ಫ್ಲೈ ಓವರ್ ಪೂರ್ಣವಾಗುವವರೆಗೆ ಲೆವೆಲ್ ಕ್ರಾಸಿಂಗ್‌ನಲ್ಲೇ ಓಡಾಟ । ಚಾಲಕರು, ಸವಾರರ ಸಂತಸ
ತಾಲೂಕಿನ ಹಂಗರಹಳ್ಳಿ ಸಮೀಪ ಹಿಂದಿನಂತೆ ರೈಲ್ವೆ ಹಳಿ ಸಮೀಪ ಗೇಟ್ ಅಳವಡಿಸಿ, ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಹಾಸನ ಮೈಸೂರು ರಸ್ತೆ ನೇರ ಓಡಾಟ ಮತ್ತೆ ಪುನರಾರಂಭವಾಗಿದ್ದು, ವಾಹನ ಚಾಲಕರು ಹಾಗೂ ಸವಾರರು ಸಂತಸ ವ್ಯಕ್ತಪಡಿಸಿದ್ದಾರೆ.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಪಟ್ಟಣದಿಂದ ಹಾಸನಕ್ಕೆ ತೆರಳಬೇಕಾದ ಸಂದರ್ಭದಲ್ಲಿ ಅವರ ಕಾರು ಸುತ್ತಿ ಬಳಸಿ ತೆರಳಿತ್ತು. ಇದನ್ನು ಕಂಡು ವಿಷಯ ತಿಳಿದ ದೇವೇಗೌಡರು, ಜನತೆ ಅನುಭವಿಸುವ ಹಿಂಸೆ ಹಾಗೂ ಇಂಧನ ವ್ಯಯದ ಬಗ್ಗೆ ಹಿರಿಯ ಅಧಿಕಾರಿಗಳ ಜತೆ ಚರ್ಚಿಸಿ ಸಲಹೆ ನೀಡಿದ್ದರು. ಇದರ ಪರಿಣಾಮ ಫ್ಲೈ ಓವರ್ ಸಂಚಾರಕ್ಕೆ ಮುಕ್ತವಾಗುವ ತನಕ ಹಿಂದಿನಂತೆ ರೈಲ್ವೆ ಹಳಿ ಸಮೀಪ ಗೇಟ್ ಅಳವಡಿಸಿ, ಸಂಚಾರಕ್ಕೆ ಅವಕಾಶ ಕಲ್ಪಿಸಲು ಸೂಚಿಸಲಾಗಿದೆ.ಪರಿಣಾಮ ಸೋಮವಾರ ಸಂಜೆಯಿಂದ ಹಾಸನ ಮೈಸೂರು ನೇರ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಭಾರಿ ವಾಹನಗಳನ್ನು ಹೊರತುಪಡಿಸಿ ಸೋಮವಾರ ಸಂಜೆಯಿಂದಲೇ ವಾಹನ ಓಡಾಟಕ್ಕೆ ಅನುವು ಮಾಡಿಕೊಡಲಾಗಿದೆ ಎಂದು ನ್ಯಾಮನಹಳ್ಳಿಯ ಉದ್ಯಮಿ ಎನ್.ಆರ್.ಅನಂತಕುಮಾರ್ ಮಾಹಿತಿ ನೀಡಿದರು.
ಹೊಳೆನರಸೀಪುರ ತಾಲೂಕಿನ ಹಂಗರಹಳ್ಳಿ ಸಮೀಪದ ರೈಲ್ವೆ ಹಳಿ ಹತ್ತಿರ ಗೇಟ್ ಮರು ಸ್ಥಾಪಿಸಿದ್ದು, ಹಾಸನ ಮೈಸೂರು ನೇರ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.