ಕನ್ನಡಪ್ರಭ ವಾರ್ತೆ ಸುರಪುರ
ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿರುವುದು ತೀವ್ರ ಸಂತಸ ತಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲರ ಹಿತಬಯಸುವ ವ್ಯಕ್ತಿಯಾಗಿದ್ದು, ರಾಜಕೀಯ ಅನುಭವವುಳ್ಳವರಾಗಿದ್ದಾರೆ ಎಂದು ಶಾಸಕ, ನೂತನ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ರಾಜಾ ವೆಂಕಟಪ್ಪ ನಾಯಕ ಹೇಳಿದರು.‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಅವರು, ರಾಜ್ಯದ ಹಿತದೃಷ್ಟಿಯಿಂದ ಒಬ್ಬೊಬ್ಬರಿಗೆ ಒಂದೊಂದು ಹುದ್ದೆ ವಹಿಸುತ್ತಾರೆ. ನಾಲ್ಕು ಬಾರಿ ಶಾಸಕನಾಗಿರುವ ನನಗೆ ಬಯಸದೆ ಬಂದ ಭಾಗ್ಯವಾಗಿದೆ. ನಾನು ಎಂದೂ ಸಚಿವ ಸ್ಥಾನ ಕೊಡಿ, ಅಧ್ಯಕ್ಷ ಸ್ಥಾನ ಕೊಡಿ ಎಂದು ಹೋಗಿಲ್ಲ. ಹೋಗುವುದಿಲ್ಲ. ಮುಖ್ಯಮಂತ್ರಿ ನನ್ನ ಪರಿಶ್ರಮ ಪರಿಗಣಿಸಿ ಸ್ಥಾನ ನೀಡಿದ್ದಾರೆ. ರಾಜ್ಯದ ಅಭಿವೃದ್ಧಿ ನಿಟ್ಟಿನಲ್ಲಿ ಕೆಲಸ ಮಾಡುವೆ. ಉಗ್ರಾಣ ನಿಗಮಕ್ಕೆ ಸಾಧ್ಯವಿರುವ ಎಲ್ಲ ರೂಪುಗಳನ್ನು ಕೊಟ್ಟು ಅಭಿವೃದ್ಧಿ ಪಥದಲ್ಲಿ ಕೊಡೊಯ್ಯುವೆ ಎಂದರು.
ನಮ್ಮ ತಂದೆಯವರಿದ್ದಾಗಲೇ ಪಕ್ಷ ಸಂಘಟಿಸುತ್ತಾ ರಾಜಕೀಯದಲ್ಲಿ ತೊಡಗಿಕೊಂಡು 1987ರಲ್ಲಿ ಪ್ರಥಮ ಬಾರಿಗೆ ಪೇಠ ಅಮ್ಮಾಪುರ ಮಂಡಲ ಪಂಚಾಯತಿ ಪ್ರಧಾನರಾಗಿ ಕಾರ್ಯನಿರ್ವಹಿಸಿದ್ದೇನೆ. ಸುರಪುರ ಮತಕ್ಷೇತ್ರದಿಂದ ಪ್ರಥಮವಾಗಿ 1994ರಲ್ಲಿ ಶಾಸಕನಾಗಿ ಕರ್ನಾಟಕ ವಿಧಾನ ಸಭೆಗೆ ಪ್ರವೇಶಿಸಿದ್ದೇನೆ. ರಾಜಕೀಯದಲ್ಲಿ ಸೋಲು - ಗೆಲುವು ಸಮಾನವಾಗಿ ಕಂಡಿದ್ದೇನೆ ಎಂದು ತಿಳಿಸಿದರು. ರಾಜಕೀಯ ಹಿನ್ನೆಲೆಶಾಸಕ ರಾಜಾ ವೆಂಕಟಪ್ಪನಾಯಕ ಅವರು ಮಾಜಿ ಶಾಸಕ ದಿ. ರಾಜಾ ಕುಮಾರ ನಾಯಕರ ಪುತ್ರ. ನವೆಂಬರ್ 23, 1957ರಲ್ಲಿ ಜನಿಸಿದ್ದಾರೆ. ವಿಧಾನಸಭಾ ಕ್ಷೇತ್ರ ಸುರಪುರ (ಪರಿಶಿಷ್ಟ ಪಂಗಡ)ದಿಂದ ಕಾಂಗ್ರೆಸ್ ಪಕ್ಷನಿಂದ ನಾಲ್ಕು ಬಾರಿ ಗೆಲುವು ಸಾಧಿಸಿದ್ದಾರೆ.
ತಂದೆ ದಿ. ರಾಜಾ ಕುಮಾರ ನಾಯಕ ಅವರು ಕಾಂಗ್ರೆಸ್ (ಐ) ಪಕ್ಷದಿಂದ1957-62ರಿಂದ ಮತ್ತು 1978-83ರವರೆಗೆ 2 ಬಾರಿ ಸುರಪುರ ಮತಕ್ಷೇತ್ರದಲ್ಲಿ ಶಾಸಕರಾಗಿದ್ದರು. ಅಂದಿನಿಂದಲೂ ಅವರು ಹಾಗೂ ಅವರ ಕುಟುಂಬದವರು ಪಕ್ಷ ಸಂಘಟನೆಯಲ್ಲಿ ಇಲ್ಲಿಯವರೆಗೆ ತೊಡಗಿಕೊಂಡಿದ್ದಾರೆ.ರಾಜಾ ವೆಂಕಟಪ್ಪ ನಾಯಕ ಪ್ರಥಮವಾಗಿ 1994, 2000ದಲ್ಲಿ ಕಾಂಗ್ರೆಸ್ ಪಕ್ಷದಿಂದ ವಿಧಾನ ಸಭೆಗೆ ಅತ್ಯಂತ ಬಹುಮತಗಳಿಂದ ಶಾಸಕರಾಗಿ ಆಯ್ಕೆಯಾದರು. 2013ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಪುನಃ ಶಾಸಕರಾಗಿ ಆಯ್ಕೆಯಾದರು. 2018ರಲ್ಲಿ ಪರಾಜಿತಗೊಂಡರೂ ಸಹ ಪಕ್ಷವನ್ನು ತಳಮಟ್ಟದಿಂದ ಸಂಘಟಿಸುತ್ತಾ ಸುರಪುರ ಮತಕ್ಷೇತ್ರದ ಸಮುದಾಯಗಳಾದ ವಾಲ್ಮೀಕಿ, ಕುರುಬ, ಲಿಂಗಾಯತ, ರೆಡ್ಡಿ, ಬಂಜಾರ, ಕಬ್ಬಲಿಗ, ಪರಿಶಿಷ್ಟ ಜಾತಿ, ಮುಸ್ಲಿಂ ಸಮುದಾಯ ಸೇರಿ ಹಿಂದುಳಿದ ಹಾಗೂ ಎಲ್ಲಾ ಸಮುದಾಯಗಳನ್ನು ಸಂಘಟಿಸಿ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. 2023ರ ಚುನಾವಣೆಯಲ್ಲಿ ಪಕ್ಷ ಬಲಪಡಿಸಲಾಗಿತ್ತು. ಈ ಪರಿಶ್ರಮದ ಫಲವಾಗಿ 25,388 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.