ಕೂಡ್ಲಿಗಿ: ತಾಲೂಕಿನ ಹಾರಕಬಾವಿ ಗ್ರಾಮದಲ್ಲಿ ಹೆಣ ಹೂಳಲಿಕ್ಕೂ ಪರದಾಡಬೇಕಾದ ದುಸ್ಥಿತಿ ಇದೆ. ಈ ಸಮಸ್ಯೆ ಇಂದು ನಿನ್ನೆಯದಲ್ಲ. ನೂರಾರು ವರ್ಷಗಳ ಕಾಲ ಎಲ್ಲ ವರ್ಗಗಳ ಜನತೆಯ ಸಮಸ್ಯೆ. ಈ ಸಮಸ್ಯೆಗೆ ಮುಕ್ತಿ ದೊರೆತಿಲ್ಲ.
ಊರ ಪಕ್ಕದಲ್ಲಿಯ ಕಟ್ಟೆಯೊಂದರಲ್ಲಿ ನೀರು ಶೇಖರಣೆಯಾಗಿ ಅದರ ಜಿನುಗು ನೀರು 12 ಅಡಿ ಅಗಲದ ಹಳ್ಳದ ಮೂಲಕ ಹರಿಯುತ್ತಿದೆ. ಈ ಹಳ್ಳದಲ್ಲೂ ಗಿಡ-ಮರ, ಮುಳ್ಳು, ಕಸಕಡ್ಡಿಗಳು ತುಂಬಿಹೋಗಿದೆ. ಸ್ವಚ್ಛತೆಯಂತೂ ಇಲ್ವೇ ಇಲ್ಲ. ಈ ಊರಿನಲ್ಲಿ ಸ್ಮಶಾನ ಇಲ್ಲದಿರುವುದರಿಂದ ಈ ಹಳ್ಳವನ್ನೇ ಸ್ಮಶಾನ ಮಾಡಿಕೊಂಡ ಗ್ರಾಮಸ್ಥರಿಗೆ ಹೆಣ ಹೂಳುವುದೇ ಸಮಸ್ಯೆಯಾಗಿದೆ.
ಜನತೆ ಮುಳ್ಳುಗಿಡಗಳ ಮೇಲೆ ನಿಲ್ಲಬೇಕು. ಕೊಚ್ಚೆ ನೀರಿನಲ್ಲಿ ನಡೆದು ಹೋಗಬೇಕು. ತಗ್ಗು ತೋಡುವಾಗ ನೀರು ಬರುತ್ತದೆ. ಆ ನೀರನ್ನು ಎಷ್ಟು ಸಾರಿ ಎತ್ತಿ ಹೊರಗೆ ಹಾಕಿದರೂ ಪುನಃ ನೀರು ಬಂದು ತಗ್ಗಿನಲ್ಲಿ ಶೇಖರಣೆಯಾಗುತ್ತದೆ. ಹೀಗಾಗಿ ನೀರಿನಲ್ಲಿಯೇ ಹೆಣ ಹೂಳುತ್ತಾರೆ. ಸತ್ತಾಗ ಸಂಸ್ಕಾರ ಮಾಡಲು ಸಹ ಸೂಕ್ತ ಸ್ಮಶಾನವಿಲ್ಲ. ಇಲ್ಲಿಯ ಜನತೆಗೆ ಸತ್ತಾಗ ಸಾವಿಗಿಂತ ಮುಖ್ಯವಾಗಿ ಹೆಣ ಹೂಳುವುದು ಹೇಗಪ್ಪ ಎನ್ನುವ ಆತಂಕ ಕಾಡುತ್ತಿದೆ. ಕೆಲವರು ತಮ್ಮ ಜಮೀನುಗಳಲ್ಲಿಯೇ ಅಂತ್ಯಸಂಸ್ಕಾರ ಮಾಡುತ್ತಾರೆ.ಹಾರಕಬಾವಿ ಗ್ರಾಮ ಮೂಲೆಕಟ್ಟಿನ ಪುಟ್ಟ ಹಳ್ಳಿಯಲ್ಲ. ಇದು ಗ್ರಾಪಂ ಕೇಂದ್ರಸ್ಥಾನ. ಇಲ್ಲಿಯೇ ಸಾವಿರಾರು ಕುಟುಂಬಗಳಿಗೆ ಸುವ್ಯವಸ್ಥಿತ ಸ್ಮಶಾನ ಇಲ್ಲವೆಂದರೆ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡುತ್ತದೆ. ವೀರಶೈವರ ರುದ್ರಭೂಮಿ ಪ್ರತ್ಯೇಕ ಇದ್ದರೂ ಅಲ್ಲಿಯೂ ಮುಳ್ಳುಗಿಡ-ಗಂಟೆ ತುಂಬಿವೆ. ಅವರಿಗೂ ಹಳ್ಳವೇ ಗತಿ. ಇದ್ದುದರಲ್ಲಿಯೇ ಇವರ ಸ್ಥಿತಿ ಉತ್ತಮ. ಉಳಿದಂತೆ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗದವರು ಎಲ್ಲರೂ ಇದೇ ಪುಟ್ಟ ಹಳ್ಳದಲ್ಲಿಯೇ ಹೂಳಬೇಕಾದ ಅನಿವಾರ್ಯತೆ ಇದೆ.