ಭೇರ್ಯ: ಹರಂಬಳ್ಳಿ ಗ್ರಾಮದ ಪಟ್ಲದಮ್ಮ ದೇವರ ಸಿಡಿಮತ್ತು ಜಾತ್ರಾ ಮಹೋತ್ಸವ ಶುಕ್ರವಾರ ಮತ್ತು ಶನಿವಾರ ಅಪಾರಭಕ್ತರ ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.
ಸಿಡಿ ಹಬ್ಬವನ್ನು ಶುಕ್ರವಾರ ಆಚರಿಸುವ ಸಂಪ್ರದಾಯವಿದೆ. ಶುಕ್ರವಾರ ಬೆಳಗ್ಗೆಯಿಂದಲೇ ದೇವಿಗೆ ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ವಿಜೃಂಭಣೆಯಿಂದ ನಡೆದ ಹಬ್ಬದ ಅಂಗವಾಗಿ ದೇವಸ್ಥಾನಕ್ಕೆ ವಿವಿಧ ಬಗೆಯ ಹೂ, ವಿದ್ಯುತ್ ದೀಪಗಳಿಂದ ಅಲಂಕಾರಿಸಲಾಗಿತ್ತು. ಹಸಿರು ತೋರಣಗಳಿಂದ ದೇವಸ್ಥಾನ ಕಂಗೊಳಿಸುತ್ತಿತ್ತು.
ಸಿಡಿ ಹಬ್ಬದ ಭಾಗವಾಗಿರುವ ಪಟ್ಲದಮ್ಮ ಹಬ್ಬದ ಅಂಗವಾಗಿ ತಾಲೂಕಿನ ವಿವಿಧ ಗ್ರಾಮಗಳ ಸಾವಿರಾರು ಭಕ್ತರು ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿ ಹರಕೆ ತೀರಿಸಿದರೇ. ಶುಕ್ರವಾರ ರಾತ್ರಿ ಪಟ್ಲದಮ್ಮ ದೇವಸ್ಥಾನದ ಮುಂದೆ ಕೊಂಡ ಹಾಕಲಾಗಿತ್ತು, ಗ್ರಾಮದ ಜನರು ಹಾಗೂ ಸಿಡಿ ಹಬ್ಬಕ್ಕೆ ಆಗಮಿಸಿದ್ದ ಬಂದು ಬಳಗದವರು ಕೊಂಡ ಹಾಯ್ದು ತಮ್ಮ ಇಷ್ಟಾರ್ಥವನ್ನು ದೇವಿಯಲ್ಲಿ ನಿವೇದಿಸಿಕೊಂಡರು.ಬಳಿಕ ರಾತ್ರಿ ಗ್ರಾಮದ ಈಶ್ವರ ದೇವಾಲಯದ ಮುಂಬಾಗ ಬಾಳೆಗೊನೆಗಳಿಂದ ಕಟ್ಟಲಾಗಿದ್ದ ಸಿಡಿಗೆ ದೇವಸ್ಥಾನದ ಆರ್ಚಕ ಚೆಲುವನಾಯಕ ವಿಧಿ ವಿಧಾನಗಳೊಂದಿಗೆ ಪೂಜಾ ಕೈಂಕರ್ಯ ಸಲ್ಲಿಸಿ ಗ್ರಾಮಕ್ಕೆ ಉತ್ತಮ ಮಳೆ ಆಗಲಿ, ಉತ್ತಮ ಫಸಲು ಬರಲಿಎಂದು ಬೇಡಿಕೊಂಡರು. ಬಳಿಕ ಗ್ರಾಮಸ್ಥರು ಹಾಗೂ ಪಟ್ಲದಮ್ಮ ದೇವಿ ಭಕ್ತರು ವಿದ್ಯುತ್ ದೀಪಾಂಲಕಾರದಿಂದ ಕಂಗೊಳಿಸುತ್ತಿದ್ದ ಗ್ರಾಮದ ರಸ್ತೆಯಲ್ಲಿ ಎಳೆದು ತಂದು ಪಟ್ಲದಮ್ಮ ದೇವಸ್ಥಾನದ ಮುಂಭಾಗದಲ್ಲಿ ಮೂರು ಸುತ್ತು ಪ್ರದಕ್ಷಣೆ ಹಾಕಿಸಿ ನಿಲ್ಲಿಸಿದರು.
ನೂತನ ವಧುವರರು ಹಣ್ಣು ಜವನ ಎಸೆದು ತಮ್ಮ ಇಷ್ಟಾರ್ಥವನ್ನು ದೇವಿಗೆ ಪ್ರಾರ್ಥನೆ ಸಲ್ಲಿಸಿದರು.ಗ್ರಾಮದ ಯಜಮಾನರಾದ ಸಿದ್ದಪ್ಪಶೆಟ್ಟಿ, ನಂಜಪ್ಪ, ಸುರೇಶ, ಚಿಕ್ಕೇಗೌಡ, ಚೆಲುವಯ್ಯ ಹಾಗೂ ಗ್ರಾಮದ ಚುನಾಯಿತ ಸದಸ್ಯರು, ಗ್ರಾಮ ಮುಖಂಡರು ಇದ್ದರು.