ಹನೂರು: ರಾತ್ರಿಯಿಡೀ ಮಳೆ, ಕೆರೆಗಳು ಭರ್ತಿ

KannadaprabhaNewsNetwork |  
Published : Sep 30, 2026, 01:45 AM IST
ಹನೂರಿನ ವಿವಿಧೆಡೆ ರಾತ್ರಿಯಿಡಿ ಮಳೆ - ಕೆರೆಗಳು ಭರ್ತಿ, ಹಲವೆಡೆ ಅವಾಂತರ | Kannada Prabha

ಸಾರಾಂಶ

ಹನೂರು ಮಳೆ ಕೊರತೆಯಿಂದ ಕಂಗಾಲಾಗಿದ್ದ ತಾಲೂಕಿನ ಜನರು ಈಗ ನಿರಾಳರಾಗಿದ್ದಾರೆ. ಗುಂಡ್ಲುಪೇಟೆ, ಹನೂರು ತಾಲೂಕಿನ ಬಹುತೇಕ ಕಡೆ ಸೋಮವಾರ ರಾತ್ರಿಯಿಡೀ ಭರ್ಜರಿ ಮಳೆಯಾಗಿದ್ದು, ಕೆರೆ-ಕಟ್ಟೆಗಳು ತುಂಬಿ ಹರಿಯುತ್ತಿವೆ.

ಕನ್ನಡಪ್ರಭ ವಾರ್ತೆ ಹನೂರು

ಹನೂರು ಮಳೆ ಕೊರತೆಯಿಂದ ಕಂಗಾಲಾಗಿದ್ದ ತಾಲೂಕಿನ ಜನರು ಈಗ ನಿರಾಳರಾಗಿದ್ದಾರೆ. ಗುಂಡ್ಲುಪೇಟೆ, ಹನೂರು ತಾಲೂಕಿನ ಬಹುತೇಕ ಕಡೆ ಸೋಮವಾರ ರಾತ್ರಿಯಿಡೀ ಭರ್ಜರಿ ಮಳೆಯಾಗಿದ್ದು, ಕೆರೆ-ಕಟ್ಟೆಗಳು ತುಂಬಿ ಹರಿಯುತ್ತಿವೆ.

ತಡರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಹುಬ್ಬೆಹುಣಸೆ ಜಲಾಶಯ ಸಂಪೂರ್ಣ ಭರ್ತಿಯಾಗಿ ಕೋಡಿ ಬಿದ್ದಿದೆ. ಜತೆಗೆ ಉಡುತೊರೆ ಜಲಾಶಯ, ತಟ್ಟೆಹಳ್ಳ, ಸ್ವಾಮಿಹಳ್ಳ ಕೆರೆಗಳು ತುಂಬಿ ಸೇತುವೆ ಮೇಲೆ ನೀರು ಹರಿದ ಪರಿಣಾಮ ಹನೂರು ಪಟ್ಟಣದ ಬಡಾವಣೆಗಳಿಗೆ ನೀರು ನುಗ್ಗಿ ನಿವಾಸಿಗಳು ಪರದಾಡಿದ್ದಾರೆ.

ಹುಬ್ಬೆಹುಣಸೆ ಡ್ಯಾಂ ಭರ್ತಿಯಾಗಿ ಕೋಡಿ ಬಿದ್ದು, ತಟ್ಟೆಹಳ್ಳದಲ್ಲಿ ದಿಢೀರನೆ ನೀರು ಹರಿದ ಪರಿಣಾಮ ದೇವಾಂಗಪೇಟೆ ಮತ್ತು ಸುತ್ತಮುತ್ತಲಿನ ವಸತಿ ಪ್ರದೇಶಗಳು ಹಾಗೂ ರಸ್ತೆಗಳು ಸಂಪೂರ್ಣ ಜಲಾವೃತಗೊಂಡವು. ದೇವಾಂಗಪೇಟೆಯ ಮುಖ್ಯ ರಸ್ತೆಯ ಸೇತುವೆ ಮೇಲೆ ಐದಾರು ಅಡಿಗೂ ಹೆಚ್ಚು ನೀರು ಹರಿಯುತ್ತಿದ್ದರಿಂದ ದ್ವೀಪ ಗ್ರಾಮದಂತೆ ಕಂಡುಬಂದ ದೃಶ್ಯದಿಂದ ಪಟ್ಟಣದ ಹೋಲಿ ಎಂಜಲ್ ಶಾಲೆ ಕಾಂಪೌಂಡ್‌ವರೆಗೂ ನೀರು ಹರಿದ ಪರಿಣಾಮ ಭಾರಿ ಅವಾಂತರವೇ ನಡೆದಿದ್ದು, ತಟ್ಟೆ ಹಳ್ಳದ ಮೂಲಕ ಅಪಾರ ಪ್ರಮಾಣವಾದ ನೀರು ಅಪಾಯದ ಮಟ್ಟ ಮೀರಿ ಹರಿದ ಪರಿಣಾಮ ಹಲವಾರು ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ.

ಮಳೆಯಿಂದ ಹಾನಿಗೊಳಗಾದ ಪಟ್ಟಣದ ತಟ್ಟೆ ಹಳ್ಳ ಆಸುಪಾಸಿನ ಮನೆಗಳಿಗೆ ನೀರು ಇರುವುದರಿಂದ ಶಾಸಕ ಎಂ ಆರ್. ಮಂಜುನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಹಾನಿಗೊಳಗಾಗಿರುವ ಮನೆಗಳ ಮಾಲೀಕರಿಗೆ ಸೂಕ್ತ ಪರಿಹಾರ ನೀಡಲು ತಾಲೂಕು ದಂಡಾಧಿಕಾರಿಗಳಿಗೆ ಸೂಚನೆ ನೀಡಿ ಆಗಿರುವ ನಷ್ಟ ಪರಿಹಾರ ನೀಡಲು ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು .

ಭಾರಿ ಮಳೆಗೆ ತುಂಬಿ ಹರಿದ ಸ್ವಾಮಿ ಹಳ್ಳ ತಾತ್ಕಾಲಿಕ ಸೇತುವೆ ಕೊಚ್ಚಿಹೋಗಿ ರೈತರು ಜಮೀನುಗಳಿಗೆ ಹೋಗಿ ಬರಲು ಪ್ರಾಯಶ ಪಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.ನೂತನವಾಗಿ ನಿರ್ಮಾಣ ಮಾಡಲಾಗಿರುವ ಸೇತುವೆ ಕಾಮಗಾರಿ ನಡೆಯುತ್ತಿರುವುದರಿಂದ ತಾತ್ಕಾಲಿಕ ಸೇತುವೆ ನಿರ್ಮಾಣ ಮಾಡಲಾಗಿತ್ತು ಮಳೆಯ ನೀರಿನಿಂದ ಕೊಚ್ಚಿ ಹೋಗಿ ರೈತರು ಪರದಾಡುವಂಥ ಸ್ಥಿತಿ ಉಂಟಾಗಿದೆ. .

ರಾತ್ರಿ ಮಳೆಗೆ ತತ್ತರಿಸಿದ ಮಾರ್ಟಳ್ಳಿ ಗ್ರಾಮ:

ಹನೂರು ತಾಲೂಕಿನ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸೋಮವಾರ ರಾತ್ರಿ ಸುರಿದ ಭಾರಿ ಮಳೆಗೆ ಮನೆಗಳು, ಅಂಗಡಿಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ.

ಸ್ಥಳೀಯ ನಿವಾಸಿಗಳಾದ ರಂಗಮ್ಮ, ಜ್ಯೋತಿ ಎಂಬುವರ ಮನೆಗೆ ಸಂಪೂರ್ಣವಾಗಿ ನೀರು ನುಗ್ಗಿದ್ದು, ಆಹಾರ ಧಾನ್ಯಗಳು, ಬಟ್ಟೆ ಹಾಗೂ ದಿನಬಳಕೆಯ ವಸ್ತುಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಅಷ್ಟೇ ಅಲ್ಲದೆ, ಕುಟುಂಬದ ಜೀವನೋಪಾಯಕ್ಕೆ ಆಸರೆಯಾಗಿದ್ದ 2 ಕುರಿಗಳು ಹಾಗೂ 20 ಕೋಳಿಗಳು ನೆರೆ ನೀರಿನಲ್ಲಿ ಕೊಚ್ಚಿ ಹೋಗಿವೆ ಎಂದು ಸಂತ್ರಸ್ತ ಮಹಿಳೆ ಅಳಲು ತೋಡಿಕೊಂಡಿದ್ದಾರೆ.

ಬರದ ನಡುವೆ ಭರವಸೆ ಮೂಡಿಸಿದ ಮಳೆ:

ಹುಬ್ಬೆಹುಣಸೆ ಜಲಾಶಯ ಸಂಪೂರ್ಣ ಭರ್ತಿಯಾಗಿ ಕೋಡಿ ಬಿದ್ದ ಹಿನ್ನೆಲೆಯಲ್ಲಿ ಹನೂರು ಶಾಸಕ ಎಂ.ಆರ್.ಮಂಜುನಾಥ್ ಬಹುತೇಕ ತಾಲೂಕಿನಾದ್ಯಂತ ಉತ್ತಮ ಮಳೆ ಆಗಿರುವುದರಿಂದ ರೈತರ ಮಗದಲ್ಲೂ ಮಂದಹಾಸ ಮೂಡಿದೆ. ಜೊತೆಗೆ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಳ್ಳಲು ರೈತರಿಗೆ ಅನುಕೂಲವಾಗಿದೆ. ಹೀಗಾಗಿ ಬರದಿಂದ ತತ್ತರಿಸಿರುವ ಜನತೆಗೆ ಅನುಕೂಲ ದಾಯಕವಾಗಿದೆ ಎಂದರು ಮಳೆಯ ಅವಾಂತರದಿಂದ ಕೆಲವು ಮನೆಗಳಿಗೆ ನೀರು ನುಗ್ಗಿ ದವಸ ಧಾನ್ಯಗಳು ಹಾಳಾಗಿವೆ. ಭಾರಿ ಮಳೆಗೆ ಹಲವಾರು ಕಡೆ ಮನೆಗಳು ನೆಲ ಕಚ್ಚಿರುವ ಬಗ್ಗೆ ಸಹ ಮಾಹಿತಿ ಬಂದಿದೆ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಪರಿಶೀಲಿಸಿ ಆಗಿರುವ ನಷ್ಟ ಪರಿಹಾರ ನೀಡಲು ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ರಸ್ತೆಗೆ ಉರುಳಿದ ಬಂಡೆಕಲ್ಲುಗಳು:

ತಡರಾತ್ರಿ ಸುರಿದ ರಣರಕ್ಕಸ ಮಳೆಗೆ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ರಸ್ತೆಗೆ ಬಂಡೆಕಲ್ಲುಗಳು ಉರುಳಿ ಬಿದ್ದಿವೆ. ಸೋಮವಾರ ರಾತ್ರಿ ಸುರಿದ ಭಾರೀ ಮಳೆಗೆ ರಸ್ತೆಯ ಮೇಲೆ ಕಲ್ಲುಗಳು ಹಾಗೂ ಮಣ್ಣು ಬಿದ್ದು ಬೆಟ್ಟದ ಮುಖ್ಯ ರಸ್ತೆಯೇ ಕೆಸರುಮಯವಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬರಗಾಲದಲ್ಲಿ ಹನಿ ನೀರೂ ಬಂಗಾರ: ಸಿಇಒ
ಹಾಸನಾಂಬೆ ಜಾತ್ರೆ ಜಿಲ್ಲೆಯ ಸಾಂಸ್ಕೃತಿಕ ಪರಂಪರೆ ಬಿಂಬಿಸುವಂತಿರಲಿ