ಮಾಗಳ ಸರ್ಕಾರಿ ಶಾಲೆಗೆ ಕೆನರಾ ಬ್ಯಾಂಕಿನಿಂದ ಶುದ್ಧ ನೀರಿನ ಘಟಕ ಹಸ್ತಾಂತರ

KannadaprabhaNewsNetwork | Published : Apr 13, 2024 1:14 AM

ಸಾರಾಂಶ

ಮಾಗಳ ಪಿಎಂಶ್ರೀ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 680ಕ್ಕೂ ಹೆಚ್ಚು ಮಕ್ಕಳು ಅಭ್ಯಾಸ ಮಾಡುತ್ತಾರೆ. ಶಾಲಾ ಮಕ್ಕಳಿಗೆ ಶುದ್ಧ ಕುಡಿವ ನೀರಿನ ಸಮಸ್ಯೆ ಇತ್ತು. ಈಗ ಬಗೆಹರಿದಿದೆ

ಹೂವಿನಹಡಗಲಿ: ತಾಲೂಕಿನ ಮಾಗಳ ಗ್ರಾಮದ ಪಿಎಂ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಕೆನರಾ ಬ್ಯಾಂಕಿನ ಸಿಎಸ್‌ಆರ್‌ ಅನುದಾನದಲ್ಲಿ ಶುದ್ಧ ಕುಡಿವ ನೀರಿನ ಘಟಕ ಹಸ್ತಾಂತರಿಸಲಾಯಿತು.ಈ ಕುರಿತು ಕೆನರಾ ಬ್ಯಾಂಕ್‌ ಬೆಂಗಳೂರಿನ ಉಪ ಮಹಾ ಪ್ರಬಂಧಕ ಪಾಶ್ವನಾಥ ಬಸ್ತಿ ಕಾಮಗಾರಿ ಪರಿಶೀಲನೆ ಮಾಡಿದ ಬಳಿಕ ಮಾತನಾಡಿ, ಕೆನರಾ ಬ್ಯಾಂಕ್ ಕೇವಲ ಸಾಲ ನೀಡುವುದು ಅಷ್ಟೇ ಅಲ್ಲದೇ ಹಲವಾರು ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಬಂದಿದೆ. ಈ ನಿಟ್ಟಿನಲ್ಲಿ ಮಾಗಳ ಸರ್ಕಾರಿ ಶಾಲೆಯಲ್ಲಿ 680ಕ್ಕೂ ಹೆಚ್ಚು ಮಕ್ಕಳು ಅಭ್ಯಾಸ ಮಾಡುತ್ತಿದ್ದು, ಈವರೆಗೂ ಈ ಮಕ್ಕಳಿಗೆ ಶುದ್ಧ ಕುಡಿಯುವ ನೀರಿನ ಕೊರತೆ ಕಾಡುತ್ತಿತ್ತು. ಇದರಿಂದ ಮಕ್ಕಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಾರದೆಂಬ ಕಾರಣಕ್ಕಾಗಿ, ತಾವು ಅಭ್ಯಾಸ ಮಾಡಿದ ಶಾಲೆಗೆ ಬ್ಯಾಂಕಿನ ₹4.98 ಲಕ್ಷ ಸಿಎಸ್‌ಆರ್‌ ಅನುದಾನ ನೀಡಿ ಶುದ್ಧ ಕುಡಿವ ನೀರಿನ ಘಟಕ ನೀಡಲಾಗಿದೆ ಎಂದರು.

ಕೆನರಾ ಬ್ಯಾಂಕ್‌ ರೈತರ ಮಕ್ಕಳ ಶಿಕ್ಷಣ ಮತ್ತು ಇತರೆ ಸಾಲಗಳನ್ನು ನೀಡುತ್ತಿದೆ, ಮುಂಬರುವ ದಿನಗಳಲ್ಲಿ ಪ.ಜಾ, ಪ.ಪಂ ದ ಪ್ರಾಥಮಿಕ ಶಾಲೆಯ 5, 6 ಮತ್ತು 7ನೇ ತರಗತಿಯಲ್ಲಿ ಮೆರಿಟ್‌ ಪಡೆದ ವಿದ್ಯಾರ್ಥಿನಿಯರಿಗೆ 3 ಸಾವಿರ ಹಾಗೂ 8 ಮತ್ತು 9ನೇ ತರಗತಿಯಲ್ಲಿ ಮೆರಿಟ್‌ ಪಡೆದಿರುವ ವಿದ್ಯಾರ್ಥಿನಿಯರಿಗೆ 5 ಸಾವಿರ ರುಗಳ ಹಣ ನೀಡಿ ಬಾಲಕಿಯರ ಶಿಕ್ಷಣಕ್ಕಾಗಿ ಶ್ರಮಿಸುತ್ತಿದೆ. ಈ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಹೇಳಿದರು.

ಶಾಲಾ ಮುಖ್ಯ ಶಿಕ್ಷಕ ಡಿ.ವಿರೂಪಣ್ಣ ಮಾತನಾಡಿ, ಮಾಗಳ ಪಿಎಂಶ್ರೀ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 680ಕ್ಕೂ ಹೆಚ್ಚು ಮಕ್ಕಳು ಅಭ್ಯಾಸ ಮಾಡುತ್ತಾರೆ. ಶಾಲಾ ಮಕ್ಕಳಿಗೆ ಶುದ್ಧ ಕುಡಿವ ನೀರಿನ ಸಮಸ್ಯೆ ಇತ್ತು. ಈಗ ಬಗೆಹರಿದಿದೆ ಎಂದರು.

ಬ್ಯಾಡಗೇರಿ ಶಾಲೆ ಮುಖ್ಯ ಶಿಕ್ಷಕ ಎಂ.ಜಯಣ್ಣ, ಎಸ್‌ಡಿಎಂಸಿ ಅಧ್ಯಕ್ಷ ಎಲ್‌.ಮಂಜುನಾಥ, ಭರತೇಶ ಬಸ್ತಿ, ಡಿ.ರಮೇಶ, ಶೀತಲ್‌ ಬಸ್ತಿ, ಶಿಕ್ಷಕರಾದ ಶರಣಪ್ಪ, ಮಾಲತೇಶ, ಮಾದೇಶ್ವರ ಇದ್ದರು.

Share this article