ಬಿ.ಎಸ್. ಸುನಿಲ್
ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿಕಳೆದ 33 ವರ್ಷಗಳ ಹಿಂದೆ ಪ್ರತಿಷ್ಠಾಪಿತವಾದ ಹನುಮಂತನಗರದ ಶ್ರೀ ಆತ್ಮಲಿಂಗೇಶ್ವರ ದೇವಾಲಯ ಧಾರ್ಮಿಕ, ಪ್ರವಾಸಿ ಹಾಗೂ ಶೈಕ್ಷಣಿಕ ಕ್ಷೇತ್ರವಾಗಿ ಬೆಳೆಯುತ್ತಿದ್ದು, ದೇವಾಲಯದಲ್ಲಿ ಮಹಾಶಿವರಾತ್ರಿ ಹಬ್ಬದ ಅಂಗವಾಗಿ ವಿಶೇಷ ಪೂಜೆಯೊಂದಿಗೆ ಜಾಗರಣೆಗೆ ಸಜ್ಜುಗೊಂಡಿದೆ.
ಕಾವೇರಿ ಪುತ್ರ, ಮಾಜಿ ಸಂಸದ ಜಿ.ಮಾದೇಗೌಡರ ಮಹಾದಾಸೆಯೊಂದಿಗೆ ಪ್ರತಿಷ್ಠಾಪಿಸಿದ ಆತ್ಮಲಿಂಗೇಶ್ವರ ದೇಗುಲದಲ್ಲಿ ಈಗಾಗಲೇ ಭಾರೀ ದನಗಳ ಜಾತ್ರೆ ಆರಂಭವಾಗಿದೆ. ನೂರಾರು ರಾಸುಗಳು ಆಗಮಿಸಿದ್ದು ಭಕ್ತರ ಗಮನ ಸೆಳೆಯುತ್ತಿದೆ. ಬುಧವಾರ ರಾತ್ರಿ ಶಿವರಾತ್ರಿ ಅಂಗವಾಗಿ ಜಾಗರಣೆ ನಡೆಯಲಿದೆ. ಜಿಲ್ಲೆಯ ವಿವಿಧೆಡೆಯಿಂದ ಸಾವಿರಾರು ಜನತೆ ಆಗಮಿಸಿ ಇಡೀ ರಾತ್ರಿ ಜಾಗರಣೆ ಮಾಡಲಿದ್ದಾರೆ. ದೇವಾಲಯದ ಆವರಣದಲ್ಲಿ ಭಜನೆ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.ಮಂಡ್ಯ, ಮಳವಳ್ಳಿ, ಮದ್ದೂರು, ಹಲಗೂರು ಸೇರಿ ಹಲವೆಡೆಯಿಂದ ಎತ್ತಿನಗಾಡಿ, ಗೂಡ್ಸ್ ಆಟೋ, ಬೈಕ್, ಕಾರು ಮೊದಲಾದ ವಾಹನಗಳ ಮೂಲಕ ರಾತ್ರಿಯಿಂದ ಮುಂಜಾನೆವರೆಗೂ ಭಕ್ತ ಸಾಗರ ಹರಿದು ಬರುತ್ತಲೇ ಇರುತ್ತದೆ. ಭಕ್ತರು ರಾತ್ರಿಯಿಡೀ ದೇವರ ಧ್ಯಾನದಲ್ಲಿ ಮುಳುಗುತ್ತಾರೆ.
ಫೆ.28ರಂದು ಮಧ್ಯಾಹ್ನ 2.30 ಗಂಟೆಗೆ ರಥೋತ್ಸವ ನಡೆಯಲಿದೆ. ಕಳೆದ ಎರಡು ವರ್ಷಗಳಿಂದ ತೆಪ್ಪೋತ್ಸವ ಹಾಗೂ ಶಯನೋತ್ಸವ ನಡೆಯುತ್ತಿದೆ. ಮಾ.1ರ ಸಂಜೆ 6.30ರಿಂದ 8ರವರೆಗೆ ಪಾವನಗಂಗಾ ಕಲ್ಯಾಣಿಯಲ್ಲಿ ತೆಪ್ಪೋತ್ಸವ ಹಾಗೂ 8.15ಕ್ಕೆ ದೇವಾಲಯದಲ್ಲಿ ಶಯನೋತ್ಸವ ನಡೆಯಲಿದೆ. ಜತೆಗೆ ಅಷ್ಟು ದಿನಗಳ ಕಾಲ ಮಹಾಮಂಗಳಾರತಿ, ವಿಶೇಷ ಪೂಜಾ ಕೈಂಕರ್ಯಗಳು ಸಾಂಘವಾಗಿ ನಡೆಯಲಿವೆ.ಆರಂಭದ ದಿನಗಳಲ್ಲಿ ಸಾವಿರ ಸಂಖ್ಯೆಯಲ್ಲಿ ಬರುತ್ತಿದ್ದ ಭಕ್ತರ ಸಂಖ್ಯೆ ಈಗ ಲಕ್ಷ ದಾಟಿದೆ. ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳ ಮಾದರಿಯಲ್ಲಿ ಇಲ್ಲಿಯೂ ಪ್ರತಿನಿತ್ಯ ಅನ್ನದಾಸೋಹ ಕಾರ್ಯಕ್ರಮ ನಡೆಯುತ್ತಿದೆ.
--- ‘35 ವರ್ಷಗಳ ಹಿಂದೆ ಜನತೆ ಈ ರಸ್ತೆಯಲ್ಲಿ ತಿರುಗಾಡಲು ಭಯ ಪಡುತ್ತಿದ್ದರು. ಈಗ ಸ್ಥಳೀಯರು ಮಾತ್ರವಲ್ಲ, ರಾಜ್ಯದ ಮೂಲೆ ಮೂಲೆಗಳಿಂದ ಲಕ್ಷಾಂತರ ಜನತೆ ಇಲ್ಲಿಗೆ ಬರುತ್ತಾರೆ. ಇದಕ್ಕೆ ಜಿ.ಮಾದೇಗೌಡರು, ಪುತ್ರ ಮಧು ಜಿ. ಮಾದೇಗೌಡರು ಕಾರಣ.’ಜಗದೀಶ್, ಗೋಪನಹಳ್ಳಿ.
---‘ಆತ್ಮಲಿಂಗೇಶ್ವರಸ್ವಾಮಿ ದೇವಾಲಯಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದ್ದು, ಭಕ್ತರಿಗೆ ದಾಸೋಹ ಸೇರಿದ ಧಾರ್ಮಿಕ ಚಟುವಟಿಕೆಗಳನ್ನು ಗಮನಿಸಿದರೆ ಈ ದೇಗುಲ ಇತ್ತೀಚೆಗೆ ನಿರ್ಮಾಣವಾಗಿದೆ ಅಂದರೆ ನಂಬಲು ಸಾಧ್ಯವಿಲ್ಲ. ಶ್ರೀ ಕ್ಷೇತ್ರದ ಸ್ವಾಮಿಯು ಇಲ್ಲಿಗೆ ಬರುವ ಭಕ್ತರ ಸಂಕಷ್ಟಗಳಿಗೆ ಪರಿಹಾರ ಕಲ್ಪಿಸುತ್ತಾನೆ.’
ಪ್ರಮೋದ್, ಮಾಲೀಕರು, ಜನ್ಯ ಇವಿ ಚಾರ್ಜಿಂಗ್ ಸ್ಟೇಷನ್ ಭಾರತೀನಗರ---
‘ತಂದೆ ಜಿ.ಮಾದೇಗೌಡರ ದೂರದೃಷ್ಟಿಯಿಂದ ನಿರ್ಮಾಣಗೊಂಡ ಆತ್ಮಲಿಂಗೇಶ್ವರ ದೇವಾಲಯಕ್ಕೆ ಶಿವರಾತ್ರಿ ಹಬ್ಬದಲ್ಲಿ ಮಾತ್ರವಲ್ಲದೆ ಗಿರಿಜಾ ಕಲ್ಯಾಣ ಮಾಡುವ ಮೂಲಕ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಎಲ್ಲಾ ಧಾರ್ಮಿಕ ಕಾರ್ಯಗಳನ್ನು ಆರಂಭಿಸಿ ಭಕ್ತರ ಆಸೆ ಪೂರೈಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ.’ಮಧು ಜಿ.ಮಾದೇಗೌಡ, ಶಾಸಕರು, ಅಧ್ಯಕ್ಷರು ಆತ್ಮಲಿಂಗೇಶ್ವರ ಧರ್ಮದರ್ಶಿ ಮಂಡಳಿ.