ಸರ್ಕಾರದ ಸಿಎಸ್‌ ಮನೆ ಹಟ್ಟಿ ಸೇರಿದ ಸುಳ್ಯದ ಮಲೆನಾಡು ಗಿಡ್ಡ ಗೋ ತಳಿ!

KannadaprabhaNewsNetwork |  
Published : Sep 01, 2024, 01:46 AM IST
11 | Kannada Prabha

ಸಾರಾಂಶ

ತ್ತೀಚೆಗೆ ಕರ್ನಾಟಕ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರು ಮನೆಯ ಪಕ್ಕ ಹೊಸದಾಗಿ ಹಟ್ಟಿಯೊಂದನ್ನು ನಿರ್ಮಿಸಿದ್ದು, ಅಲ್ಲಿ ಮಲೆನಾಡು ಗಿಡ್ಡ ತಳಿಯ ಜಾನುವಾರು ಸಾಕಲು ನಿರ್ಧರಿಸಿದ್ದರು.

ಕನ್ನಡಪ್ರಭ ವಾರ್ತೆ ಸುಳ್ಯ

ಸುಳ್ಯದ ಕೃಷಿಕರೊಬ್ಬರ ಹಟ್ಟಿಯಿಂದ ಮಲೆನಾಡು ಗಿಡ್ಡ ಗೋತಳಿಯೊಂದು ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿಯವರ ಮನೆ ಹಟ್ಟಿ ಸೇರಿದೆ. ಆ ಮೂಲಕ ಮಲೆನಾಡು ಗಿಡ್ಡ ಗೋತಳಿಯ ಸಂರಕ್ಷಣೆ ಮತ್ತು ಸಂವರ್ಧನೆ ಅಭಿಯಾನದಲ್ಲಿ ಗೌರವದ ಮೈಲಿಗಲ್ಲು ಸ್ಥಾಪಿತವಾಗಿದೆ.

ಅಳಿವಿನಂಚಿಗೆ ಹೋಗುತ್ತಿರುವ ದೇಸೀ ಜಾನುವಾರು ತಳಿ ಮಲೆನಾಡು ಗಿಡ್ಡದ ಉಳಿವಿಗಾಗಿ ರಾಮಚಂದ್ರಾಪುರ ಮಠದಿಂದ ಕಾರ್ಯಕ್ರಮಗಳು ನಡೆದಿತ್ತು. ಇತ್ತ ಈ ಭಾಗದ ಕೃಷಿಕರಾದ ಅಲೆಕ್ಕಾಡಿಯ ಅಕ್ಷಯ ಆಳ್ವ, ಎಣ್ಮೂರಿನ ಪ್ರಸನ್ನ ಭಟ್ ಮೊದಲಾದವರು ಮಲೆನಾಡು ಗಿಡ್ಡ ಜಾನುವಾರುಗಳನ್ನು ಸಾಕುತ್ತಿದ್ದರು. ಇದನ್ನು ಮತ್ತಷ್ಟು ಬೆಳೆಸುವ ದೃಷ್ಟಿಯಿಂದ ಈ ಭಾಗದಲ್ಲಿ ಸಮಾನಮನಸ್ಕ ಕೃಷಿಕರು ಜೊತೆ ಸೇರಿ ಸಂರಕ್ಷಣೆ ಮತ್ತು ಸಂವರ್ಧನೆಯ ಹಿನ್ನೆಲೆಯಲ್ಲಿ ವಾಟ್ಸಾಪ್ ಗ್ರೂಪ್ ಒಂದನ್ನು ರಚಿಸಿ ಕಾರ್ಯಪ್ರರ್ವತರಾಗಿ ಅಭಿಯಾನ ಶುರು ಮಾಡಿದರು. ಸಾಕುವವರಿಗೆ ಹಸುಗಳನ್ನು ನೀಡ ತೊಡಗಿದರು. ಸದಾಶಿವ ಭಟ್ ಮರಿಕೆ ಸೇರಿದಂತೆ ಹಲವು ಕೃಷಿ ತಜ್ಞರು ಜತೆಯಾದರು.

ಇತ್ತೀಚೆಗೆ ಕರ್ನಾಟಕ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರು ಮನೆಯ ಪಕ್ಕ ಹೊಸದಾಗಿ ಹಟ್ಟಿಯೊಂದನ್ನು ನಿರ್ಮಿಸಿದ್ದು, ಅಲ್ಲಿ ಮಲೆನಾಡು ಗಿಡ್ಡ ತಳಿಯ ಜಾನುವಾರು ಸಾಕಲು ನಿರ್ಧರಿಸಿದ್ದರು.

ಶಾಲಿನಿ ಹಾಗೂ ಅವರ ಪತಿ ರಜನೀಶ್ ಗೋಯೆಲ್‌ ಅವರು ಹಲವು ವರ್ಷಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಆಡಳಿತ ಹುದ್ದೆಗಳಲ್ಲಿ ಕೆಲಸ ನಿರ್ವಹಿಸಿರುವ ಕಾರಣ ಸಹಜವಾಗಿ ಈ ಭಾಗದ ಪರಿಚಯವಿತ್ತು. ಈ ಹಿನ್ನೆಲೆಯಲ್ಲಿ ಕೊಯಿಲ ಪಶುಪಾಲನಾ ಕೇಂದ್ರವನ್ನು ಸಂಪರ್ಕಿಸಿ ಮಲೆನಾಡು ತಳಿಯ ಬಗ್ಗೆ ವಿಚಾರಿಸಿದ್ದರು. ಆದರೆ ಅಲ್ಲಿಂದ ರೈತರ ಅಗತ್ಯಗಳಿಗೆ ಮಾತ್ರ ಜಾನುವಾರು ಕೊಂಡೊಯ್ಯುವ ಸಾಧ್ಯತೆ ಇತ್ತು. ಹೀಗಾಗಿ ಅಲ್ಲಿಯ ಉಪನಿರ್ದೇಶಕರಾಗಿರುವ ಡಾ. ಪ್ರಸನ್ನ ಹೆಬ್ಬಾರ್‌ ಅವರು ಅಕ್ಷಯ ಆಳ್ವ ಅವರನ್ನು ಸಂಪರ್ಕಿಸಿದರು. ಸರಕಾರ ಮಟ್ಟದ ಅಧಿಕಾರಿಗಳ ಬಳಿಗೇ ಮಲೆನಾಡು ಗಿಡ್ಡ ತಳಿ ಹೋಗುವುದರಿಂದ ಆಳ್ವರು ಒಪ್ಪಿಕೊಂಡರು.

ಈ ಹಿನ್ನೆಲೆಯಲ್ಲಿ ಅಲೆಕ್ಕಾಡಿಗೆ ಭೇಟಿ ನೀಡಿದ ಹಿರಿಯ ಅಧಿಕಾರಿಗಳು ಹಂಸಿ ಎನ್ನುವ ಐದು ವರ್ಷದ ಗೋವನ್ನು ಅದರ ಕರು ಪಂಚಮಿಯೊಂದಿಗೆ ಕೊಂಡೊಯ್ಯಲು ನಿರ್ಧರಿಸಿದರು. ಅಲ್ಲದೆ ಅಕ್ಷಯ ಆಳ್ವರು ನೀಡಿದ್ದ ಹಸು ಸ್ವರ್ಣ ಕಪಿಲೆ ಬಾಳುಗೋಡು ರಾಜಶೇಖರ ಭಟ್ ಎಂಬವರಲ್ಲಿದ್ದು, ಎರಡೂವರೆ ವರ್ಷ ಪ್ರಾಯದ ಆ ಹಸು ಮತ್ತು ಕರುವನ್ನೂ ಕೊಂಡೊಯ್ಯಲು ನಿರ್ಧರಿಸಲಾಯಿತು. ಇವುಗಳನ್ನು ಖರೀದಿಸಲು ಮುಖ್ಯ ಕಾರ್ಯದರ್ಶಿ ಕೂಡಾ ಒಪ್ಪಿದರೆಂದು ತಿಳಿದುಬಂದಿದೆ.

ಅದರಂತೆ ಧಾರ್ಮಿಕ ವಿಧಿ ವಿಧಾನ, ಪ್ರಾರ್ಥನೆ, ಗೋಪೂಜೆ ನಡೆದು ಹಸ್ತಾಂತರ ಪ್ರಕ್ರಿಯೆ ನಡೆದು ಹಸು ಹಾಗೂ ಕರುವನ್ನು ಬೆಂಗಳೂರಿಗೆ ಕೊಂಡೊಯ್ಯಲಾಯಿತು.

ಕಣ್ಣೀರು: ಮಲೆನಾಡು ಗಿಡ್ಡ ತಳಿ ಸರಕಾರ ಮಟ್ಟದ ಉನ್ನತ ಅಧಿಕಾರಿಯೊಬ್ಬರ ಮನೆ ಸೇರುವುದು ಅಭಿಯಾನದ ದೃಷ್ಟಿಯಿಂದ ಮಹತ್ವದ್ದಾಗಿದ್ದರೂ, ಊರು ಬಿಡುವ ಹಂಸಿ ಕಣ್ಣಲ್ಲಿ ನೀರು ಸುರಿಯುತ್ತಿದ್ದುದೂ ಕಂಡು ಬಂತು.

ಗೋ ಪೂಜೆ ಸಂದರ್ಭದಲ್ಲಿ ಸಂರಕ್ಷಣೆ ಮತ್ತು ಸಂವರ್ಧನಾ ಅಭಿಯಾನದ ಸದಾಶಿವ ಭಟ್ ಮರಿಕೆ, ಪ್ರಸನ್ನ ಭಟ್ ಎಣ್ಮೂರು, ಕೊಯಿಲ ಪಶುಪಾಲನಾ ಕೇಂದ್ರದ ಉಪ ನಿರ್ದೇಶಕ ಡಾ. ಪ್ರಸನ್ನ ಹೆಬ್ಬಾರ್‌, ಸುಳ್ಯ ತಾಲೂಕು ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ನಿತಿನ್ ಪ್ರಭು, ಪಶುವೈದ್ಯ ಡಾ. ಸೂರ್ಯನಾರಾಯಣ ಭಟ್‌, ಅಕ್ಷಯ ಆಳ್ವ ಮನೆಯವರು ಉಪಸ್ಥಿತರಿದ್ದರು. ಬೆಂಗಳೂರಿನಲ್ಲಿ ಶಾಲಿನಿ ರಜನೀಶ್ ಮತ್ತು ಮನೆಯವರು ಈ ಹಸುಗಳನ್ನು ಬರಮಾಡಿಕೊಂಡರು.

ಕೋಟ್ಸ್‌

ಮಲೆನಾಡು ಗಿಡ್ಡ ತಳಿಯನ್ನು ಮನೆ ಮನೆಯಲ್ಲಿ ಸಾಕಬೇಕೆಂಬುದು ನಮ್ಮ ಅಭಿಯಾನದ ಉದ್ದೇಶ. ಸರಕಾರ ಮಟ್ಟದ ಉನ್ನತ ಅಧಿಕಾರಿಯೊಬ್ಬರೇ ತಮ್ಮ ಮನೆಯಲ್ಲಿ ಸಾಕುವ ಹಂಬಲ ವ್ಯಕ್ತಪಡಿಸಿರುವುದು ನಮ್ಮ ಆಂದೋಲನಕ್ಕೆ ಇನ್ನಷ್ಟು ಹುರುಪು ನೀಡಿದೆ.

- ಅಕ್ಷಯ ಆಳ್ವ ಅಲೆಕ್ಕಾಡಿ

PREV

Recommended Stories

ವಿಶ್ವಾದ್ಯಂತ ಒಂದೇ ದಿನ ಕಾಂತಾರ ಚಾಪ್ಟರ್ 1 ಬಿಡುಗಡೆ
ಈರುಳ್ಳಿ, ಹೂ, ಪಚ್ಚ ಬಾಳೆ ಬೆಲೆ ಧರೆಗೆ!