ಹನುಮಸಾಗರದ ರೇಷ್ಮೆ ವಸ್ತ್ರ ಉಡುಪಿಯ ಶ್ರೀಕೃಷ್ಣನಿಗೆ

KannadaprabhaNewsNetwork |  
Published : May 24, 2024, 01:02 AM ISTUpdated : May 24, 2024, 11:12 AM IST
ಹನುಮಸಾಗರದಲ್ಲಿ ನೆಯ್ದು ಸಿದ್ಧಪಡಿಸಿದ ಶುದ್ಧ ರೇಷ್ಮೆಯಿಂದ ಉಡುಪಿಯ ಶ್ರೀಕೃಷ್ಣನಿಗೆ ಅಲಂಕಾರ ಮಾಡಿರುವುದು. | Kannada Prabha

ಸಾರಾಂಶ

ಇಲ್ಲಿ ನೇಯ್ದು ಸಿದ್ಧಪಡಿಸಿದ ಪರಿಶುದ್ಧ ರೇಷ್ಮೆ ವಸ್ತ್ರಗಳು ಉಡುಪಿಯಲ್ಲಿರುವ ಶ್ರೀಕೃಷ್ಣನ ವಿಗ್ರಹಕ್ಕೆ ಅಲಂಕೃತಗೊಂಡಿವೆ.

 ಹನುಮಸಾಗರ :  ಇಲ್ಲಿ ನೇಯ್ದು ಸಿದ್ಧಪಡಿಸಿದ ಪರಿಶುದ್ಧ ರೇಷ್ಮೆ ವಸ್ತ್ರಗಳು ಉಡುಪಿಯಲ್ಲಿರುವ ಶ್ರೀಕೃಷ್ಣನ ವಿಗ್ರಹಕ್ಕೆ ಅಲಂಕೃತಗೊಂಡಿವೆ.

ಶ್ರೀಕೃಷ್ಣನಿಗೆ ಅರ್ಪಿತವಾಗುವುದೆಂಬ ಕಾರಣಕ್ಕೆ ಶ್ರದ್ಧಾಪೂರ್ವಕವಾಗಿ ನೇಯ್ದು ಸಿದ್ಧಪಡಿಸಿದವರು ಹನುಮಂತಸಾ ರಾಯಬಾಗಿ ಮತ್ತು ಅವರ ಪುತ್ರ ಮಂಜುನಾಥ ರಾಯಬಾಗಿ. ಇಲ್ಲಿಯ ವಸ್ತ್ರದಾಯಿನಿ ಪಾಠಶಾಲೆಯ ಮುಖ್ಯಸ್ಥ ಪಂ.ಧೀರೇಂದ್ರಾಚಾರ್ಯ ಪೂಜಾರ, ಪಂ.ಪ್ರಹ್ಲಾದ ಪೂಜಾರ ಕಾರಣೀಕರ್ತರು.

ಇಲ್ಲಿ ಅನೇಕ ಕುಟುಂಬಗಳು ನೇಕಾರಿಕೆ ಅವಲಂಬಿಸಿವೆ. ಇಲಕಲ್ ಸೀರೆ ತಯಾರಿಕೆ ಕೇವಲ ಇಲಕಲ್ ಪಟ್ಟಣದಲ್ಲಿ ಮಾತ್ರ ಆಗುವುದಿಲ್ಲ. ಹನುಮಸಾಗರ, ಗುಳೇದಗುಡ್ಡ, ಕಮತಗಿ, ಅಮೀನಗಡ ಸೇರಿದಂತೆ ಅನೇಕ ಕಡೆ ನೇಕಾರರು ಇಳಕಲ್ ಹೆಸರಿನ ಸೀರೆಯನ್ನು ನೇಯ್ದುತ್ತಾರೆ. ಅದರ ಜೊತೆಗೆ ವಿವಿಧ ಬಗೆಯ ಸೀರೆಗಳು, ರೇಷ್ಮೆ ಸೀರೆ, ರೇಷ್ಮೆ ಮಡಿ, ರೇಷ್ಮೆ ವಸ್ತ್ರ ಸೇರಿದಂತೆ ಅನೇಕ ವಸ್ತ್ರಗಳನ್ನು ಈ ಭಾಗದಲ್ಲಿ ತಯಾರಿಸುತ್ತಾರೆ. ಇಲ್ಲಿ ತಯಾರಾದ ಸೀರೆಗಳು ದೂರದ ಮುಂಬೈ, ಪೂನಾ, ಬೆಂಗಳೂರು, ದೆಹಲಿ ಮುಂತಾದ ಪಟ್ಟಣಗಳಿಗೆ ರಫ್ತಾಗುತ್ತವೆ.

ಇಲ್ಲಿ ರೇಷ್ಮೆ ವಸ್ತ್ರ ತಯಾರಿಕೆ ಬಗ್ಗೆ ಗೊತ್ತಿದ್ದ ಪೂಜಾರ ಅವರು ಉಡುಪಿಯ ಶ್ರೀಕೃಷ್ಣನಿಗೆ ಅರ್ಪಿಸಲು ರೇಷ್ಮೆ ವಸ್ತ್ರ ನೀಡುವಂತೆ ರಾಯಬಾಗಿ ಅವರಿಗೆ ವಿನಂತಿಸಿದರು. ಅದರಂತೆ ರಾಯಬಾಗಿ ತಯಾರಿಸಿಕೊಟ್ಟರು.

ನಾವು ಎಲ್ಲ ರೀತಿಯ ಸೀರೆ, ವಸ್ತ್ರ, ಮಡಿ ತಯಾರಿಸುತ್ತೇವೆ. ಶುದ್ಧ ರೇಷ್ಮೆ ಬೇಕಾದರೆ ಮೊದಲೇ ತಿಳಿಸಿದರೆ ಅವರಿಗೆ ಹೇಗೆ ಬೇಕೋ ಹಾಗೆ ನೇಯ್ದು ಕೊಡುತ್ತೇವೆ. ಗುರುಗಳು ಶ್ರೀಕೃಷ್ಣನಿಗೆ ಒಂದು ಪರಿಶುದ್ಧ ರೇಷ್ಮೆ ವಸ್ತ್ರ ನೇಯ್ದು ಕೊಡಬೇಕು ಎಂದಾಗ ನಮ್ಮ ಸಂತೋಷಕ್ಕೆ ಪಾರವೇ ಇರಲಿಲ್ಲ. ನಾವು ತಯಾರಿಸಿದ ವಸ್ತ್ರ ಶ್ರೀಕೃಷ್ಣನಿಗೆ ಅರ್ಪಿತವಾಗುವುದು ಎಂದರೆ ಅದು ನಮ್ಮ ಪೂರ್ವಜನ್ಮದ ಪುಣ್ಯ ಎಂದು ತಿಳಿದು ಶ್ರದ್ಧೆಯಿಂದ ನೇಯ್ದು ಕೊಟ್ಟಿದ್ದೇವೆ ಎಂದು ನೇಕಾರರಾದ ಹನುಮಂತಸಾ ಮತ್ತು ಮಂಜುನಾಥ ರಾಯಬಾಗಿ ಹರ್ಷ ವ್ಯಕ್ತಪಡಿಸಿದ್ದಾರೆ.

PREV

Recommended Stories

''ಪ್ರಜ್ವಲ್‌ ಬಚಾವ್‌ಗೆ ಆತನ ಪೋಷಕರು ತಂತ್ರ ಮಾಡಿದ್ರು ''
ಸಾರಿಗೆ ಮುಷ್ಕರಿಂದ ನಾಲ್ಕು ನಿಗಮಗಳಿಗೆ 12 ಕೋಟಿ ನಷ್ಟ