ಕನ್ನಡಪ್ರಭ ವಾರ್ತೆ ಮಂಗಳೂರು
ಮಲಾರ್ ಅರಸ್ತಾನದ ಮದ್‌ರ ಪ್ರಕಾಶನ ಪ್ರಕಟಿಸಿದ, ಪತ್ರಕರ್ತ ಹಂಝ ಮಲಾರ್ ಅವರು ಬ್ಯಾರಿ ಭಾಷೆಯಲ್ಲಿ ಬರೆದ ಫೇಸ್‌ಬುಕ್ (ಕಥಾ ಸಂಕಲನ), ಬಿಂದಾಸ್ (ನಾಟಕ ಸಂಕಲನ), ಪಾಲುಂ- ಬಾಲೆ (ಅಂಕಣ ಬರಹಗಳ ಸಂಕಲನ) ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ ಬುಧವಾರ ನಗರದ ಸಹೋದಯ ಸಭಾಂಗಣದಲ್ಲಿ ನಡೆಯಿತು.ಫೇಸ್‌ಬುಕ್ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದ ಬ್ಯಾರಿ ಅಕಾಡಮಿಯ ಅಧ್ಯಕ್ಷ ಉಮರ್ ಯು.ಎಚ್., ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿಯ ಅಭಿವೃದ್ಧಿ ಮತ್ತು ಅವುಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಬ್ಯಾರಿ ಅಕಾಡಮಿಯ ಜತೆ ಸಮುದಾಯದವರು ಕೈ ಜೋಡಿಸಬೇಕು ಎಂದು ಕರೆ ನೀಡಿದರು.ಬಿಂದಾಸ್ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಮೇಲ್ತೆನೆಯ ಅಧ್ಯಕ್ಷ ಹಾಜಿ ವಿ. ಇಬ್ರಾಹಿಂ ನಡುಪದವು ಭಾಷಾ ಅಕಾಡೆಮಿಗಳು ಮಾಡುವ ಕೆಲಸಗಳನ್ನು ಹಂಝ ಮಲಾರ್ ವೈಯಕ್ತಿಕವಾಗಿ ಮಾಡುತ್ತಿದ್ದಾರೆ ಎಂದರು. ಪಾಲುಂ ಬಾಲೆ ಪುಸ್ತಕವನ್ನು ಬಿಡುಡೆಗೊಳಿಸಿ ಮಾತನಾಡಿದ ಬ್ಯಾರಿ ವಾರ್ತೆಯ ಉಪಸಂಪಾದಕ ಬಿ.ಎ. ಮುಹಮ್ಮದ್ ಅಲಿ ಕಮ್ಮರಡಿ, ಭಾಷೆ ಮತ್ತು ಸಾಹಿತ್ಯದ ಮೂಲಕ ಭಾಷಾ ಅಕಾಡೆಮಿಗಳು ಶಾಲಾ ಕಾಲೇಜುಗಳಲ್ಲಿ ಸೌಹಾರ್ದದ ವಾತಾವರಣ ನಿರ್ಮಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಸಾಹಿತ್ಯ ಅಕಾಡಮಿಯು ಪ್ರಮುಖ ಪಾತ್ರ ವಹಿಸಬೇಕು ಎಂದು ಕರೆ ನೀಡಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಮೇಲ್ತೆನೆಯ ಗೌರವಾಧ್ಯಕ್ಷ ಆಲಿಕುಂಞಿ ಪಾರೆ, ಬ್ಯಾರಿ ಸಾಹಿತ್ಯ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಹಂಝ ಮಲಾರ್ ತಾನೂ ಬೆಳೆಯುವುದರೊಂದಿಗೆ ಇತರರಿಗೆ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ಎಂದರು.
ಮದನಿ ಪಿಯು ಕಾಲೇಜಿನ ನಿವೃತ್ತ ಪ್ರಾಂಶುಪಾಲ ಇಸ್ಮಾಯಿಲ್ ಮಾಸ್ಟರ್, ಹಿರಿಯ ಸಾಹಿತಿ ಅಬ್ದುಲ್ ರಹ್‌ಮಾನ್ ಕುತ್ತೆತ್ತೂರು ಅತಿಥಿ ಭಾಷಣ ಮಾಡಿದರು. ಪತ್ರಕರ್ತ ಹಂಝ ಮಲಾರ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಲೇಖಕ ಇಸ್ಮತ್ ಪಜೀರ್ ನಿರೂಪಿಸಿದರು. ಪತ್ರಕರ್ತ ಬಶೀರ್ ಕಲ್ಕಟ್ಟ ವಂದಿಸಿದರು.