ಮಳವಳ್ಳಿ : ಪೆನ್ ಡ್ರೈವ್ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಒತ್ತಾಯಿಸಿ ಜಾತ್ಯಾತೀತ ಜನತಾದಳದ ಕಾರ್ಯಕರ್ತರು ಪಟ್ಟಣದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದರು.
ಪಟ್ಟಣದ ತಾಪಂ ಕಚೇರಿ ಬಳಿಯಿಂದ ಮಾಜಿ ಶಾಸಕ ಡಾ.ಕೆ.ಅನ್ನದಾನಿ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು, ಮಳವಳ್ಳಿ - ಮೈಸೂರು ಹೆದ್ದಾರಿ ಮೂಲಕ ಆನಂತ್‌ರಾಂ ವೃತ್ತಕ್ಕೆ ಆಗಮಿಸಿದರು.
ನಂತರ ಅನಂತ್ ರಾಂ ವೃತ್ತದಲ್ಲಿ ಕಾಂಗ್ರೆಸ್ ಸರ್ಕಾರ, ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಂಸದ ಎಲ್ .ಆರ್ .ಶಿವರಾಮೇಗೌಡರ ವಿರುದ್ಧ ಸಿಡಿ ಮಾಸ್ಟರ್ ಎಂದು ಧಿಕ್ಕಾರದ ಘೋಷಣೆ ಕೂಗಿದರು. ನಂತರ ಡಿಕೆಶಿ ಹಾಗೂ ಎಲ್ ಆರ್ ಎಸ್ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಡಾ.ಕೆ.ಅನ್ನದಾನಿ, ಪೆನ್ ಡ್ರೈವ್ ಪ್ರಕರಣ ಸಂಬಂಧ ಕಾಂಗ್ರೆಸ್ ಸರ್ಕಾರದ ಅಣತೆಯಂತೆ ಎಸ್‌ಐಟಿ ಕೆಲಸ ನಿರ್ವಹಿಸುತ್ತಿದೆ. ಕೂಡಲೇ ಪ್ರಕರಣದ ಸತ್ಯಾಸತ್ಯತೆ ತಿಳಿಯಲು ಸಿಬಿಐಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು.
ಪೆನ್ ಡ್ರೈವ್ ಹಂಚಿ ರಾಜ್ಯದ ಹೆಣ್ಣುಮಕ್ಕಳ ಮಾನ- ಮರ್ಯಾದೆಯನ್ನು ದೇಶ- ವಿದೇಶಗಳಲ್ಲಿ ಹಂಚಿರುವುದು ಖಂಡನೀಯ. ಸರ್ಕಾರ ಪೆನ್ ಡ್ರೈವ್ ಹಂಚಿದವರ ಮೇಲೆ ಕ್ರಮ ಕೈಗೊಳ್ಳದೇ ದ್ವೇಷ ರಾಜಕಾರಣ ಮಾಡುತ್ತಿದೆ ಎಂದು ದೂರಿದರು.
ರಾಜ್ಯದಲ್ಲಿ ಜನ- ಜಾನುವಾರುಗಳಿಗೆ ಕುಡಿಯಲು ನೀರಿಲ್ಲದೇ, ರೈತರ ಬೆಳೆಗೆ ನೀರು ಹರಿಸದ ಕಾರಣ ಸಂಕಷ್ಟದಲ್ಲಿದ್ದಾರೆ. ಕೃಷಿಗೆ ನೀರು ಬಿಡಲು ಯೋಗ್ಯತೆ ಇಲ್ಲದ ಸರ್ಕಾರ ಪೆನ್‌ಡ್ರೈವ್ ವಿಚಾರ ಎತ್ತಿಕೊಂಡು ಜನರ ದಿಕ್ಕನ್ನು ತಪ್ಪಿಸಲು ಹೊರಟಿದೆ ಎಂದು ಕಿಡಿಕಾರಿದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ ಎಚ್ .ಡಿ.ದೇವೇಗೌಡರ ಕುಟುಂಬವನ್ನು ರಾಜಕೀಯವಾಗಿ ನಾಶ ಮಾಡುವ ಹುನ್ನಾರ ನಡೆಸುತ್ತಿದ್ದಾರೆ. ಆದರೆ, ಅದು ಅವರ ಕತ್ತಿಗೆ ಸುತ್ತಿಕೊಳ್ಳುತ್ತದೆ ಎನ್ನವುದನ್ನು ಮರೆಯಬಾರದು. ರಾಜಕೀಯವಾಗಿ ಯುದ್ದ ಮಾಡಬೇಕೇ ಹೊರತು ಸಿಕಂಡಿ ರಾಜಕಾರಣ ಮಾಡಬಾರದು ಎಂದು ಆಗ್ರಹಿಸಿದರು.
ಮಾಜಿ ಸಚಿವ ಎಚ್.ಡಿ.ರೇವಣ್ಣ ವಿರುದ್ಧ ಮಹಿಳೆ ಕಿಡ್ನಾಪ್ ಕೇಸ್ ಹಾಕಿ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬವನ್ನು ಜೈಲಿಗಟ್ಟುವ ದುರುದ್ದೇಶದಿಂದ ಕಾಂಗ್ರೆಸ್ ಹುನ್ನಾರ ನಡೆಸಿದೆ. ಆದರೆ ಮಹಿಳೆ ಕಿಡ್ನಾಪ್ ಮಾಡಿಲ್ಲ ಎಂದು ಸತ್ಯವನ್ನು ಹೇಳಿದ್ದಾರೆ. ಪ್ರಕರಣ ಸತ್ಯ ಹೇಳಿದ ವಕೀಲ ದೇವರಾಜೇಗೌಡರನ್ನು ಕೂಡ ಬಂಧಿಸಿ ಪ್ರಕರಣವನ್ನು ದಿಕ್ಕು ತಪಿಸಲು ಹೊರಟಿದ್ದಾರೆ ಎಂದು ಆರೋಪಿಸಿದರು.
ಮಾಜಿ ಸಂಸದ ಶಿವರಾಮೇಗೌಡರಂತಹ ಕುತಂತ್ರಿಗಳನ್ನು ಜೊತೆಯಲ್ಲಿಟ್ಟುಕೊಂಡು ದೇವೇಗೌಡರು, ಕುಮಾರಸ್ವಾಮಿ ಅವರ ಮಸಿ ಬಳಿಯಲು ಮುಂದಾಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ರಾಜಕೀಯ ಮಾಡಲು ಅನರ್ಹ ಎಂದು ಲೇವಡಿ ಮಾಡಿದರು.
ಕಾಂಗ್ರೆಸ್ ಪಕ್ಷ, ಡಿಸಿಎಂ ಶಿವಕುಮಾರ್ ಮೊದಲು ಮೇಕೆದಾಟು ಕಟ್ಟಿಸಿ ಮಳವಳ್ಳಿ, ಕನಕಪುರ ಗ್ರಾಮಾಂತರ ಪ್ರದೇಶಗಳಿಗೆ ನೀರು ಕೊಡಿ, ಹಾಗೆಯೇ ಬೆಂಗಳೂರಿಗರಿಗೆ ಕುಡಿಯಲು ನೀರು ಕೊಡಿ. ಅದನ್ನು ಬಿಟ್ಟು ಲಕ್ಷಾಂತರ ಪೆನ್ ಡ್ರೈವ್ ಹಂಚಿರುವುದು ಖಂಡನೀಯ. ನೀವು ಎಷ್ಟೇ ಆರೋಪಗಳನ್ನು ಮಾಡಿದರೂ ದೇವೇಗೌಡರ ಒಂದು ಕೂದಲನ್ನೂ ಅಲುಗಾಡಿಸಲು ಸಾಧ್ಯವಿಲ್ಲ ಎಂದು ಸವಾಲು ಹಾಕಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಡಿ. ರಮೇಶ್ ಮಾತನಾಡಿ, ಮಾಜಿ ಪ್ರಧಾನಿ ದೇವೇಗೌಡರ ರಾಜಕೀಯ ಜೀವನಕ್ಕೆ ಮಸಿ ಬಳೆಯಲು ಕಾಂಗ್ರೆಸ್ ಸರ್ಕಾರ ಹುನ್ನಾರ ನಡೆಸುತ್ತಿರುವುದು ಜನರಿಗೆ ಅರ್ಥವಾಗುತ್ತಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಜನರೇ ಬುದ್ದಿ ಕಲಿಸಲಿದ್ದಾರೆ. ಅಧಿಕಾರದ ಲಾಭ ಪಡೆದು ಬಾಯಿಗೆ ಬಂದಂತೆ ಮಾತನಾಡಿರುವ ಶಿವರಾಮೇಗೌಡರ ನಡೆಗೆ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಜೆಡಿಎಸ್ ಯುವ ಘಟಕದ ಜಿಲ್ಲಾಧ್ಯಕ್ಷ ರವಿ ಕಂಸಾಗರ, ಪುರಸಭೆ ಸದಸ್ಯ ನಂದಕುಮಾರ್ ಸೇರಿದಂತೆ ನೂರಾರು ಕಾರ್ಯಕರ್ತರು, ಮಹಿಳೆಯರು ಭಾಗವಹಿಸಿದ್ದರು.