ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಕರಾವಳಿ ಜಿಲ್ಲೆಯ ದೇಗುಲಗಳು ಜೀರ್ಣೋದ್ಧಾರಗೊಂಡು ಅಭಿವೃದ್ಧಿ ಹೊಂದುತ್ತಿರುವಂತೆ ವಿದ್ಯಾಲಯಗಳು ಕೂಡ ಅಭಿವೃದ್ಧಿ ಹೊಂದಬೇಕಾಗಿದೆ. ಪೋಷಕರು,ಶಿಕ್ಷಕರು, ಹಳೆ ವಿದ್ಯಾರ್ಥಿಗಳು, ಊರವರು ಕೈಜೋಡಿಸಿದರೆ ಅದು ಸಾಧ್ಯ ಎಂದು ಬರೋಡ ತುಳುಕೂಟದ ಅಧ್ಯಕ್ಷ, ಉದ್ಯಮಿ ಶಶಿಧರ ಶೆಟ್ಟಿ ನವಶಕ್ತಿ ಹೇಳಿದ್ದಾರೆ.ಲಾಯಿಲ ಕರ್ನೋಡಿ ಸರ್ಕಾರಿ ಉನ್ನತೀಕರಿಸಿದ ಹಿ .ಪ್ರಾ. ಶಾಲಾ ಹಳೆ ವಿದ್ಯಾರ್ಥಿ ಸಂಘ, ಉಜಿರೆಯ ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ , ಬೆಂಗಳೂರಿನ ಕ್ಯಾನ್ ಫಿನ್ ಹೋಮ್ಸ್ ಮತ್ತು ರೋಟರಿ ಕ್ಲಬ್ ಇಂದಿರಾ ನಗರ ಮತ್ತು ಬೆಳ್ತಂಗಡಿ ಹಾಗೂ ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಸಹಕಾರದಲ್ಲಿ ನವೀಕರಣಗೊಂಡ ಶಾಲೆಯ ಹಸ್ತಾಂತರ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದರು.ಶಿಕ್ಷಣ ಇಲಾಖೆ ಮತ್ತು ಸರಕಾರದಿಂದ ಶಾಲೆಗಳ ಅಭಿವೃದ್ಧಿಗೆ ಸಿಗುವ ಅನುದಾನ ಅಲ್ಪವಾಗಿದ್ದು, ಊರವರ ಸಹಕಾರವೇ ಮೂಲವಾಗಿದೆ. ಎಲ್ಲಾ ಧರ್ಮದವರೂ ಸೇರಿ ನಿರ್ಮಿಸಿದ ಸರ್ಕಾರಿ ಶಾಲೆಗಳು ಉಳಿಯಬೇಕು ಎಂದ ಅವರು, ಕರ್ನೋಡಿ ಶಾಲೆಯ ಅಭಿವೃದ್ಧಿ ಕೆಲಸಗಳಿಗೆ 5 ಲಕ್ಷ ರು. ಮೊತ್ತವನ್ನು ಸಹಕಾರಿ ಸಂಘದಲ್ಲಿ ನಿರಖು ಠೇವಣಿ ಇರಿಸುವುದಾಗಿ ತಿಳಿಸಿದರು.
ಉಜಿರೆಯ ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ಸಂಚಾಲಕ ಮೋಹನ್ ಕುಮಾರ್ ಮಾತನಾಡಿ, ಶಾಲೆಗಳ ಅಭಿವೃದ್ಧಿಯ ಕನಸು ದಾನಿಗಳಿಂದ ನನಸಾಗುತ್ತದೆ. ನಮ್ಮೂರ ಶಾಲೆ-ನಮ್ಮ ಶಾಲೆ ಎಂಬ ಧ್ಯೇಯದಲ್ಲಿ ಇದುವರೆಗೆ ಐದು ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಲಾಗಿದೆ. 30ಕ್ಕೂ ಹೆಚ್ಚು ಶಾಲೆಗಳ ಅಭಿವೃದ್ಧಿಗೆ ಮನವಿಗಳು ಬಂದಿದ್ದು ಮುಂದಿನ ಹಂತದಲ್ಲಿ ಆದ್ಯತೆ ಮೇರೆಗೆ ಕಾಮಗಾರಿ ನಡೆಸುವ ಯೋಜನೆ ಇದೆ ಎಂದು ತಿಳಿಸಿದರು.ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಬಿ.ಕೆ. ಧನಂಜಯ್ ರಾವ್ ಮಾತನಾಡಿ, ಈ ಶಾಲೆಯಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಒಂದನೇ ತರಗತಿಯಿಂದ ಆಂಗ್ಲ ಮಾಧ್ಯಮ ತರಗತಿ ತೆರೆಯಲು ಅನುಮತಿ ನೀಡಬೇಕು. ಇದಕ್ಕೆ ಬೇಕಾಗುವ ಅಗತ್ಯ ಮೂಲ ಸೌಕರ್ಯಗಳನ್ನು ಹಳೆ ವಿದ್ಯಾರ್ಥಿ ಸಂಘದಿಂದ ನೀಡಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ತಂದರು.
ಲಾಯಿಲ ಗ್ರಾ ಪಂ ಅಧ್ಯಕ್ಷ ಜಯಂತಿ ಎಂ.ಕೆ. ಕಾರ್ಯಕ್ರಮ ಉದ್ಘಾಟಿಸಿದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುರೇಶ ಶೆಟ್ಟಿ ಲಾಯಿಲ ಅಧ್ಯಕ್ಷತೆ ವಹಿಸಿದ್ದರು.ಬಿಇಒ ತಾರಕೇಸರಿ ,ಲಾಯಿಲ ಗ್ರಾ ಪಂ ಉಪಾಧ್ಯಕ್ಷೆ ಸುಗಂಧಿ, ಜಗನ್ನಾಥ್,ಪಿಡಿಒ ಶ್ರೀನಿವಾಸ ಡಿ. ಸದಸ್ಯರಾದ ಗಣೇಶ್ ಆರ್., ಅರವಿಂದ ಕುಮಾರ್, ಮಾಜಿ ಉಪಾಧ್ಯಕ್ಷ ಗಿರೀಶ್ ಡೋಂಗ್ರೆ ,ಶ್ರೀ ಗುರು ರಾಘವೇಂದ್ರ ಸ್ವಾಮಿ ಪ್ರತಿಷ್ಠಾನದ ಕಾರ್ಯದರ್ಶಿ ವಸಂತ ಸುವರ್ಣ, ಜೆಸಿಐ ಬೆಳ್ತಂಗಡಿ ಅಧ್ಯಕ್ಷೆ ಆಶಾಲತಾ ಪ್ರಶಾಂತ್, ಸಮೂಹ ಸಂಪನ್ಮೂಲ ವ್ಯಕ್ತಿ ವಾರಿಜಾ ಪಿ.ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಸೌಮ್ಯಾ, ಜಯಂತ್ ರಾಘವೇಂದ್ರ ನಗರ, ಹಳೆ ವಿದ್ಯಾರ್ಥಿ ಸಂಘದ ಕೋಶಾಧಿಕಾರಿ ಸದಾಶಿವ ಕಕ್ಕೇನ ಇದ್ದರು.
ಶಾಲಾ ಮುಖ್ಯ ಶಿಕ್ಷಕ ಜಗನ್ನಾಥ್ ಎಂ.ಸ್ವಾಗತಿಸಿದರು. ಶಿಕ್ಷಕಿಯರಾದ ಮಮತಾ ಕೆ.ಮತ್ತು ಉಷಾ ಕೆ. ನಿರೂಪಿಸಿದರು. ಶಿಕ್ಷಕಿ ಗಂಗಾರಾಣಿ ಜೋಶಿ ಬಹುಮಾನ ವಿಜೇತ ವಿದ್ಯಾರ್ಥಿಗಳ ವಿವರ ನೀಡಿದರು.