ಫಸಲ್ ಭೀಮಾದಲ್ಲಿ ಮಧ್ಯವರ್ತಿಗಳ ಹಾವಳಿ: ಹಾರಕನಾಳು ಗ್ರಾಪಂಗೆ ಮುತ್ತಿಗೆ

KannadaprabhaNewsNetwork |  
Published : Apr 07, 2026, 02:30 AM IST
ಫಸಲ್ ಭೀಮಾ ಯೋಜನೆಯಡಿ ರೈತರಿಗೆ ಸಿಗಬೇಕಾದ ವಿಮಾ ಹಣದಲ್ಲಿ ಮಧ್ಯವರ್ತಿಗಳ ಹಸ್ತಕ್ಷೇಪ ಹೆಚ್ಚುತ್ತಿದೆ ಎಂದು ಆರೋಪಿಸಿ ರೈತರು  ಹರಪನಹಳ್ಳಿ ತಾಲೂಕಿನ ಹಾರಕನಾಳು ಗ್ರಾ.ಪಂ ಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. | Kannada Prabha

ಸಾರಾಂಶ

ಫಸಲ್ ಭೀಮಾ ಯೋಜನೆಯಡಿ ರೈತರಿಗೆ ಸಿಗಬೇಕಾದ ವಿಮಾ ಹಣದಲ್ಲಿ ಮಧ್ಯವರ್ತಿಗಳ ಹಸ್ತಕ್ಷೇಪ ಹೆಚ್ಚಾಗುತ್ತಿದೆ ಎಂದು ಆರೋಪಿಸಿ ಹರಪನಹಳ್ಳಿ ತಾಲೂಕಿನ ಹಾರಕನಾಳು ಗ್ರಾಮ ಪಂಚಾಯಿತಿಗೆ ಸೋಮವಾರ ರೈತರು ಮುತ್ತಿಗೆ ಹಾಕಿ ತೀವ್ರ ಪ್ರತಿಭಟನೆ ನಡೆಸಿದರು.

ಹರಪನಹಳ್ಳಿ: ಫಸಲ್ ಭೀಮಾ ಯೋಜನೆಯಡಿ ರೈತರಿಗೆ ಸಿಗಬೇಕಾದ ವಿಮಾ ಹಣದಲ್ಲಿ ಮಧ್ಯವರ್ತಿಗಳ ಹಸ್ತಕ್ಷೇಪ ಹೆಚ್ಚಾಗುತ್ತಿದೆ ಎಂದು ಆರೋಪಿಸಿ ಹರಪನಹಳ್ಳಿ ತಾಲೂಕಿನ ಹಾರಕನಾಳು ಗ್ರಾಮ ಪಂಚಾಯಿತಿಗೆ ಸೋಮವಾರ ರೈತರು ಮುತ್ತಿಗೆ ಹಾಕಿ ತೀವ್ರ ಪ್ರತಿಭಟನೆ ನಡೆಸಿದರು.

ಅಖಿಲ ಭಾರತ ಕಿಸಾನ್ ಸಂಘಟನೆ ನೇತೃತ್ವದಲ್ಲಿ ನಡೆದ ಈ ಹೋರಾಟದಲ್ಲಿ ಹಲವಾರು ರೈತರು ಭಾಗವಹಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಭಾಗವಹಿಸಿದ ರೈತರು ಮಧ್ಯವರ್ತಿಗಳ ಹಾವಳಿ ತಡೆದು ವಿಮಾ ಹಣ ನೇರವಾಗಿ ರೈತರ ಖಾತೆಗೆ ಜಮಾ ಮಾಡಬೇಕು ಎಂದು ಆಗ್ರಹಿಸಿದರು. ಫಸಲ್ ಭೀಮಾ ಯೋಜನೆಯ ಉದ್ದೇಶ ರೈತರನ್ನು ಸಂಕಷ್ಟದಿಂದ ರಕ್ಷಿಸುವುದಾದರೂ ಮಧ್ಯವರ್ತಿಗಳ ಹಸ್ತಕ್ಷೇಪದಿಂದ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಅಖಿಲ ಭಾರತ ಕಿಸಾನ್ ಸಭಾ ಜಿಲ್ಲಾ ಅಧ್ಯಕ್ಷ ಗುಡಿಹಳ್ಳಿ ಹಾಲೇಶ್ ಆರೋಪಿಸಿದರು.

ತಾಲೂಕು ಕಾರ್ಯದರ್ಶಿ ರಮೇಶ್ ನಾಯ್ಕ ಮಾತನಾಡಿ, ರೈತರಿಗೆ ಸಿಗಬೇಕಾದ ವಿಮಾ ಹಣವನ್ನು ಮಧ್ಯವರ್ತಿಗಳು ಕಮಿಷನ್ ಹೆಸರಿನಲ್ಲಿ ದೋಚುತ್ತಿದ್ದಾರೆ. ಸರ್ಕಾರ ತಕ್ಷಣವೇ ಇದನ್ನು ನಿಲ್ಲಿಸಿ ನೇರ ಹಣ ವರ್ಗಾವಣೆ ಬಲಪಡಿಸಬೇಕು ಎಂದು ಆಗ್ರಹಿಸಿದರು.

ನಾವು ಬೆಳೆ ನಷ್ಟ ಅನುಭವಿಸಿದರೂ ವಿಮಾ ಹಣ ಸಿಗಲು ಕಚೇರಿಗಳಿಗೆ ಸುತ್ತಾಡಬೇಕು. ಮಧ್ಯವರ್ತಿಗಳಿಲ್ಲದೆ ಯಾವುದೇ ಕೆಲಸ ಸಾಗುವುದಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರತಿ ಹಂತದಲ್ಲೂ ರೈತರಿಂದ ಹಣ ವಸೂಲಿ ಮಾಡಲಾಗುತ್ತಿದೆ. ಇದರಿಂದ ಸಣ್ಣ ರೈತರು ತುಂಬಾ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಸರಕಾರ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು.

ಯುವ ಮುಖಂಡ ಎಲ್.ಬಿ. ಹಾಲೇಶ್ ನಾಯ್ಕ ಮಾತನಾಡಿ, ಮಧ್ಯವರ್ತಿಗಳ ಹಾವಳಿ ಮುಂದುವರಿದರೆ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು. ರೈತರಿಗೆ ನ್ಯಾಯ ಸಿಗುವ ವರೆಗೆ ಹೋರಾಟ ನಿಲ್ಲುವುದಿಲ್ಲ” ಎಂದು ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ಎಲ್. ಮಂಜ್ಯಾನಾಯ್ಕ ಹಾಗೂ ಬಸವರಾಜ ಹಾವೇರಿ ಮಾತನಾಡಿದರು.

ಪ್ರತಿಭಟನೆಯ ಸುದ್ದಿ ತಿಳಿದು ಸ್ಥಳಕ್ಕೆ ಹರಪನಹಳ್ಳಿ ತಹಸೀಲ್ದಾರ್ ಗುರು ಬಸವರಾಜ ಭೇಟಿ ನೀಡಿ ರೈತರ ಮನವಿ ಸ್ವೀಕರಿಸಿದರು.

ಕೃಷಿ ಅಧಿಕಾರಿಗಳಾದ ನಾಗರಾಜ್, ಸಂಗಪ್ಪ ಹಾಗೂ ತಾಪಂ ಇಒ ಚಂದ್ರಶೇಖರ್ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ, ಮೇಲಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಪಿಎಸ್ಐ ನಾಗರತ್ನಮ್ಮ ಹಾಗೂ ಸಿಬ್ಬಂದಿ ಬಂದೋಬಸ್ತ್‌ ಕೈಗೊಂಡಿದ್ದರು

ಈ ಸಂದರ್ಭದಲ್ಲಿ ಹಾರಕನಾಳು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಿವಪ್ಪ, ಸೆಕ್ರೆಟರಿ ಲಕ್ಷ್ಮೀಕಾಂತ್, ಕರವಸೂಲಿಗಾರ ಪಕ್ಜಿರಪ್ಪ, ಸ್ವಾಮಿನಾಯ್ಕ ಹುಲಿಕಟ್ಟಿ ವೀರೇಶ್ ಬಾಸು ಸಾಹೇಬ್, ,ಎಲ್‌.ಬಿ. ಮಂಜ್ಯಾನಾಯ್ಕ, ಬದ್ಯಾನಾಯ್ಕ, ಹನುಮಂತ ನಾಯ್ಕ, ಲೋಕ್ಯಾ ನಾಯ್ಕ, ಶಶಿ ಪುಜಾರ್, ಲಕ್ಕಪ್ಪ, ರಾಜಪ್ಪ, ಗೋಣಿ ಸ್ವಾಮಿ ಭಾಗಿಯಾಗಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಲೆದಾಟ ತಪ್ಪಿಸಲು ಜನಸ್ಪಂದನ ಜಾರಿ: ಭೀಮಣ್ಣ ನಾಯ್ಕ
ಹಲವರ ತ್ಯಾಗ,ಬಲಿದಾನದಿಂದ ಬಿಜೆಪಿ ಬಲಿಷ್ಠ: ಕೆ.ಎಸ್. ರಾಘವೇಂದ್ರ