ಅನಕ್ಷರತೆ ತೊಲಗಿಸಲು ಶ್ರಮಿಸಿದ ಹಾನಗಲ್ಲ ಲಿಂ. ಕುಮಾರ ಶಿವಯೋಗಿ: ಡಾ. ಅಲ್ಲಮಪ್ರಭು ಸ್ವಾಮೀಜಿ

KannadaprabhaNewsNetwork | Published : Feb 20, 2025 12:45 AM

ಸಾರಾಂಶ

ಹಾನಗಲ್ಲ ಲಿಂ. ಕುಮಾರಶಿವಯೋಗಿಗಳ ಸೇವೆಯಿಂದ ಪುಣ್ಯ ಪಾವನವಾಗಿದೆ. ಈ ನೆಲದಲ್ಲಿ ನಿಂತು ಬದುಕು ಕಟ್ಟಿಕೊಳ್ಳುವವರು ನಿಜವಾದ ಪುಣ್ಯವಂತರು.

ಹಾನಗಲ್ಲ: ಬಡತನ, ಅನಕ್ಷರತೆ ತೊಲಗಿಸಲು ನಿರಂತರವಾದಿ ಶ್ರಮಿಸಿದ ಹಾನಗಲ್ಲ ಲಿಂ. ಕುಮಾರ ಶಿವಯೋಗಿಗಳು ಎಲ್ಲರ ಕಷ್ಟ ನಿವಾರಣೆಗೆ ಗಟ್ಟಿಯಾಗಿ ನಿಂತ ಶಿವಯೋಗಿ ಎಂದು ಬೆಳಗಾವಿಯ ನಾಗನೂರು ರುದ್ರಾಕ್ಷಿಮಠದ ಡಾ. ಅಲ್ಲಮಪ್ರಭು ಸ್ವಾಮಿಗಳು ತಿಳಿಸಿದರು.ಇಲ್ಲಿನ ವಿರಕ್ತಮಠದ ಆವರಣದಲ್ಲಿ ಲಿಂ. ಹಾನಗಲ್ಲ ಕುಮಾರ ಶಿವಯೋಗಿಗಳ 95ನೇ ಪುಣ್ಯ ಸ್ಮರಣೋತ್ಸವದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಾನಗಲ್ಲ ಲಿಂ. ಕುಮಾರಶಿವಯೋಗಿಗಳ ಸೇವೆಯಿಂದ ಪುಣ್ಯ ಪಾವನವಾಗಿದೆ. ಈ ನೆಲದಲ್ಲಿ ನಿಂತು ಬದುಕು ಕಟ್ಟಿಕೊಳ್ಳುವವರು ನಿಜವಾದ ಪುಣ್ಯವಂತರು. ಸಮಾಜಕ್ಕೆ ಮಾತ್ರವಲ್ಲ ಶಿವಯೋಗಿಗಳಿಗೂ ತಾಯಿಯಾಗಿಯೂ ಶಿವಯೋಗ ಮಂದಿರ ನಿರ್ಮಿಸಿ, ವೀರಶೈವ ಮಹಾಸಭೆಯ ಮೂಲಕ ಅತ್ಯುತ್ತಮ ಸಂಘಟನೆ ಹುಟ್ಟು ಹಾಕಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅವಮಾನ ಸಹಿಸಿ ಸ್ವಾಭಿಮಾನದ ಜಾಗೃತಿಯಾಗಿ ಇಡೀ ನಾಡು ಸನ್ಮಾನಿಸುವಂತಹ ದೊಡ್ಡ ವ್ಯಕ್ತಿತ್ವವಾಗಿ ಬೆಳೆದು ಬೆಳಗಿದವರು ಎಂದರು.ಹಾನಗಲ್ಲ ಶಾಸಕ ಶ್ರೀನಿವಾಸ ಮಾನೆ ಮಾತನಾಡಿ, ಸಮಾನತೆಗೆ ದೊಡ್ಡ ಸಂದೇಶ ನೀಡಿದ ಲಿಂ. ಕುಮಾರ ಶಿವಯೋಗಿಗಳ ಚಿಂತನೆಗಳು ಸಾಕಾರವಾಗಬೇಕಾಗಿದೆ. ಸಮಾಜದಲ್ಲಿ ದಟ್ಟವಾಗಿ ಬೆಳೆಯುತ್ತಿರುವ ಈರ್ಷೆ, ವೈರತ್ವ, ವೈಮನಸ್ಸುಗಳು ದೂರವಾಗಬೇಕಾಗಿದೆ. ಮಾನವೀಯ ಮೌಲ್ಯಗಳನ್ನು ನೀಡಿದ ಬಸವಣ್ಣನವರ ನಾಡಿನಲ್ಲಿ ಮತ್ತೆ ಜಾಗೃತಿಯ ಕಾರ್ಯ ನಡೆಯಬೇಕಾಗಿದೆ ಎಂದರು.ಹಾವೇರಿ ವಿಶ್ವವಿದ್ಯಾಲಯದ ಕುಲಸಚಿವೆ ವಿಜಯಲಕ್ಷ್ಮಿ ತಿರ್ಲಾಪೂರ ಮಾತನಾಡಿ, ಪೌರೋಹಿತ್ಯ ದಲ್ಲಾಳಿಗಳಿಲ್ಲದ ಶರಣ ಧರ್ಮ ಎಲ್ಲರ ಮನೆಯ ಮಾತಾಗಬೇಕು. ಬಸವ ಚಿಂತನೆ ಜಗದ ತತ್ವವಾಗಬೇಕು. ವಚನ ಸಾಹಿತ್ಯ ದೊಡ್ಡ ಸಂಪತ್ತು. 12ನೇ ಶತಮಾನದಲ್ಲಿಯೇ ಮಹಿಳೆಯರು, ತೃತೀಯ ಲಿಂಗಿಗಳು, ಅಸ್ಪೃಶ್ಯರಿಗೆ ಸಮಾನತೆಯ ಅವಕಾಶ ನೀಡಿದ ಶರಣ ಧರ್ಮ ನಿಜವಾಗಿಯೂ ವಿಶ್ವಧರ್ಮವಾಗಿದೆ. ಈ ಜಗಕ್ಕೆ ವಚನ ಸಾಹಿತ್ಯ ದೊಡ್ಡ ಸಂಪತ್ತಾಗಿದ್ದು, ಪ್ರತಿ ಮನೆಯಲ್ಲಿ ವಚನಗಳ ಪಠಣ ನಡೆಯಲಿ ಎಂದರು.ಹುಬ್ಬಳ್ಳಿ ಮೂರುಸಾವಿರಮಠದ ಗುರುಸಿದ್ದರಾಜಯೋಗೀಂದ್ರ ಸ್ವಾಮಿಗಳ ಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಡೆ ಸಂಸ್ಥಾನ ಮಠದ ಕುಮಾರ ಕೆಂಪಿನ ಸಿದ್ಧವೃಷಬೇಂದ್ರ ಸ್ವಾಮೀಜಿಗೆ ಗೌರವ ಸಲ್ಲಿಸಲಾಯಿತು. ಬಿಜಕಲ್ ಶಿವಲಿಂಗ ಸ್ವಾಮೀಜಿ, ಕೂಡಲದ ಗುರುಮಹೇಶ್ವರ ಸ್ವಾಮಿಗಳು, ಹೋತನಹಳ್ಳಿ ಸಿದ್ಧಾರೂಢ ಮಠದ ಶಂಕರಾನಂದ ಸ್ವಾಮಿಗಳು, ಮೂಲೆಗದ್ದೆ ಚನ್ನಬಸವ ಸ್ವಾಮಿಗಳು, ಹೇರೂರು ಗುಬ್ಬಿ ನಂಜುಂಡೇಶ್ವರ ಸ್ವಾಮಿಗಳು ಸ್ಮರಣೋತ್ಸವದಲ್ಲಿ ಪಾಲ್ಗೊಂಡಿದ್ದರು.ಸಂಗೀತ ಕಲಾವಿದ ಶಿವಬಸಯ್ಯ ಗಡ್ಡದಮಠ ಪ್ರಾರ್ಥನೆ ಹಾಗೂ ವಚನಗಳನ್ನು ಹಾಡಿದರು. ಶಿಕ್ಷಕ ಸಿ.ಎಸ್. ವಡ್ಡರ ಸ್ವಾಗತಿಸಿದರು. ಶಿಕ್ಷಕಿ ಸುನಿತಾ ಉಪ್ಪಿನ ನಿರೂಪಿಸಿದರು.

Share this article