ಕನ್ನಡಪ್ರಭ ವಾರ್ತೆ ಆಲಮಟ್ಟಿ
ನಾವು ಕಾವೇರಿ ನದಿಯ ಒಂದು ಟಿಎಂಸಿ ಅಡಿ ನೀರಿಗೂ ಹೋರಾಟ ಮಾಡುತ್ತೇವೆ. ಆದರೆ, ಆಲಮಟ್ಟಿಯಲ್ಲಿ 123 ಟಿಎಂಸಿ ಅಡಿ ನೀರು ಸಂಗ್ರಹಿಸುತ್ತಿದ್ದರೂ, ಇದರ ಬಗ್ಗೆ ವ್ಯಾಪಕ ಪ್ರಚಾರ ಮತ್ತು ಯೋಜನೆ ಅನುಷ್ಠಾನದಲ್ಲಿ ವಿಳಂಬವಾಗಲು ಈ ಭಾಗದ ಜನರು ಗಟ್ಟಿ ಧ್ವನಿ ಎತ್ತದೇ ಇರುವುದು ಕಾರಣ ಎಂದು ಸಂಗೀತ ನಿರ್ದೇಶಕ ನಾದಬ್ರಹ್ಮ ಹಂಸಲೇಖ ಹೇಳಿದರು.ಶುಕ್ರವಾರ ಆಲಮಟ್ಟಿ ಮಯೂರ ಕೃಷ್ಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂರು ರಾಜ್ಯಗಳ ಜನತೆಯ ದಾಹ ನೀಗಿಸುವ ಕೃಷ್ಣಾ ನದಿ ರಾಜ್ಯದಲ್ಲಿ ಉದ್ದವಾಗಿ ಹರಿದು ಆಲಮಟ್ಟಿ ಅಣೆಕಟ್ಟಿನಲ್ಲಿ 123 ಟಿಎಂಸಿ ನೀರು ಸಂಗ್ರಹಿಸಿ, ಲಕ್ಷಾಂತರ ಎಕರೆ ಭೂಮಿಗೆ ನೀರುಣಿಸುತ್ತಿದೆ ಎಂದರು.
ಕೃಷ್ಣಾ ನದಿ, ಲಾಲಬಹಾದ್ದೂರ್ ಆಲಮಟ್ಟಿ ಬಗ್ಗೆ ನಾಲ್ಕು ಹಾಡುಗಳನ್ನು ರಚಿಸುತ್ತಿದ್ದೇನೆ. ಬೆಂಗಳೂರಿಗೆ ಹೋದ ನಂತರ ಈ ಭಾಗದ ಚಿತ್ರೀಕರಣಕ್ಕೆ ತಂಡ ಕಳಿಸಿ, ಈ ಭಾಗದ ಮಹತ್ವದ ಬಗ್ಗೆ ತಿಳಿಸಲು ದೊಡ್ಡ ದೊಡ್ಡ ಚಿತ್ರತಾರೆಯರನ್ನು ಕರೆಸಿ ಹಾಡುಗಳನ್ನು ಬಿಡುಗಡೆಗೊಳಿಸಲಾಗುವುದು. ಆಲಮಟ್ಟಿ ಜಲಾಶಯ ನಿರ್ಮಾಣವಾಗಿ 50 ವರ್ಷಗಳು ಗತಿಸಿವೆ. ಮುಖ್ಯಮಂತ್ರಿಗಳು ಈ ಪ್ರದೇಶಕ್ಕೆ ಆಗಮಿಸಲಿದ್ದಾರೆ. ಮುಖ್ಯಮಂತ್ರಿಯವರಿಗೆ ಬಸವಣ್ಣನವರ ಕುರಿತು ಈ ಭಾಗದ ಜನರು ಗಟ್ಟಿ ಧ್ವನಿಯಲ್ಲಿ ಹೇಳಬೇಕು ಎಂದರು.ಇಲ್ಲಿ ಸೀತಾವನ ನಿರ್ಮಿಸುತ್ತಿರುವುದು ಒಳ್ಳೆಯ ವಿಚಾರ. ಶ್ರೀ ರಾಮನು ಮಹಾರಾಜರಾಗಿದ್ದರು, ಬಸವಣ್ಣನವರು ಸಾಮಾನ್ಯ ಜನರ ಧ್ವನಿಯಾಗಿದ್ದರು, ನುಡಿದಂತೆ ನಡೆದವರು, ಅನುಭವ ಮಂಟಪ ಸ್ಥಾಪಿಸಿದವರು. ಬಸವಣ್ಣನವರ ಬಾಲ್ಯ, ವಿದ್ಯಾಭ್ಯಾಸ, ಮಂತ್ರಿ ಪದವಿ, ಕಲ್ಯಾಣ ಕ್ರಾಂತಿ ಹೀಗೆ ಬಸವಣ್ನನವರ ಚರಿತ್ರೆಯನ್ನು ಈ ಭಾಗದಲ್ಲಿ ಪ್ರಚುರಪಡಿಸುವುದು ಅಗತ್ಯವಾಗಿದೆ. ಇಲ್ಲಿ ಬಸವಣ್ಣನವರ ಚರಿತ್ರೆ ಸಾರುವ ಒಂದು ಉದ್ಯಾನ ನಿರ್ಮಿಸುವುದು ಅಗತ್ಯವಾಗಿದೆ ಎಂದರು.
ದೇಶದಲ್ಲಿಯೇ ಜಾನಪದ ವಿಶ್ವವಿದ್ಯಾಲಯ ಇರುವುದು ನಮ್ಮ ರಾಜ್ಯದಲ್ಲಿ ಮಾತ್ರ. ಅದರ ಸಮಗ್ರ ಅಭಿವೃದ್ಧಿಗೆ ಈ ಹಿಂದಿನ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಲ್ಲಿ ವಿನಂತಿಸಲಾಗಿತ್ತು. ಈಗ ಮತ್ತೆ ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಮನವಿ ಮಾಡಲಾಗುವುದು ಎಂದು ಹೇಳಿದರು.