ಕನ್ನಡಪ್ರಭ ವಾರ್ತೆ ದಾವಣಗೆರೆ
ರಾಜ್ಯ ಲಂಬಾಣಿ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ದಾವಣಗೆರೆ ಹಿರಿಯ ವಕೀಲ ಎನ್.ಜಯದೇವ ನಾಯ್ಕರನ್ನು ರಾಜ್ಯ ಸರ್ಕಾರ ನೇಮಕ ಮಾಡಿ, ಆದೇಶ ಹೊರಡಿಸಿರುವುದಕ್ಕೆ ಕಾಂಗ್ರೆಸ್ ಪಕ್ಷದ ಜಿಲ್ಲಾ ಕಾನೂನು ವಿಭಾಗ ಸ್ವಾಗತಿಸಿದೆ.ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಪಕ್ಷದ ಕಾನೂನು ವಿಭಾಗದ ಜಿಲ್ಲಾಧ್ಯಕ್ಷ, ಹಿರಿಯ ವಕೀಲ ಪ್ರಕಾಶ ಪಾಟೀಲ್, ದಾವಣಗೆರೆ ಹಿರಿಯ ವಕೀಲರಾದ ಜಯದೇವ ನಾಯ್ಕರಿಗೆ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಹಿನ್ನೆಲೆ ಅಭಿನಂದಿಸುತ್ತೇವೆ ಎಂದರು.
ಕಾಂಗ್ರೆಸ್ ಪಕ್ಷವು ಒಬ್ಬ ನಿಷ್ಟಾವಂತ ಹಿರಿಯ ಕಾರ್ಯಕರ್ತ, ವಕೀಲರನ್ನು ಗುರುತಿಸಿ, ನಿಗಮದ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದು ನಿಜಕ್ಕೂ ಹರ್ಷದ ಸಂಗತಿಯಾಗಿದೆ. ಸ್ವತಃ ವಕೀಲರೂ ಆದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ, ಕಾನೂನು ಘಟಕದ ಅಧ್ಯಕ್ಷ, ಹೈಕೋರ್ಟ್ ವಕೀಲ, ಶಾಸಕ ಪೊನ್ನಣ್ಣ, ಹಿರಿಯ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಸಚಿವ ಎಸ್ಸೆಸ್ ಮಲ್ಲಿಕಾರ್ಜುನರಿಗೆ ಕಾನೂನು ಘಟಕ ಕೃತಜ್ಞತೆ ಸಲ್ಲಿಸುತ್ತದೆ ಎಂದರು.ರಾಜ್ಯ ಸರ್ಕಾರವು ಪಕ್ಷದ ನಿಷ್ಟಾವಂತ ವಕೀಲರಿಗೆ ಸರ್ಕಾರದ ವಿವಿಧ ನಿಗಮ ಮಂಡಳಿಗಳು, ಸ್ಥಳೀಯ ಪ್ರಾಧಿಕಾರಗಳಿಗೆ, ಸ್ಥಳೀಯ ಸಂಸ್ಥೆಗಳಲ್ಲೂ ಆದ್ಯತೆ, ಅವಕಾಶ ನೀಡುವ ಮೂಲಕ ಪಕ್ಷವನ್ನು ಮತ್ತಷ್ಟು ಬಲ ಪಡಿಸಲು ಶಕ್ತಿ ತುಂಬಬೇಕು. ಮುಂಬರುವ ದಿನಗಳಲ್ಲಿ ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರಕ್ಕೂ ವಕೀಲರಿಗೆ ಅವಕಾಶ ನೀಡಬೇಕೆಂಬ ಮನವಿಯನ್ನು ನಮ್ಮ ರಾಜ್ಯ, ಜಿಲ್ಲಾ ನಾಯಕರಿಗೂ ಮಾಡುತ್ತೇವೆ ಎಂದು ಪ್ರಕಾಶ ಪಾಟೀಲ್ ಹೇಳಿದರು.
ಪಕ್ಷದ ಕಾನೂನು ವಿಭಾಗದ ಪದಾಧಿರಕಾರಿಗಳು, ವಕೀಲರಾದ ಎಂ.ನಾಗೇಂದ್ರಪ್ಪ, ಕಂಚಿಕೆರೆ ಮಂಜಪ್ಪ, ನೀಲಾನಹಳ್ಳಿ ಎನ್.ಎಂ.ಆಂಜನೇಯ ಗುರೂಜಿ, ಸೈಯದ್ ಖಾದರ್ ಸಾಬ್, ಕೃಷ್ಣ ನಾಯ್ಕ, ಆನಂದ, ಪ್ರದೀಪ ಲೋಕಿಕೆರೆ ಇತರರು ಇದ್ದರು.