ಹಂಪಿಯ ಪ್ರಮುಖ ಸ್ಮಾರಕ ಜಲಾವೃತ

KannadaprabhaNewsNetwork |  
Published : Aug 19, 2025, 01:00 AM IST
18ಎಚ್ ಪಿಟಿ1- ಹೊಸಪೇಟೆಯ ತುಂಗಭದ್ರಾ ಜಲಾಶಯದಿಂದ ನದಿಗೆ ನೀರು ಹರಿಸಿರುವುದರಿಂದ ಹಂಪಿಯಲ್ಲಿ ತುಂಗಭದ್ರಾ ನದಿ ರಭಸವಾಗಿ ಹರಿಯುತ್ತಿದೆ. | Kannada Prabha

ಸಾರಾಂಶ

ಕಲ್ಯಾಣ ಕರ್ನಾಟಕದ ಜೀವನಾಡಿ ತುಂಗಭದ್ರಾ ಜಲಾಶಯದ ಒಳಹರಿವಿನಲ್ಲಿ ಭಾರೀ ಏರಿಕೆ ಆಗಿರುವ ಹಿನ್ನೆಲೆ ಜಲಾಶಯದಿಂದ 1,07,325 ಕ್ಯುಸೆಕ್‌ ನೀರು ನದಿಗೆ ಸೋಮವಾರ ಹರಿಸಲಾಗಿದೆ.

 ಹೊಸಪೇಟೆ  :   ಕಲ್ಯಾಣ ಕರ್ನಾಟಕದ ಜೀವನಾಡಿ ತುಂಗಭದ್ರಾ ಜಲಾಶಯದ ಒಳಹರಿವಿನಲ್ಲಿ ಭಾರೀ ಏರಿಕೆ ಆಗಿರುವ ಹಿನ್ನೆಲೆ ಜಲಾಶಯದಿಂದ 1,07,325 ಕ್ಯುಸೆಕ್‌ ನೀರು ನದಿಗೆ ಸೋಮವಾರ ಹರಿಸಲಾಗಿದೆ.

ಜಲಾಶಯದಿಂದ ನದಿಗೆ ಭಾರೀ ಪ್ರಮಾಣದಲ್ಲಿ ನೀರು ಬಿಟ್ಟಿರುವುದರಿಂದ ಹಂಪಿಯ ಪ್ರಮುಖ ಸ್ಮಾರಕ ಜಲಾವೃತವಾಗಿವೆ. ಜಲಾಶಯದ ಮೇಲ್ಭಾಗದಲ್ಲಿ ಮಳೆ ಆಗುತ್ತಿರುವ ಹಿನ್ನೆಲೆ ಒಳಹರಿವು 80 ಸಾವಿರಕ್ಕೂ ಅಧಿಕ ಇರುವ ಹಿನ್ನೆಲೆಯಲ್ಲಿ ಜಲಾಶಯದ 26 ಕ್ರಸ್ಟ್‌ಗೇಟ್‌ಗಳಿಂದ 1,07,325 ಕ್ಯುಸೆಕ್‌ ನೀರು ನದಿಗೆ ಹರಿಸಲಾಗಿದೆ. ಜಲಾಶಯಕ್ಕೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುವ ಸಾಧ್ಯತೆ ಇದೆ. ಹಾಗಾಗಿ ಜಲಾಶಯದಿಂದ ನದಿಗೆ ಇನ್ನೂ ಭಾರೀ ಪ್ರಮಾಣದಲ್ಲಿ ನೀರು ಹರಿಸುವ ಸಾಧ್ಯತೆ ಇರುವುದರಿಂದ ನದಿಪಾತ್ರದ ಜನರು ಎಚ್ಚರಿಕೆಯಿಂದ ಇರಲು ತುಂಗಭದ್ರಾ ಮಂಡಳಿ ಅಲರ್ಟ್‌ ಸಂದೇಶ ರವಾನಿಸಿದೆ. ಈಗಾಗಲೇ ಹವಾಮಾನ ಇಲಾಖೆ ಚಿಕ್ಕಮಗಳೂರು ಜಿಲ್ಲೆಗೆ ರೆಡ್‌ ಅಲರ್ಟ್‌ ಘೋಷಣೆ ಮಾಡಿದೆ. ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಹಾವೇರಿ, ಗದಗ ಜಿಲ್ಲೆಗಳಲ್ಲಿ ಆಗುತ್ತಿರುವ ಮಳೆಯಿಂದ ತುಂಗಭದ್ರಾ ಜಲಾಶಯಕ್ಕೆ ನೀರು ಹರಿದು ಬರುತ್ತಿದೆ.

ಈಗಾಗಲೇ ತುಂಗಾ ಜಲಾಶಯ, ಭದ್ರಾ ಜಲಾಶಯ ಮತ್ತು ವರದಾ ನದಿಯಿಂದ ತುಂಗಭದ್ರಾ ಡ್ಯಾಂಗೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಈ ಮಧ್ಯೆ ಜಲಾಶಯದ ಗೇಟ್‌ಗಳ ಸ್ಥಿತಿಯೂ ಸರಿಯಾಗಿಲ್ಲದ್ದರಿಂದ, ಮುನ್ನೆಚ್ಚರಿಕಾ ಕ್ರಮವಾಗಿ ಈಗಾಗಲೇ 1,07,325 ಕ್ಯುಸೆಕ್‌ ನೀರು ನದಿಗೆ ಹರಿಸಲಾಗುತ್ತಿದೆ.

ಹಂಪಿ ಮಂಟಪಗಳು ಜಲಾವೃತ:

ಹಂಪಿಯ ಪುರಂದರದಾಸರ ಮಂಟಪ, ಧಾರ್ಮಿಕ ವಿಧಿ ವಿಧಾನ ನೆರವೇರಿಸುವ ಮಂಟಪ, ಕಾಲು ಸೇತುವೆ, ಚಕ್ರತೀರ್ಥ, ಕೋದಂಡರಾಮ ಸ್ವಾಮಿ ದೇವಾಲಯ, ನದಿ ತೀರದ ಸಾಲು ಮಂಟಪಗಳು, ಕೋಟಿಲಿಂಗ, ಕಂಪಭೂಪ ಮಾರ್ಗ ಸೇರಿದಂತೆ ವಿವಿಧ ಸ್ಮಾರಕಗಳು ಮತ್ತು ಮಂಟಪಗಳು ಜಲಾವೃತ ಆಗಿವೆ. ಜಲಾಶಯಕ್ಕೆ ಭಾರೀ ಪ್ರಮಾಣದಲ್ಲಿ ನೀರು ಹರಿಬಿಡಲಾಗಿರುವ ಹಿನ್ನೆಲೆ ಹಂಪಿಯಲ್ಲಿ ತೆಪ್ಪ ಪ್ರವಾಸೋದ್ಯಮಕ್ಕೂ ಬ್ರೇಕ್‌ ಬಿದ್ದಿದೆ. ಬುಕ್ಕಸಾಗರ, ಕೋದಂಡ ರಾಮ ದೇವಾಲಯ ಸಮೀಪದಲ್ಲಿ ಹಾಕಲಾಗುತ್ತಿದ್ದ ತೆಪ್ಪವನ್ನು ಹಾಕದಂತೆ ಮೀನುಗಾರರಿಗೆ ಸ್ಥಳೀಯಾಡಳಿತ ಸೂಚನೆ ನೀಡಿದೆ.  

ಹಂಪಿಯಲ್ಲಿ ಬೋಟಿಂಗ್‌ ವ್ಯವಸ್ಥೆ ಕೂಡ ಸ್ಥಗಿತಗೊಳಿಸಲಾಗಿದೆ. ನದಿ ತೀರದಲ್ಲಿ ಪ್ರವಾಸಿಗರು ಎಚ್ಚರಿಕೆಯಿಂದ ಇರಲು ಸ್ಥಳೀಯ ಪೊಲೀಸರು ಸೂಚನೆ ನೀಡಿದ್ದಾರೆ. ಹೀಗಿದ್ದರೂ ಕೆಲವು ಪ್ರವಾಸಿಗರು ನದಿಯಲ್ಲಿ ಸ್ನಾನ ಮಾಡುತ್ತಿರುವುದು ಕಂಡು ಬಂದಿದೆ. ನದಿಗೆ ಒಂದು ಲಕ್ಷಕ್ಕೂ ಅಧಿಕ ನೀರು ಹರಿಬಿಟ್ಟರೂ ಪ್ರವಾಸಿಗರು ಹಾಗೂ ಭಕ್ತಾದಿಗಳಿಗೆ ಗೊತ್ತಿಲ್ಲದೇ ನದಿಯಲ್ಲಿ ಸ್ನಾನಕ್ಕೆ ಇಳಿಯುತ್ತಿದ್ದಾರೆ. ನದಿ ತೀರದ ಸ್ನಾನಘಟ್ಟ ಮತ್ತು ಧಾರ್ಮಿಕ ವಿಧಿವಿಧಾನ ಮಂಟಪದ ಬಳಿಯೂ ಭಕ್ತರು ಮತ್ತು ಪ್ರವಾಸಿಗರು ಓಡಾಡುತ್ತಿರುವುದು ಕಂಡು ಬಂದಿದೆ. ಪೊಲೀಸರ ಕಣ್ಣುತಪ್ಪಿಸಿ ಭಕ್ತರು ಹಾಗೂ ಪ್ರವಾಸಿಗರು ನದಿ ತೀರಕ್ಕೆ ತೆರಳುತ್ತಿದ್ದು, ಅಪಾಯವನ್ನು ಲೆಕ್ಕಿಸದೇ ಈ ಕಾರ್ಯ ಮಾಡುತ್ತಿದ್ದಾರೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ತುಂಗಭದ್ರಾ ಜಲಾಶಯದಿಂದ ನದಿಗೆ ಭಾರೀ ಪ್ರಮಾಣದಲ್ಲಿ ನೀರು ಹರಿಸಿರುವುದರಿಂದ ಮಂತ್ರಾಲಯ, ಹಂಪಿ ಸೇರಿದಂತೆ ನದಿ ತೀರದಲ್ಲಿರುವ ಧಾರ್ಮಿಕ ಕೇಂದ್ರಗಳಲ್ಲಿ ಭಕ್ತರು ಹಾಗೂ ಪ್ರವಾಸಿಗರು ಎಚ್ಚರಿಕೆಯಿಂದ ಇರಲು ಈಗಾಗಲೇ ಆಯಾ ಜಿಲ್ಲಾಡಳಿತಗಳು ಎಚ್ಚರಿಕೆ ಸಂದೇಶ ಕೂಡ ರವಾನಿಸಿವೆ. ಜಲಾಶಯಕ್ಕೆ ಒಮ್ಮೆಲೇ ನೀರು ಹರಿದು ಬಂದರೆ 32 ಕ್ರಸ್ಟ್‌ಗೇಟ್‌ಗಳಿಗೂ ಧಕ್ಕೆ ಆಗದಂತೆ ವೈಜ್ಞಾನಿಕ ತಳಹದಿ ಆಧಾರದ ಮೇಲೆ ತಾಂತ್ರಿಕ ಪರಿಣತ ಎಂಜಿನಿಯರ್‌ಗಳೊಂದಿಗೆ ಗೇಟ್‌ಗಳನ್ನೂ ಆಪರೇಟ್‌ ಮಾಡಲಾಗುತ್ತಿದೆ. ಇನ್ನೂ ಜಲಾಶಯ ನೆಚ್ಚಿರುವ ರೈತರು ಕೂಡ ತುಂಗಭದ್ರಾ ಜಲಾಶಯಕ್ಕೆ ಎಷ್ಟು ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಜಲಾಶಯದಿಂದ ನದಿಗೆ ಎಷ್ಟು ಪ್ರಮಾಣದಲ್ಲಿ ನೀರು ಹರಿಸಲಾಗಿದೆ ಎಂಬುದರ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ.

PREV
Read more Articles on

Recommended Stories

ಪಕ್ಷ ಭೇದ ಮರೆತು ಅಭಿವೃದ್ಧಿ ಕೆಲಸ ಮಾಡಿ
ಮುತ್ತೂರು ನಡುಗಡ್ಡೆಯಿಂದ 7 ಕುಟುಂಬಗಳ ಸ್ಥಳಾಂತರ