ಕನ್ನಡಪ್ರಭ ವಾರ್ತೆ ಹಾರನಹಳ್ಳಿ
ರಾಜ್ಯ ಹೆದ್ದಾರಿ 105 ಅರಸೀಕೆರೆ-ಹಾಸನ ಮುಖ್ಯರಸ್ತೆಯ ಹಾರನಹಳ್ಳಿ ಆಂಜನೇಯ ದೇವಾಲಯದಿಂದ ಜಾವಗಲ್ ರಸ್ತೆವರೆಗೆ ಚತಷ್ಪಥ ರಸ್ತೆ ಯೋಜನೆಗೆ ಲೋಕೋಪಯೋಗಿ ಇಲಾಖೆಯಿಂದ ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಆರಂಭವಾದ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿತ್ತು. ಆರ್ಧಕ್ಕೆ ಕಾಮಗಾರಿ ನಿಂತಿತ್ತು. ಕೊನೆಗೂ ಕಳೆದ 3 ದಿನಗಳಿಂದ ರಸ್ತೆ ದುರಸ್ತಿ ಕಾರ್ಯ ಆರಂಭಿಸಲಾಗಿದೆ.ಈಗ ಅರ್ಧಕ್ಕೆ ನಿಲ್ಲಿಸಿದ್ದ ಚರಂಡಿ ನಿಮಾರ್ಣ ಮಾಡಲಾಗಿದ್ದು ರಸ್ತೆಮಧ್ಯೆ ರಸ್ತೆ ವಿಭಜಕಗಳನ್ನು ಹಾಕಲಾಗುತ್ತಿದೆ. ರಸ್ತೆಯಲ್ಲಿ ಇದ್ದ ಅರಳಿಮರ ನೀರಿನ ಟ್ಯಾಂಕ್ ತೆಗೆದು ಕಾಮಗಾರಿ ಆರಂಭಿಸಲಾಗಿದೆ. ಸುಮಾರು 8 ತಿಂಗಳಿನಿಂದ ಕಮಾಗಾರಿ ನಿಂತಿದ್ದ ಪರಿ಼ಣಾಮ ಸಾರ್ವಜನಿಕರು ಈ ರಸ್ತೆಯಲ್ಲಿ ಗುಂಡಿ ರಸ್ತೆ ಇಕ್ಕೆಲಗಳಲ್ಲಿ ಹರಡಿದ ಕಲ್ಲುಗಳು ವಾಹನ ರಭಸಕ್ಕೆ ರಸ್ತೆಯಲ್ಲಿ ಇದ್ದ ಗ್ರಾಮಸ್ಥರುಗಳಿಗೆ ಸಿಡಿದು ಆಸ್ಪತ್ರೆ ಸೇರಿದ ಪ್ರಸಂಗಗಳು ನಡೆದಿದೆ. ಗುತ್ತಿನಕೆರೆ ಹೋಗುವ ಸರ್ಕಲ್ ಜಾವಗಲ್ ತಿರುವು ಸರ್ಕಲ್‌ಗಳನ್ನು ಅಗಲ ಮಾಡಲಿ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನು ಹಾರನಹಳ್ಳಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡರು ಹಾರನಹಳ್ಳಿ ವ್ಯಾಪ್ತಿಯಲ್ಲಿ ಚತುಷ್ಪಥ ರಸ್ತೆ ನಿರ್ಮಾಣ ಮಾಡಲು ಎರಡೂವರೆ ಕೋಟಿ ರು. ಅನುದಾನವನ್ನು ಬಿಡುಗಡೆ ಮಾಡಿಸಿದ್ದಾರೆ. ಈ ರಸ್ತೆ 500 ಮೀಟರ್ ರಸ್ತೆಯ ಉದ್ದ ರಸ್ತೆಯ ಇಕ್ಕೆಲಗಳಲ್ಲಿ 480 ಮೀಟರ್ ಚರಂಡಿಯ ನಿರ್ಮಾಣ 15 ಮೀಟರ್ ಅಗಲಕ್ಕೆ ಡಾಂಬರ್ ರಸ್ತೆ, ಹಾಗೂ ಮಧ್ಯೆ ರಸ್ತೆ ವಿಭಜಕದಲ್ಲಿ ವಿದ್ಯುತ್ ಕಂಬಗಳನ್ನು ಅಳವಡಿಸುವ ಕಾರ್ಯ ಈ ಯೋಜನೆಯಲ್ಲಿ ಸೇರಿದೆ. ಮುಂದೆ ಹಾರನಹಳ್ಳಿಯಲ್ಲಿ ಬಸ್ಸು ನಿಲ್ದಾಣ ನಿರ್ಮಾಣ ಮಾಡುವಂತೆ ಹಾಗೂ ಕೋಡಿಮಠದ ತನಕ ರಸ್ತೆ ಅಗಲೀಕರಣ ಮಾಡಿಸಿ ಡಾಂಬರ್ ಹಾಕಿಸುವಂತೆ ಗ್ರಾಮಸ್ಥರು ಶಾಸಕರಲ್ಲಿ ಮನವಿ ಮಾಡಿದ್ದಾರೆ.