ಹರಪನಹಳ್ಳಿ: ಪ್ರತಿ ಕುಟುಂಬದಲ್ಲಿ ಶಾಂತಿ, ತಾಳ್ಮೆಯಿದ್ದರೆ ಮಾತ್ರ ಸುಖಿ ಜೀವನ ಸಾಗಿಸಲು ಸಾಧ್ಯ ಎಂದು ಹೂವಿನಹಡಗಲಿ ಗವಿ ಸಿದ್ದೇಶ್ವರ ಸಂಸ್ಥಾನ ಮಠದ ಡಾ.ಹಿರಿ ಶಾಂತವೀರ ಶ್ರೀ ನವದಂಪತಿಗಳಿಗೆ ತಿಳಿಸಿದ್ದಾರೆ.
ಅವರು ತಾಲೂಕಿನ ಅರಸಿಕೇರಿಯ ಕೋಲಶಾಂತೇಶ್ವರ ಮಠದಲ್ಲಿ ಬಸವ ಜಯಂತಿ ಪ್ರಯುಕ್ತ ಸಾಮೂಹಿಕ ವಿವಾಹ ಹಾಗೂ ಬಸವ ಗುರುಕಿರಣ ಪ್ರಶಸ್ತಿ, ಕೋಲ ಶಾಂತೇಶ್ವರ ಸೇವಾ ಪ್ರಶಸ್ತಿ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಶುಕ್ರವಾರ ಮಾತನಾಡಿದರು.ಅತ್ತೆ-ಮಾವಂದಿರನ್ನು ತಂದೆ-ತಾಯಿಗಳ ರೂಪದಲ್ಲಿ ನೋಡಿಕೊಳ್ಳಬೇಕು. ಆಗ ಮಾತ್ರ ನೆಮ್ಮದಿ ಜೀವನ ನಡೆಸಲು ಸಾಧ್ಯ. ಶಾಂತಲಿಂಗ ದೇಶೀಕೇಂದ್ರ ಶ್ರೀಕಾಯಕ ಯೋಗಿಗಳು, ಕ್ರಿಯಾಶೀಲರು, ಅಕ್ಷರ ದಾಸೋಹದ ಜೊತೆಗೆ ಅನ್ನ ದಾಸೋಹ ಸಹ ನೀಡುತ್ತಿದ್ದಾರೆ ಎಂದು ಪ್ರಶಂಸಿಶಿದರು.
ಬಸವ ಗುರುಕಿರಣ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ತಿಪ್ಪಾಯಿಕೊಪ್ಪ ಗುರು ಮೂಖಪ್ಪ ಶಿವಯೋಗಿಗಳ ಮಠದ ವಿರೂಪಾಕ್ಷ ಶ್ರೀ, ೧೨ನೇ ಶತಮಾನದ ಬಸವಣ್ಣನ ಕಾಲದಲ್ಲಿ ಕಾಯಕವೇ ಪ್ರಧಾನವಾಗಿತ್ತು. ಜಾತಿಯನ್ನು ಹೊಡೆದೋಡಿಸಿ ಎಲ್ಲರೂ ಸಮಾನರು ಎಂದು ಸಾರಿದರು. ಎಲ್ಲರೂ ಇಷ್ಟಲಿಂಗ ಪೂಜೆ ಮಾಡಬೇಕು. ಅನುಭವ ಮಂಟಪದಲ್ಲಿ ಇಷ್ಟಲಿಂಗ ಪೂಜೆ ಮಾಡುವವರಿಗೆ ಮಾತ್ರ ಅವಕಾಶವಿತ್ತು. ಶಿವ ಶರಣೆಯರು ಬಸವಣ್ಣನವರ ವಚನ ಸಾಹಿತ್ಯವನ್ನು ಪಾಲಿಸುತ್ತಿದ್ದರು ಎಂದು ಹೇಳಿದರು.ಮಠದಲ್ಲಿ ಪ್ರತಿವರ್ಷ ಸಾಮೂಹಿಕ ವಿವಾಹಗಳು, ಕೊಟ್ಟೂರು ರಥೋತ್ಸವದ ಪಾದಯಾತ್ರೆಗಳಿಗೆ ಅನ್ನ ದಾಸೋಹ, ಶೈಕ್ಷಣಿಕ ಪ್ರಗತಿ, ಸಾಮಾಜಿಕ ಕಾರ್ಯಕ್ರಮದಲ್ಲಿ ಭಾಗಿಯಾಗುವುದು, ಎಲ್ಲ ಸಮಾಜದವರನ್ನು ಸಮಾನತೆಯಿಂದ ಕಾಣುವುದು, ಬಸವಣ್ಣನವರ ತತ್ವ ಸಿದ್ಧಾಂತಗಳನ್ನು ಪಾಲಿಸಿಕೊಂಡು ಬಂದು ಕೋಲಶಾಂತೇಶ್ವರ ಮಠವನ್ನು ಅಭಿವೃದ್ಧಿ ಪಡಿಸಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೋಲ ಶಾಂತೇಶ್ವರ ಸೇವಾ ಪ್ರಶಸ್ತಿಯನ್ನುದಾವಣಗೆರೆಯ ಪ್ರಖ್ಯಾತ ಶಿಲ್ಪಿ ಟಿ.ಶಿವ ಶಂಕರ್ ಅವರಿಗೆ, ಬಸವ ಗುರುಕಿರಣ ಪ್ರಶಸ್ತಿಯನ್ನು ತಿಪ್ಪಾಯಿಕೊಪ್ಪದ ಗುರು ಮೂಖಪ್ಪ ಶಿವಯೋಗಿಗಳ ಮಠದ ವಿರೂಪಾಕ್ಷ ಶ್ರೀಗೆ ನೀಡಲಾಯಿತು.ಸಂಗೀತ ಕಾರ್ಯಕ್ರಮವನ್ನು ಕಲ್ಗುರಿ ಬಸವ ವಿಶ್ವ ವಿದ್ಯಾಲಯದ ಪ್ರೊಫೆಸರ್ ರೇವಯ್ಯ ವಸ್ತ್ರದಮಠ ನಡೆಸಿಕೊಟ್ಟರು.
ಸಾನಿಧ್ಯವನ್ನುಅರಸಿಕೇರಿಯ ಕೋಲಶಾಂತೇಶ್ವರಮಠದ ಶಾಂತಲಿಂಗ ದೇಶೀಕೇಂದ್ರ ಶ್ರೀ ವಹಿಸಿದ್ದರು. ಮುಖಂಡರಾದ ವೈ.ಡಿ. ಅಣ್ಣಪ್ಪ, ಪ್ರಶಾಂತ್ ಪಾಟೇಲ್, ವೃಷಭೇಂದ್ರಯ್ಯ, ಇಟಗಳ್ಳಿ ಬಸವರಾಜ್, ಎಚ್.ಕೊಟ್ರೇಶ್, ಕೆ. ಬಸವರಾಜ್, ಡಾ.ಎಂ. ಸುರೇಶ್, ವೆಂಕಟೇಶ್, ಮರಿಯಪ್ಪ ಪೂಜಾರ್, ಎ.ಎಚ್. ನವೀನ್ ಇದ್ದರು.