ಹೊಸಪೇಟೆ: ವಿಶ್ವ ವಿಖ್ಯಾತ ಹಂಪಿ ಉತ್ಸವ ಆಚರಿಸಲು ರಾಜ್ಯ ಸರ್ಕಾರ ಹಾಗೂ ವಿಜಯನಗರ ಜಿಲ್ಲಾಡಳಿತ ಮುಂದಾಗಿದ್ದು, ಬಹುತೇಕ 2026ರ ಫೆಬ್ರವರಿ 13,14 ಮತ್ತು 15ರಂದು ಆಚರಿಸಲು ಚಿಂತನೆ ನಡೆದಿದೆ.
ಹಂಪಿ ಉತ್ಸವವನ್ನು ಫೆಬ್ರವರಿ 13,14 ಮತ್ತು 15ರಂದು ನಡೆಸಲು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಅವರು ಕೂಡ ಒಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ, ಸ್ಥಳೀಯ ಮಟ್ಟದಲ್ಲಿ ಪೊಲೀಸ್ ಇಲಾಖೆ ಸೇರಿದಂತೆ ಪ್ರಮುಖ ಇಲಾಖೆಗಳ ಸಂಯೋಜನೆಯೊಂದಿಗೆ ದಿನಾಂಕ ನಿಗದಿ ಬಗ್ಗೆಯೂ ಚರ್ಚೆ ನಡೆದಿದೆ. ಹಂಪಿ ಉತ್ಸವ ಫೆ. 27, 28, ಮಾರ್ಚ್ 1ರಂದು ನಡೆಯುವುದರ ಬಗ್ಗೆಯೂ ಚರ್ಚೆ ನಡೆದಿದೆ. ಆದರೆ, ಈಗ ಫೆ.13,14 ಮತ್ತು 15ರಂದು ನಡೆಸಲು ತಾತ್ಕಾಲಿಕವಾಗಿ ದಿನಾಂಕ ಕೂಡ ನಿಗದಿಪಡಿಸಲಾಗಿದೆ.
ಉತ್ಸವದ ರೂವಾರಿ ಎಂ.ಪಿ. ಪ್ರಕಾಶ ಅವರು ಪ್ರತಿ ವರ್ಷ ನವೆಂಬರ್ 3, 4 ಮತ್ತು 5ರಂದು ಉತ್ಸವ ನಡೆಸಲು ದಿನಾಂಕ ನಿಗದಿಗೊಳಿಸಿದ್ದರು. ಆದರೆ, ಸರ್ಕಾರಗಳು ಬದಲಾದಂತೆ ಹಂಪಿ ಉತ್ಸವದ ದಿನಾಂಕ ಕೂಡ ಬದಲಾಗುತ್ತಲೇ ಸಾಗಿದೆ. ಸಚಿವ ಜಮೀರ್ ಅಹಮದ್ ಖಾನ್ ಅವರು ಹಂಪಿ ಉತ್ಸವವನ್ನು ಅದ್ಧೂರಿಯಾಗಿ ನಡೆಸಲು ಸೂಚಿಸಿದ್ದು, ಅವರ ಉಸ್ತುವಾರಿಯಲ್ಲಿ ಮೂರನೇ ಉತ್ಸವ ಆಗಲಿದೆ. ಹಾಗಾಗಿ ಅಚ್ಚುಕಟ್ಟಾಗಿ ಉತ್ಸವಕ್ಕೆ ಸಿದ್ಧತೆ ನಡೆಸಲು ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.ಅಂತಿಮ ನಿರ್ಧಾರಹಂಪಿ ಉತ್ಸವಕ್ಕೆ ತಾತ್ಕಾಲಿಕವಾಗಿ ಫೆಬ್ರವರಿ 13,14 ಮತ್ತು 15ರಂದು ಆಚರಿಸಲು ದಿನಾಂಕ ನಿಗದಿಗೊಳಿಸಲಾಗಿದೆ. ಉತ್ಸವಕ್ಕೆ ಸಿದ್ಧತೆ ಆರಂಭಿಸಲಾಗಿದೆ. ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ವಿಜಯನಗರ ಜಿಲ್ಲಾಧಿಕಾಕಿ ಕವಿತಾ ಎಸ್. ಮನ್ನಿಕೇರಿ ತಿಳಿಸಿದ್ದಾರೆ.ಕಲಾವಿದರಿಂದ ಅರ್ಜಿ ಆಹ್ವಾನಹೊಸಪೇಟೆ: ವಿಶ್ವವಿಖ್ಯಾತ 2026ರ ಹಂಪಿ ಉತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಮೆರವಣಿಗೆ ಕಾರ್ಯಕ್ರಮಗಳನ್ನು ನೀಡಲು ಆಸಕ್ತ ಕಲಾವಿದರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ತಿಳಿಸಿದ್ದಾರೆ.ಹಂಪಿ ಉತ್ಸವಕ್ಕೆ ಮೆರಗು ಹೆಚ್ಚಿಸಲು ಸಾಂಸ್ಕೃತಿಕ ಉತ್ಸವಗಳು, ಮೆರವಣಿಗೆ ಕಾರ್ಯಕ್ರಮಗಳಲ್ಲಿ ಸ್ಥಳೀಯ, ಹೊರ ಜಿಲ್ಲೆ ಮತ್ತು ರಾಜ್ಯದವರು ಭಾಗವಹಿಸಬಹುದು. ಆಸಕ್ತ ಕಲಾವಿದರಿಗೆ ಜ. 20ರೊಳಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಆಸಕ್ತ ಕಲಾವಿದರು ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಿಜಯನಗರ ಜಿಲ್ಲಾ ಕಚೇರಿಯಲ್ಲಿ ಅರ್ಜಿ ಸಲ್ಲಿಸಬೇಕು. ಸರ್ಕಾರಿ, ಅರೆ ಸರ್ಕಾರಿ, ಅನುದಾನಿತ ಸಂಘ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಲಾವಿದರು ಸಕ್ಷಮ ಪ್ರಾಧಿಕಾರದ ಅನುಮತಿ ಪಡೆದು ಕಡ್ಡಾಯವಾಗಿ ಅನುಮತಿ ಪತ್ರದೊಂದಿಗೆ ಅರ್ಜಿ ಸಲ್ಲಿಸಿದಲ್ಲಿ ಮಾತ್ರ ಅಂತಹ ಅರ್ಜಿಗಳನ್ನು ಪರಿಗಣಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಹಂಪಿ ಉತ್ಸವದ ಲೋಗೋ ರಚಿಸಿ, ಬಹುಮಾನ ಗೆಲ್ಲಿಹೊಸಪೇಟೆ: ವಿಶ್ವವಿಖ್ಯಾತ 2026ರ ಹಂಪಿ ಉತ್ಸವದ ನೂತನ ಲೋಗೋ ರಚಿಸುವ ಕಲಾವಿದರಿಗೆ ಜಿಲ್ಲಾಡಳಿತದಿಂದ ಸೂಕ್ತ ಬಹುಮಾನ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ತಿಳಿಸಿದ್ದಾರೆ. ಹಂಪಿ ಉತ್ಸವ ಕಾರ್ಯಕ್ರಮವನ್ನು ಆಚರಣೆ ಮಾಡಲು ಪೂರ್ವಸಿದ್ಧತೆ ಕೈಗೊಳ್ಳಲು ಸೂಚಿಸಿರುವ ಹಿನ್ನೆಲೆಯಲ್ಲಿ ಈ ಬಾರಿ ಉತ್ಸವದ ನೂತನ ಲೋಗೋ ರಚಿಸಬೇಕಿದೆ. ಆಸಕ್ತ ಕಲಾವಿದರು ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಿಜಯನಗರ ಜಿಲ್ಲಾ ಕಚೇರಿಗೆ ಜನವರಿ 8ರೊಳಗೆ ಪ್ರಸ್ತಾವನೆಗಳನ್ನು ಸಲ್ಲಿಸಬೇಕೆಂದು ಹಾಗೂ ಅವಧಿ ಮೀರಿ ಬಂದು ಪ್ರಸ್ತಾವನೆಗಳನ್ನು ಪರಿಗಣಿಸುವುದಿಲ್ಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.