ಹೊಸಪೇಟೆ: ವಿಶ್ವ ವಿಖ್ಯಾತ ಹಂಪಿಯಲ್ಲಿ 80ನೇ ಸ್ವಾತಂತ್ರ್ಯೋತ್ಸವ ಸಂಭ್ರಮ ಮನೆ ಮಾಡಿದ್ದು, ಪ್ರಮುಖ ಸ್ಮಾರಕಗಳ ಬಳಿ ಪ್ರವಾಸಿಗರಿಗಾಗಿ ಸೆಲ್ಪಿ ಪಾಯಿಂಟ್ ಸ್ಥಾಪಿಸಲಾಗಿದೆ.
ಪ್ರತಿಯೊಬ್ಬರಲ್ಲಿಯೂ ದೇಶದ ಬಗ್ಗೆ ಅಭಿಮಾನ, ಸ್ವಾತಂತ್ರ್ಯ ದಿನಾಚರಣೆ ಮತ್ತು ರಾಷ್ಟ್ರಧ್ವಜದ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಹರ್ ಘರ್ ತಿರಂಗಾ ಸೆಲ್ಫಿಪಾಯಿಂಟ್ ಹಂಪಿಯಲ್ಲಿ ಸ್ಥಾಪಿಸಲಾಗಿದೆ. ಹಂಪಿಯ ಹಜಾರರಾಮ ದೇವಸ್ಥಾನದ ಗೋಡೆಗೆ ತಿರಂಗಾ ಧ್ವಜದ ಲೇಸರ್ ಶೋ ಹಮ್ಮಿಕೊಳ್ಳಲಾಗಿದೆ.
ಹಂಪಿಯಲ್ಲಿ ಈ ವರ್ಷ ಸ್ವಾತಂತ್ರ್ಯೋತ್ಸವ ಸಮಾರಂಭದ ಸಂಭ್ರಮ ಗಮನ ಸೆಳೆಯಲಿದೆ. ಪಾಯಿಂಟ್‌ನಲ್ಲಿ ಕ್ಯೂಆರ್ ಕೋಡ್ ಇದ್ದು, ಇದನ್ನು ಸ್ಕ್ಯಾನ್ ಮಾಡಿ, ಪ್ರವಾಸಿಗರು ತಮ್ಮ ಫೋಟೋಗಳನ್ನು ಅಪ್‌ಲೋಡ್ ಮಾಡಬಹುದು. ಸ್ವಾತಂತ್ರ್ಯೋತ್ಸವ ದಿನಾಚರಣೆ ಸಂಭ್ರಮಕ್ಕಾಗಿ ವೀಕೆಂಡ್‌ನಲ್ಲಿ ಹಂಪಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವ ಸಾಧ್ಯತೆ ಇದೆ. ಸೆಲ್ಪಿ ಪಾಯಿಂಟ್ ಇನ್ನಷ್ಟು ಗಮನ ಸೆಳೆಯಲಿದೆ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಹಂಪಿ ವೃತ್ತದ ಅಧೀಕ್ಷಕ ಕೆ. ರಾಮಕೃಷ್ಣ ರೆಡ್ಡಿ ತಿಳಿಸಿದರು.ಹೊಸಪೇಟೆಯಲ್ಲಿ ನಾಳೆ ಧ್ವಜಾರೋಹಣ: ವಿಜಯನಗರ ಜಿಲ್ಲಾಡಳಿತದಿಂದ ಆ. 15ರಂದು ಬೆಳಗ್ಗೆ 9ಕ್ಕೆ ಹೊಸಪೇಟೆ ನಗರದ ಜಿಲ್ಲಾ ಕ್ರೀಡಾಂಗದಲ್ಲಿ 80ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಹಮ್ಮಿಕೊಳ್ಳಲಾಗಿದೆ.ವಸತಿ ಸಚಿವ ಬಿ.ಜೆಡ್. ಜಮೀರ್ ಅಹಮದ್ ಖಾನ್ ಅವರು ಬೆಳಗ್ಗೆ 9 ಗಂಟೆಗೆ ರಾಷ್ಟ್ರಧ್ವಜಾರೋಹಣ ನೆರವೇರಿಸುವರು. ಆನಂತರ ಪರೇಡ್ ವೀಕ್ಷಣೆ ಮಾಡಿ ಗೌರವ ಸ್ವೀಕರಿಸುವರು. 9.45ಕ್ಕೆ ಸಚಿವರು ಸ್ವಾತಂತ್ರ್ಯೋತ್ಸವ ಸಂದೇಶ ನೀಡುವರು. ಜಿಲ್ಲೆಯ ಸಾಧಕರನ್ನು ಗೌರವಿಸಲಾಗುವುದು. ತದನಂತರ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.ಶಾಸಕ ಎಚ್.ಆರ್. ಗವಿಯಪ್ಪ ಅಧ್ಯಕ್ಷತೆ ವಹಿಸುವರು. ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಉಪಾಧ್ಯಕ್ಷ ಪಿ.ಟಿ. ಪರಮೇಶ್ವರ ನಾಯ್ಕ, ಸಂಸದರಾದ ಈ. ತುಕಾರಾಂ, ಡಾ. ಪ್ರಭಾ ಮಲ್ಲಿಕಾರ್ಜುನ, ಜಿಲ್ಲೆಯ ಶಾಸಕರು, ವಿಧಾನಪರಿಷತ್ ಸದಸ್ಯರು, ಅಧಿಕಾರಿಗಳು ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.