ಕನ್ನಡಪ್ರಭ ವಾರ್ತೆ ತುರುವೇಕೆರೆ
ದಕ್ಷಿಣ ಕಾಶ್ಮೀರದ ಪುಹಲ್ಗಾಮ್ ಜಿಲ್ಲೆಯ ಬೈಸರನ್ ಹುಲ್ಲುಗಾವಲು ಪ್ರದೇಶದಲ್ಲಿ ಪ್ರವಾಸಿಗರ ವಿರುದ್ಧ ಅಟ್ಟಹಾಸ ಮೆರೆದಿರುವ ಭಯೋತ್ಪಾದರನ್ನು ಬಗ್ಗುಬಡಿಯಬೇಕು. ಅಲ್ಲದೇ ಕೂಡಲೇ ಅವರನ್ನು ಗಲ್ಲಿಗೇರಿಸಬೇಕೆಂದು ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಹಾಗೂ ವಕೀಲ ಪಿ.ಎಚ್.ಧನಪಾಲ್ ಸರ್ಕಾರವನ್ನು ಆಗ್ರಹಿಸಿದ್ದಾರೆ.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪ್ರಗತಿಪರ ಸಂಘಟನೆಗಳ ಆಶ್ರಯದಲ್ಲಿ ನಡೆದ ಖಂಡನಾ ಸಭೆ ಮತ್ತು ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ಭಯೋತ್ಪಾದಕರು ಹೇಡಿಗಳು. ಅಮಾಯಕ ಜನರನ್ನು ಬಲಿ ತೆಗೆದುಕೊಂಡಿರುವುದು ಅಮಾನವೀಯ. ಇಂತಹ ನೀಚ ಕೃತ್ಯ ಎಸಗಲು ನಮ್ಮ ದೇಶದಲ್ಲೇ ಇರುವ ಮೀರ್ ಸಾಧಿಕ್ ಗಳೂ ಸಹ ಕಾರಣರಾಗಿದ್ದಾರೆ. ಅವರನ್ನೂ ಸಹ ಪತ್ತೆ ಹಚ್ಚಿ ಅವರಿಗೂ ಗುಂಡಿಕ್ಕಿ ಹತ್ಯೆಗೈಯಬೇಕು ಎಂದು ಹೇಳಿದರು. ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಜಾರಿಗೆ ತರುತ್ತಿರುವ ವಕ್ಫ್ ಕಾಯ್ದೆ ಕಟ್ಟುನಿಟ್ಟಾಗಿ ಜಾರಿಯಾಗಬೇಕು. ಎಲ್ಲರಿಗೂ ಸಮಾನತೆಯ ಕಾನೂನು, ಜನಸಂಖ್ಯಾ ನಿಯಂತ್ರಣ ಕಾನೂನು ಜಾರಿಗೆ ತಂದರಷ್ಠೇ ವಿಧ್ವಂಸಕ ಕೃತ್ಯದಲ್ಲಿ ತೊಡಗಿರುವವರನ್ನು ಕಟ್ಟಿಹಾಕಲು ಸಾಧ್ಯ ಎಂದು ಹೇಳಿದರು.
ವೈದ್ಯ ಡಾ,ಎ.ನಾಗರಾಜ್ ಮಾತನಾಡಿ ದೇಶದ್ರೋಹಿಗಳ ಅಟ್ಟಹಾಸವನ್ನು ಮಟ್ಟ ಹಾಕದಿದ್ದರೆ ಇಂದು ಕಾಶ್ಮೀರ ಆಗಿದೆ. ನಾಳೆ ನಮ್ಮ ಪಟ್ಟಣ, ಗ್ರಾಮಗಳಲ್ಲೂ ನಡೆಯಬಹುದು ಎಂದು ಆತಂಕ ವ್ಯಕ್ತಪಡಿಸಿದರು. ಹಿರಿಯ ಪತ್ರಕರ್ತ ಆರ್.ಸತ್ಯನಾರಾಯಣ್ ಮಾತನಾಡಿ ಹಕ್ಕಿಗಾಗಿ ಹೋರಾಟ ಮಾಡುವ ಮಂದಿ ನಮ್ಮ ಕರ್ತವ್ಯವೇನು ಎಂದು ಚಿಂತಿಸಬೇಕಿದೆ. ರಾಷ್ಟ್ರೀಯತೆ, ದೇಶಪ್ರೇಮ ಮೂಡಿಸುವಂತಹ ವಿಷಯಗಳನ್ನು ಚಿಕ್ಕಮಕ್ಕಳಿದ್ದಾಗಲೇ ಹೇಳುವುದು ಇಂದಿನ ಅಗತ್ಯವಾಗಿದೆ ಎಂದರು. ಪ್ರೊ.ಪುಟ್ಟರಂಗಪ್ಪ, ಲಯನ್ಸ್ ಕ್ಲಬ್ ಅಧ್ಯಕ್ಷ ರಂಗನಾಥ್, ಈ ಶ್ರದ್ಧಾಂಜಲಿ ಮತ್ತು ಖಂಡನಾ ಸಭೆಯಲ್ಲಿ ಮುಖಂಡರಾದ ಡಾ.ಚೌದ್ರಿ ನಾಗೇಶ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಪಿ.ರಾಜು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎ.ಬಿ.ಜಗದೀಶ್, ಸುನಿಲ್ ಬಾಬು ಸೇರಿದಂತೆ ಹಲವಾರು ಮಂದಿ ಮಾತನಾಡಿದರು.