ಹಂಗರಹಳ್ಳಿ ಫ್ಲೈಓವರ್ ಬಳಿ ಗ್ರಾಮಸ್ಥರ ಪ್ರತಿಭಟನೆ

KannadaprabhaNewsNetwork |  
Published : Dec 10, 2023, 01:30 AM IST
9ಎಚ್ಎಸ್ಎನ್8 : ಹೊಳೆನರಸೀಪುರ ತಾ. ಹಂಗರಹಳ್ಳಿ ಗ್ರಾಮದಲ್ಲಿ ಗ್ರಾಮಸ್ಥರು ಸರ್ವಿಸ್ ರಸ್ತೆ ಹಾಗೂ ಅಗತ್ಯ ಬಸ್ ವ್ಯವಸ್ಥೆಗೆ ಒತ್ತಾಯಿಸಿ, ರಸ್ತೆತಡೆ ನಡೆಸುವ ಸಂದರ್ಭದಲ್ಲಿ ರೈಲ್ವೆ ಇಂಜಿನಿಯರ್ ಜತೆ ತಾ.ಪಂ. ಮಾಜಿ ಅಧ್ಯಕ್ಷ ಎನ್.ಆರ್.ಅನಂತ ಕುಮಾರ್ ಮಾತನಾಡಿದರು.  | Kannada Prabha

ಸಾರಾಂಶ

ಹೊಳೆನರಸೀಪುರ ತಾಲೂಕಿನ ಹಂಗರಹಳ್ಳಿ ಗ್ರಾಮದ ಸಮೀಪ ರೈಲ್ವೆ ಫ್ಲೈಓವರ್ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸುತ್ತಮುತ್ತಲ ಗ್ರಾಮಸ್ಥರು ಕೃಷಿ ಚಟುವಟಿಕೆ ನಡೆಸಲು ತೊಂದರೆ ಉಂಟಾಗುತ್ತಿರುವ ಕಾರಣದಿಂದ ಸರ್ವಿಸ್ ರಸ್ತೆಗೆ ಒತ್ತಾಯಿಸಿ ರಸ್ತೆ ತಡೆ ನಡೆಸುವ ಮೂಲಕ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಪ್ರಥಮ ಬಾರಿಗೆ ಫ್ಲೈ ಓವರ್ ಹಾನಿಯಾದಾಗ ಸಮಸ್ಯೆ ಕುರಿತು ನಿಮಗೆ ತಿಳಿಸಿದಾಗಲೇ ನೀವು ಅಗತ್ಯ ಕ್ರಮ ಕೈಗೊಂಡಿದ್ದರೆ ಇಂದು ಈ ರೀತಿಯ ಸಮಸ್ಯೆ ಉಂಟಾಗುತ್ತಿರಲಿಲ್ಲ ಎಂದು ತಾ.ಪಂ. ಮಾಜಿ ಅಧ್ಯಕ್ಷ ಎನ್.ಆರ್‌.ಅನಂತ ಕುಮಾರ್‌ ಅವರು ರೈಲ್ವೆ ಎಂಜಿನಿಯರ್‌ ನಾಗರಾಜು ಅಲಂಗಾರ್‌ ಅವರಲ್ಲಿ ಬೇಸರ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ಪ್ರಥಮ ಬಾರಿಗೆ ಫ್ಲೈ ಓವರ್ ಹಾನಿಯಾದಾಗ ಸಮಸ್ಯೆ ಕುರಿತು ನಿಮಗೆ ತಿಳಿಸಿದಾಗಲೇ ನೀವು ಅಗತ್ಯ ಕ್ರಮ ಕೈಗೊಂಡಿದ್ದರೆ ಇಂದು ಈ ರೀತಿಯ ಸಮಸ್ಯೆ ಉಂಟಾಗುತ್ತಿರಲಿಲ್ಲ ಎಂದು ತಾ.ಪಂ. ಮಾಜಿ ಅಧ್ಯಕ್ಷ ಎನ್.ಆರ್‌.ಅನಂತ ಕುಮಾರ್‌ ಅವರು ರೈಲ್ವೆ ಎಂಜಿನಿಯರ್‌ ನಾಗರಾಜು ಅಲಂಗಾರ್‌ ಅವರಲ್ಲಿ ಬೇಸರ ವ್ಯಕ್ತಪಡಿಸಿದರು. ತಾಲೂಕಿನ ಹಂಗರಹಳ್ಳಿ ಗ್ರಾಮದ ಸಮೀಪ ರೈಲ್ವೆ ಫ್ಲೈಓವರ್ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸುತ್ತಮುತ್ತಲ ಗ್ರಾಮಸ್ಥರು ಕೃಷಿ ಚಟುವಟಿಕೆ ನಡೆಸಲು ತೊಂದರೆ ಉಂಟಾಗುತ್ತಿರುವ ಕಾರಣದಿಂದ ಸರ್ವಿಸ್ ರಸ್ತೆಗೆ ಒತ್ತಾಯಿಸಿ ರಸ್ತೆ ತಡೆ ನಡೆಸುವ ಮೂಲಕ ಜರುಗಿದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.

ಕುಮಾರ್ ಎಂಬ ಗ್ರಾಮಸ್ಥರು ಮಾತನಾಡಿ, ನೀವು ರೈಲ್ವೆ ಅಧಿಕಾರಿಗಳು ಸರ್ವಾಧಿಕಾರಿ ಧೋರಣೆಯ ಮೆಂಟಾಲಿಟಿ ಬಿಡಿ, ನಿಮಗೆ ನೀಡುತ್ತಿರುವುದು ಸಾರ್ವಜನಿಕರ ತೆರಿಗೆ ಹಣ. ಹಿಂದೆ ಬ್ರಾಡ್‌ಗೇಜ್‌ ನಿರ್ಮಾಣ ಸಮಯದಲ್ಲಿ ಜಮೀನು ಬಿಟ್ಟು ಕೊಟ್ಟ ರೈತರಿಗೆ ಪರಿಹಾರ ಹಣ ನೀಡಿದ್ದೀರ ಎಂದು ಪ್ರಶ್ನಿಸಿ, ಇಂದು ರೈತರಿಗೆ ಸಂಕಷ್ಟಕ್ಕೆ ಸಿಲುಕಿರುವ ಸಂದರ್ಭದಲ್ಲಿ ರಸ್ತೆಗೆ ತಡೆ ಏಕೆ ಹಾಕಿದ್ದೀರಿ, ಕಾಮಗಾರಿ ಪ್ರಾರಂಭಿಸುವ ತನಕ ರಸ್ತೆ ತಡೆ ತೆರವುಗೊಳಿಸಿ ಮತ್ತು ಸರ್ವಿಸ್ ರಸ್ತೆ ವ್ಯವಸ್ಥೆ ಮಾಡಿ ಎಂದು ಒತ್ತಾಯಿಸಿದರು.

ಗ್ರಾ.ಪಂ. ಮಾಜಿ ಅಧ್ಯಕ್ಷ ಲಕ್ಷ್ಮಣ್ ಅವರು ಕೆಎಸ್‌ಆರ್‌ಟಿಸಿ ಡಿಪೋ ವ್ಯವಸ್ಥಾಪಕ ಪಾಪಾ ನಾಯಕ್ ಅವರಿಗೆ ಶಾಲಾ ಕಾಲೇಜು ವಿದ್ಯಾರ್ಥಿಗಳ ಸಮಸ್ಯೆ ಕುರಿತು ಸುದೀರ್ಘವಾಗಿ ವಿವರಿಸಿ, ನಾಳೆಯಿಂದಲೇ ಹಂಗರಹಳ್ಳಿಯಿಂದ ಬೆಳಗ್ಗೆ ೮ ಗಂಟೆಗೆ ಹಾಸನಕ್ಕೆ ಬಸ್ ಸಂಚಾರ ಪ್ರಾರಂಭಿಸಬೇಕು, ಇನ್ನೆರಡು ತಿಂಗಳಲ್ಲಿ ವಾರ್ಷಿಕ ಪರೀಕ್ಷೆ ಬರುವ ಕಾರಣದಿಂದ ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ದಯವಿಟ್ಟು ಬಸ್ ವ್ಯವಸ್ಥೆ ಮಾಡಿಕೊಡಿ ಎಂದು ವಿನಂತಿಸಿದರು. ವೃತ್ತ ನಿರೀಕ್ಷಕ ಪ್ರದೀಪ್ ಬಿ.ಆರ್ ಮಾತನಾಡಿ, ಪಟ್ಟಣದ ಎರಡು ಕಡೆ ರೈಲ್ವೆ ಗೇಟ್ ಮುಚ್ಚಿರುವುದರಿಂದ ಅಲ್ಲಿಯ ಸಿಬ್ಬಂದಿಯನ್ನು ಇಲ್ಲಿ ಗೇಟ್ ನಿರ್ಮಿಸಿ, ಅವರನ್ನು ನಿಯೋಜನೆ ಮಾಡುವುದರಿಂದ ಸಮಸ್ಯೆ ನಿವಾರಣೆಯಾಗಲಿದೆ ಮತ್ತು ಗ್ರಾಮಸ್ಥರ ಸಮಸ್ಯೆಯೂ ನಿವಾರಣೆ ಆಗಲಿದೆ ಎಂದು ಎಂಜಿನಿಯರ್ ಅವರಿಗೆ ತಿಳಿಸಿ, ಸಮಸ್ಯೆಗೆ ಪರಿಹಾರ ರೂಪದಲ್ಲಿ ತಮಗೆ ತಿಳಿಸಿದ್ದೇನೆ ಹೊರತು ಒತ್ತಾಯಿಸುತ್ತಿಲ್ಲವೆಂದರು.

ಅಗತ್ಯ ವ್ಯವಸ್ಥೆ ಮಾಡದೇ ಇದ್ದರೇ ದಿನನಿತ್ಯ ರಸ್ತೆ ತಡೆ ಮಾಡುತ್ತೇವೆ ಎಂದು ನೆರೆದಿದ್ದ ಗ್ರಾಮಸ್ಥರು ಎಚ್ಚರಿಸಿದರು. ಈ ವೇಳೆ ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರಾದ ರಾಮು, ವಾಸು, ರಾಮಣ್ಣ, ಹಂಗರಹಳ್ಳಿ, ನ್ಯಾಮನಹಳ್ಳಿ ಗ್ರಾಮಸ್ಥರು, ಇತರರು ಇದ್ದರು.

* ಹೇಳಿಕೆ-1:

ರಸ್ತೆ ಸಂಚಾರ ನಿಲ್ಲಿಸಿ ಎರಡು ತಿಂಗಳಾಗಿದೆ, ಇನ್ನೂ ಕಾಮಗಾರಿ ಪ್ರಾರಂಭಿಸಿಲ್ಲ, ನಿಮ್ಮ ನಿರ್ಲಕ್ಷ್ಯ ಧೋರಣೆಯಿಂದ ಎಲ್ಲರಿಗೂ ತೊಂದರೆ ಉಂಟಾಗುತ್ತಿದ್ದು, ಮೊದಲಿಗೆ ತಾತ್ಕಾಲಿಕವಾಗಿ ಸರ್ವೀಸ್ ರಸ್ತೆ ವ್ಯವಸ್ಥೆ ಮಾಡಿ ಅಥವಾ ರಸ್ತೆ ತಡೆ ತೆರವುಗೊಳಿಸಿ.

- ಎನ್‌ . ಆರ್‌ ಅನಂತ ಕುಮಾರ್‌, ತಾ.ಪಂ. ಮಾಜಿ ಅಧ್ಯಕ್ಷ

* ಹೇಳಿಕೆ-2:

ತಾತ್ಕಾಲಿಕವಾಗಿ ವ್ಯವಸ್ಥೆ ಮಾಡಿರುವ ಪಡುವಲಹಿಪ್ಪೆ, ಹನುಮನಹಳ್ಳಿ ರಸ್ತೆಯಲ್ಲಿ ಹಳೆಯದಾದ ಸೇತುವೆಗಳು ಇದ್ದು, ಭಾರಿ ತೂಕದ ವಾಹನಗಳ ಸಂಚಾರದಿಂದ ಹಾನಿ ಉಂಟಾಗಲಿದೆ ಮತ್ತು ಕೆಲವೆಡೆ ಕಿರಿದಾದ ರಸ್ತೆಗಳು ಹಾಗೂ ಕೆರೆ ಏರಿಯಲ್ಲಿ ಸಂಚಾರವು ಸುರಕ್ಷಿತವಾಗಿಲ್ಲ.

- ಪ್ರದೀಪ್ ಬಿ.ಆರ್, ವೃತ್ತ ನಿರೀಕ್ಷಕ

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ