ಹಾನಗಲ್ಲ: ಬಸವರಾಜ ಬೊಮ್ಮಾಯಿ ಅವರ ಗೆಲುವಿನ ಜೊತೆಗೆ ಹಾನಗಲ್ಲ ತಾಲೂಕಿನಲ್ಲಿ ಬಿಜೆಪಿ ಗಟ್ಟಿಯಾಗಿ ಚೇತರಿಸಿಕೊಂಡಿದ್ದು, ಹಿಂದಿನ ಎರಡು ಚುನಾವಣೆಗಳಲ್ಲಿ ಗೆದ್ದು ಬೀಗಿದ ಕಾಂಗ್ರೆಸ್‌ಗೆ ಹಾನಗಲ್ಲ ತಾಲೂಕಿನ ಮತದಾರರೇ ಈ ಬಾರಿ ಸರಿಯಾದ ಉತ್ತರ ನೀಡಿದ್ದಾರೆ ಎಂದು ಮಾಜಿ ಸಚಿವ ಮನೋಹರ ತಹಸೀಲ್ದರ್ ತಿಳಿಸಿದರು.
ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಅವರ ಗೆಲುವಿನ ನಂತರ ಹಾನಗಲ್ಲನಲ್ಲಿ ವಿಜಯೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಸೇರ್ಪಡೆಗೊಂಡ ನಾನು ಅತ್ಯಂತ ವಿಶ್ವಾಸದಿಂದ ಕಾರ್ಯಕರ್ತರಲ್ಲಿ ಕಾರ್ಯಕರ್ತನಾಗಿ ಬಿಜೆಪಿ ಗೆಲುವಿಗೆ ಶ್ರಮಿಸಬೇಕಾಯಿತು. ಕಾಂಗ್ರೆಸ್‌ನಿಂದ ಹೊರಬಂದ ನನಗೆ ಬಿಜೆಪಿಯಲ್ಲಿ ಗೌರವಯುತವಾಗಿ ನಡೆಸಿಕೊಂಡು ಪಕ್ಷದ ಅಭ್ಯರ್ಥಿ ಗೆಲುವಿಗೆ ನನ್ನನ್ನು ಜೋಡಿಸಿಕೊಂಡರು. ನನ್ನ ಬೆಂಬಲಿಗರನ್ನೆಲ್ಲ ಬಿಜೆಪಿಗೆ ಸೇರ್ಪಡೆ ಮಾಡಿ ಅತ್ಯಂತ ನಿಷ್ಠೆಯಿಂದ ಮಾಡಿದ ಕೆಲಸಕ್ಕೆ ಒಳ್ಳೆಯ ಪ್ರತಿಫಲ ಸಿಕ್ಕಿದೆ. ಬೀಗುತ್ತಿದ್ದ ಕಾಂಗ್ರೆಸ್ಸಿಗೆ ಸರಿಯಾದ ಉತ್ತರ ಸಿಕ್ಕಿದೆ. ಈ ಮೂಲಕ ಹಾವೇರಿ ಗದಗ ಕ್ಷೇತ್ರ ಬಿಜೆಪಿ ಭದ್ರ ಕೋಟೆ ಎಂಬುದು ಸಾಬೀತಾಗಿದೆ ಎಂದರು.ಬಸವರಾಜ ಬೊಮ್ಮಾಯಿ ಅವರ ಗೆಲುವಿನಿಂದ ಹಾನಗಲ್ಲ ತಾಲೂಕಿನ ಅಭಿವೃದ್ಧಿಗೆ ಅದರಲ್ಲೂ ಬೇಡ್ತಿ ವರದಾ ನದಿ ಜೋಡಣೆಗೆ ದೊಡ್ಡ ಶಕ್ತಿ ಬಂದಂತಾಗಿದೆ. ಬೊಮ್ಮಾಯಿ ಅವರು ಈ ಅವಧಿಯಲ್ಲಿ ನದಿ ಜೋಡಣೆ ಕೆಲಸವನ್ನು ಮಾಡಿ ಈ ಜಿಲ್ಲೆಯ ರೈತರ ಕೃಷಿ ಅಭಿವೃದ್ಧಿಗೆ ಮುಂದಾಗುತ್ತಾರೆ ಎಂಬ ವಿಶ್ವಾಸವಿದೆ. ಬೊಮ್ಮಾಯಿ ಅವರು ಕೇಂದ್ರದಲ್ಲಿ ಮಂತ್ರಿಯಾಗುತ್ತಾರೆ ಎಂದು ಭವಿಷ್ಯ ನುಡಿದರು.ಮಹಾತ್ಮ ಗಾಂಧಿ ವೃತ್ತದಲ್ಲಿ ನಡೆದ ವಿಜಯೋತ್ಸವದಲ್ಲಿ ಪಟಾಕಿ ಸಿಡಿಸಿ, ಬಣ್ಣ ಎರಚಿ ಬಿಜೆಪಿ ಕಾರ್ಯಕರ್ತರು ಸಂಭ್ರಮಿಸಿದರು. ಬಿಜೆಪಿಯ ಎಸ್.ಎಂ. ಕೋತಂಬರಿ, ರಾಮು ಯಳ್ಳೂರ, ಬಸವರಾಜ ಹಾದಿಮನಿ, ರಾಮನಗೌಡ ಪಾಟೀಲ, ರಾಘವೇಂದ್ರ ತಹಶೀಲ್ದಾರ, ಪುಟ್ಟಪ್ಪ ವೆಂಕಟಾಪುರ, ಅಣ್ಣಪ್ಪ ಚಾಕಾಪುರ, ಪ್ರವೀಣ ಸುಲಾಖೆ, ಕೃಷ್ಣಾ ಬೆಟಗೇರಿ, ಮಂಜುನಾಥ ಯಳ್ಳೂರ, ಪರಶುರಾಮ ನಿಂಗೋಜಿ, ಜೆ.ಸಿ. ಕಾಳಂಗಿ, ಗಿರೀಶಗೌಡ ಪಾಟೀಲ, ಹನುಮಂತಪ್ಪ ಮಲಗುಂದ, ಚಂದ್ರು ಉಗ್ರಣ್ಣನವರ, ಅಮರ್ ಮೊದಲಾದವರು ವಿಜಯೋತ್ಸವದಲ್ಲಿದ್ದರು.