ಕೂಡ್ಲಿಗಿ: ಭಕ್ತರ ಧನಸಹಾಯದಲ್ಲೇ ನಿತ್ಯ ದಾಸೋಹ, ಅನಾಥ, ಕಡುಬಡ ಮಕ್ಕಳಿಗೆ ಉಚಿತ ಶಿಕ್ಷಣ ಕಲ್ಪಿಸಲು ಸಾಧ್ಯವಾಗಿದೆ. ಹರಿಹರ ಪೀಠದಲ್ಲಿ ಪ್ರತಿ ವರ್ಷ ಜ.15ರಂದು ಹರ ಜಾತ್ರೆ ಆರಂಭಿಸಿರುವುದು ಪಂಚಮಸಾಲಿ ಸಮುದಾಯವನ್ನು ಒಗ್ಗಟ್ಟಿಸುವ ಉದ್ದೇಶವಾಗಿದೆ ಎಂದು ಹರಿಹರ ಪೀಠದ ಪೀಠಾಧ್ಯಕ್ಷ ವಚನಾನಂದ ಸ್ವಾಮೀಜಿ ತಿಳಿಸಿದರು.
2ಎ ಮೀಸಲಾತಿ ಹೋರಾಟ ಮುಂದುವರಿಸುತ್ತಾ, ಬೃಹತ್ ಉದ್ಯೋಗ ಮೇಳ ನಡೆಸಲಾಗಿದೆ. 18 ವಿವಿ ಕುಲಪತಿಗಳೊಂದಿಗೆ ಶೃಂಗಸಭೆ ನಡೆಸಲಾಗಿದೆ. ತರಳಬಾಳು ಉತ್ಸವದ ಮಾದರಿಯಲ್ಲಿ ನಮ್ಮ ಹರ ಜಾತ್ರೆ ಮಾಡುವ ಮೂಲಕ ಕೃಷಿ ಮೇಳ, ಹರ ಮಾಲೆ ಸೇರಿ ನಾನಾ ಕಾರ್ಯಗಳನ್ನು ಮಾಡಬೇಕಾಗಿದೆ ಎಂದರು.
ಪಂಚಮಸಾಲಿ ಸಮುದಾಯದ ಹರಿಹರ ಪೀಠವನ್ನು ಅಕ್ಷರ, ಅನ್ನ, ಆಶ್ರಯದ ಜತೆಗೆ ಧ್ಯಾನ, ಯೋಗಾಭ್ಯಾಸದಂಥ ಪಂಚ ದಾಸೋಹದ ಪೀಠವನ್ನಾಗಿ ಮಾಡುವ ಸಂಕಲ್ಪ ಹೊಂದಿದ್ದೇವೆ ಎಂದು ತಿಳಿಸಿದರು.ಪಂಚಮಸಾಲಿ ಸಂಘದ ರಾಜ್ಯಾಧ್ಯಕ್ಷ ಸೋಮನಗೌಡ ಮಾತನಾಡಿ, ಪೀಠದ ಸ್ವಾಮೀಜಿ ಮತ್ತು ನಾನು ಸೇರಿದಂತೆ ಮುಖಂಡರು ರಾಜ್ಯಾದ್ಯಂತ ಪ್ರವಾಸ ಮಾಡಿ ಹರ ಜಾತ್ರೆಗೆ ಬರುವಂತೆ ಸಭೆ ಮಾಡಲಾಗಿದೆ. ಜಾತ್ರೆಗೆ ಬರುವ ಪ್ರತಿ ಮಹಿಳೆಗೆ ಕಂಕಣ ಕಟ್ಟಿ, ಕುಂಕುಮ ಇಡುವ ಸಂಪ್ರದಾಯ ಮಾಡಿದ್ದೇವೆ. ರೈತರಿಗೆ ಹೆಣ್ಣು ಕೊಡಲ್ಲ ಎಂಬ ಅಪವಾದ ಹೋಗಲಾಡಿಸಲು ಜಾತ್ರೆ ಸಂದರ್ಭದಲ್ಲಿ ವಧು-ವರರ ಅನ್ವೇಷಣೆಯನ್ನು ನಡೆಸುತ್ತಿದ್ದು, ಬಯೋಡೆಟಾ ತರುವಂತೆ ತಿಳಿಸಿದರು. ಎಲ್ಲರೂ ಹಣ ನೀಡಿ ಸಹಕಾರ ಕೊಟ್ಟರೆ ರಥ ನಿರ್ಮಿಸಲಾಗುವುದು. ಪ್ರೋತ್ಸಾಹ ಸಿಗದಿದ್ದರೆ ನಾನು ಎರಡು ಎಕರೆ ಜಮೀನು ಮಾರಾಟ ಮಾಡಿ ತೇರು ನಿರ್ಮಿಸಲಾಗುವುದು ಎಂದು ತಿಳಿಸಿದರು.
ಹರಿಹರದಲ್ಲಿ ಜ.15ರಂದು ನಡೆಯುವ ಹರ ಜಾತ್ರೆಗೆ ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಯಶಸ್ವಿಗೊಳಿಸೋಣ ಎಂದು ತಿಳಿಸಿದರು.
ಗುಳಿಗಿ ವೀರೇಂದ್ರ ಅವರ ಜನ್ಮದಿನಕ್ಕೆ 20 ಕ್ವಿಂಟಲ್ ಅಕ್ಕಿಯನ್ನು ನೀಡಿದ್ದು ಅನ್ನದಾಸೋಹಕ್ಕೆ ಆಸರೆಯಾಗಿದೆ ಎಂದು ತಿಳಿಸಿದರು.
ಪಂಚಮಸಾಲಿ ಸಂಘದ ಯುವ ಘಟಕದ ರಾಜ್ಯಾಧ್ಯಕ್ಷ ಕಿಚಿಡಿ ಕೊಟ್ರೇಶ್ ಮಾತನಾಡಿ, ಕಿತ್ತೂರು ರಾಣಿ ಚೆನ್ನಮ್ಮ, ಬೆಳವಡಿ ಮಲ್ಲಮ್ಮ, ಅಕ್ಕಮಹಾದೇವಿಯಂಥ ಮಹಿಳಾ ಸಾಧಕರು ಪಂಚಮಸಾಲಿ ಸಮುದಾಯದವರು ಎನ್ನುವ ಹೆಮ್ಮೆಯಿದೆ ಎಂದು ತಿಳಿಸಿದರು.