕಾಶ ದೊರೆಯಲಿದೆ. ನಾಡಿನ ಕಲೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದಕ್ಕಾಗಿ ಇನ್ನೊಂದು ವೇದಿಕೆ ನಿರ್ಮಾಣ ಮಾಡಿ ಅವಕಾಶ ನೀಡಲಾಗುತ್ತಿದೆ.

ಹಂಪಿ ಉತ್ಸವದ ನಿಮಿತ್ತ ಮಹಾನವಮಿ ದಿಬ್ಬದಲ್ಲಿ ಈ ಬಾರಿ ವೇದಿಕೆ ನಿರ್ಮಿಸಲಾಗುತ್ತಿದೆ. ಐದು ವೇದಿಕೆಗಳಲ್ಲಿ ಕಲೆ ಮೇಳೈಸಲಿದೆ. ಮಹಾನವಮಿ ದಿಬ್ಬದಲ್ಲಿ ವಿಶೇಷವಾಗಿ ನಾಟಕ ಹಾಗೂ ದೇಶಿ ಕಲೆಗೆ ಒತ್ತು ನೀಡಲಾಗುವುದು ಎಂದು ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್‌ ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!