- ಚನ್ನಗಿರಿ ಪಟ್ಟಣದಲ್ಲಿ ಸಂಗೀತಯುಕ್ತ ಇಷ್ಟಲಿಂಗ ಮಹಾಪೂಜೆ- ಜನಜಾಗೃತಿ ಧರ್ಮ ಸಮಾರಂಭ - - - ಕನ್ನಡಪ್ರಭ ವಾರ್ತೆ ಚನ್ನಗಿರಿ
ಸನಾತನ ಹಿಂದೂ ಧರ್ಮದಲ್ಲಿ ಒಂದೇ ಸಿದ್ಧಾಂತವಿದ್ದು, ಅದು ಸರ್ವೇಜನೋ ಸುಖಿನೋ ಭವಂತು ಎಂಬ ಧ್ಯೇಯದಲ್ಲಿ ಮುನ್ನಡೆದಿದೆ. ಹಿಂದೂ ಧರ್ಮದಲ್ಲಿ ಪುರೋಹಿತರು ಪ್ರಮುಖರಾದವರು ಎಂದು ವಾರಾಣಸಿಯ ಕಾಶಿಪೀಠದ ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮೀಜಿ ನುಡಿದರು.ಶನಿವಾರ ಸಂಜೆ ಪಟ್ಟಣದ ಶ್ರೀ ಹಾಲಸ್ವಾಮಿ ಸಮುದಾಯ ಭವನದಲ್ಲಿ ವೀರಶೈವ ಲಿಂಗಾಯತ ಸಮಾಜ ಮತ್ತು ಪುರೋಹಿತ ಬಳಗ ಚನ್ನಗಿರಿ ಹಾಗೂ ಹೊದಿಗೆರೆಯ ಶ್ರೀ ದೈವ ಸಂಸ್ಕೃತಿ ಪ್ರತಿಷ್ಠಾನ ಹೊದಿಗೆರೆ ಆಶ್ರಯದಲ್ಲಿ ಲೋಕಕಲ್ಯಾಣಾರ್ಥ ನಡೆದ ಸಂಗೀತಯುಕ್ತ ಇಷ್ಟಲಿಂಗ ಮಹಾಪೂಜೆಯ ಜನಜಾಗೃತಿ ಧರ್ಮ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿರು.
ಪರರ ಹಿತ ಬಯಸುವಂತವರು ಪುರೋಹಿತರು, ಧನಾರ್ಜನೆಗಾಗಿ ಇರುವಂಥವರಲ್ಲ. ವೀರಶೈವ ಸಂಪ್ರದಾಯದವರು ಇಡೀ ದೇಶದಲ್ಲೆಲ್ಲ ಇದ್ದಾರೆ. ಅವರೆಲ್ಲ ಆದಿಗುರು ಶ್ರೀ ರೇಣುಕಾಚಾರ್ಯರ ಆರಾಧಕರಾಗಿದ್ದಾರೆ. ಮಠ-ಮಂದಿರಗಳನ್ನು ಬೆಳೆಸುವಲ್ಲಿ ಶ್ರದ್ಧೆ-ಭಕ್ತಿ ಉಳ್ಳವರಾಗಿದ್ದಾರೆ. ಬ್ರಾಹ್ಮಣ ಎಂಬುದು ಜಾತಿ ಸಂಕೇತವಲ್ಲ ಬ್ರಹ್ಮಜ್ಞಾನ ಪಡೆದುಕೊಂಡು ಇನ್ನೊಬ್ಬರ ಶ್ರೇಯಸ್ಸಿಗೆ ಬೋಧನೆ ಮಾಡುವವರು ಬ್ರಾಹ್ಮಣರು. ಮನಸ್ಸಿಗೆ ಶಾಂತಿ, ಸಮಾಧಾನ ಹಾಗೂ ಆರೋಗ್ಯ ಸಿಗಬೇಕಾದರೆ ಮಠ-ಮಂದಿರಗಳಿಗೆ ಭೇಟಿ ನೀಡಬೇಕು. ಎಂದು ತಿಳಿಸಿದರು.ಎಡೆಯೂರು ಕ್ಷೇತ್ರದ ಬಾಳೆಹೊನ್ನೂರು ಶಾಖಾ ಮಠದ ಶ್ರೀ ರೇಣುಕಾ ಶಿವಾಚಾರ್ಯ ಶ್ರೀ ಮಾತನಾಡಿ, ಐದು ಭಾಷೆಗಳ ಮೇಲೆ ಕಾಶೀಪೀಠದ ಶ್ರೀಗಳು ಪಾಂಡಿತ್ಯ ಪಡೆದಿದ್ದಾರೆ. ಕಾಶೀಪೀಠವು ದಾನ-ಧರ್ಮ ಮಾಡುವುದರಲ್ಲಿ ಶ್ರೇಷ್ಠತೆ ಪಡೆದುಕೊಂಡಿದೆ. ಮಠಕ್ಕೆ ಬರುವ ಭಕ್ತರನ್ನು ಆದರದಿಂದ ಕಾಣುತ್ತಾ ಕಾಶೀಪೀಠದ ಘನತೆಯನ್ನು ಉತ್ತುಂಗ ಶಿಖರಕ್ಕೆ ಏರಿಸಿದವರು ಶ್ರೀಗಳ ಸಾಧನೆಯಾಗಿದೆ ಎಂದರು.
ಸಮಾರಂಭ ಉದ್ಘಾಟಿಸಿದ ಕೈಗಾರಿಕೋದ್ಯಮಿ, ವಿಧಾನ ಪರಿಷತ್ತು ಮಾಜಿ ಸದಸ್ಯ ರುದ್ರೇಗೌಡ ಮಾತನಾಡಿ, ಹಿಂದೂ ಧರ್ಮವನ್ನು ರಕ್ಷಿಸಿದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ. ಪ್ರಪಂಚದ ಎಲ್ಲ ದೇಶಗಳಿಗಿಂತ ಹೆಚ್ಚು ಶಾಂತಿ ನೆಲೆಸಿರುವುದು ಭಾರತದಲ್ಲಿ. ಧರ್ಮ- ಸಂಸ್ಕೃತಿ ಹಾಗೂ ಸಂಪ್ರದಾಯಗಳು ಉಳಿಸುವಲ್ಲಿ ಮಹಿಳೆಯರ ಪಾತ್ರ ಹಿರಿದಾಗಿದೆ ಎಂದರು.ತುಮ್ಕೋಸ್ ಮಾಜಿ ಅಧ್ಯಕ್ಷ ಎಚ್.ಎಸ್. ಶಿವಕುಮಾರ್ ಮಾತನಾಡಿ, ವೀರಶೈವ ಮತ್ತು ಲಿಂಗಾಯತ ಎಂದು ಭಿನ್ನತೆಯನ್ನು ಮಾಡದೇ ನಾವೆಲ್ಲರೂ ಒಂದೆ ಎಂದು ಮುನ್ನಡೆಯಬೇಕು. ನಾವೆಲ್ಲರೂ ಸಮಾನರು ಎಂದು ಹೇಳಿದರು.
ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಮಹಾನೀಯರನ್ನು ಕಾಶೀಪೀಠದ ಶ್ರೀಗಳು ಗೌರವಿಸಿದರು. ದೈವ ಸಂಸ್ಕೃತಿ ಪ್ರತಿಷ್ಠಾನ ಅಧ್ಯಕ್ಷ ಶ್ರೀ ಬೂದಿಸ್ವಾಮಿ ಹಿರೇಮಠ್ ಅವರು ಬರೆದ ಶ್ರೀ ಸಂಕಷ್ಟಹರ ಗಣಪತಿ ವ್ರತ ಎಂಬ ಪುಸ್ತಕವನ್ನು ಬಿಡುಗಡೆ ಗೊಳಿಸಲಾಯಿತು.ಮುಖ್ಯ ಅತಿಥಿಗಳಾಗಿ ತಾವರೆಕೆರೆ ಶಿಲಾಮಠದ ಶ್ರೀ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಚನ್ನಗಿರಿ ಹಿರೇಮಠದ ಶ್ರೀ ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಸ್ವಾಮೀಜಿ, ಅಕ್ಕಿಆಲೂರು ಮುತ್ತಿನ ಕಂತಿ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಚನ್ನಗಿರಿ ಶ್ರೀ ಹಾಲಸ್ವಾಮಿ ವಿರಕ್ತ ಮಠದ ಶ್ರೀ ಬಸವ ಜಯಚಂದ್ರ ಸ್ವಾಮೀಜಿ, ಬಸವಾಪಟ್ಟಣ ಗವಿಮಠದ ಶ್ರೀ ಶಿವಯೋಗಿ ಶಿವಕುಮಾರ ಹಾಲಸ್ವಾಮೀಜಿ, ಹೊದಿಗೆರೆ ಶ್ರೀ ದೈವ ಸಂಸ್ಕೃತಿ ಪ್ರತಿಷ್ಠಾನದ ಅಧ್ಯಕ್ಷ ಶ್ರೀ ಬೂದಿಸ್ವಾಮಿ ಹಿರೇಮಠ, ಜಿಪಂ ಮಾಜಿ ಅಧ್ಯಕ್ಷೆ ಮಂಜುಳಾ ಟಿ.ವಿ. ರಾಜು, ವೀರಶೈವ ಸಮಾಜದ ಗೌರವ ಅಧ್ಯಕ್ಷ ರಾಜಶೇಖರಯ್ಯ, ಪುರಸಭೆ ಸದಸ್ಯ ಬಿ.ಆರ್. ಹಾಲೇಶ್, ಮಾಜಿ ಸದಸ್ಯ ಪಿ.ಆರ್.ಮಂಜುನಾಥ್, ಮಹಾಂತೇಶ ಶಾಸ್ತ್ರಿ, ಸಾಗರದ ಶಿವಲಿಂಗಪ್ಪ, ಎಲ್.ಎಂ. ಉಮಾಪತಿ, ಎಲ್.ಎಂ.ರೇಣುಕಾ, ಮುರುಡಪ್ಪ ಉಪಸ್ಥಿತರಿದ್ದರು.
- - - -20ಕೆಸಿಎನ್ಜಿ2:ಚನ್ನಗಿರಿಯಲ್ಲಿ ಸಂಗೀತ ಯುಕ್ತ ಇಷ್ಟಲಿಂಗ ಮಹಾಪೂಜೆ, ಜನಜಾಗೃತಿ ಧರ್ಮ ಸಮಾರಂಭದಲ್ಲಿ ವಾರಾಣಸಿ ಕಾಶೀಪೀಠದ ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಶ್ರೀ ಮಾತನಾಡಿದರು. ವಿವಿಧ ಮಠಾಧೀಶರು, ಗಣ್ಯರು ಉಪಸ್ಥಿತರಿದ್ದರು.