ಹರಪನಹಳ್ಳಿ: ಪಟ್ಟಣದ ಸೌಂದರೀಕರಣಕ್ಕೆ ಪುರಸಭಾ ಸದಸ್ಯರು ಸೇರಿದಂತೆ ಸರ್ವರೂ ಸಹಕರಿಸಿ ಎಂದು ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಹೇಳಿದರು.
ಪಟ್ಟಣ ಸೇರಿದಂತೆ ತಾಲೂಕಿನ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವೆ. ನಿಮ್ಮ ಸಹಕಾರ ಬೇಕು ಎಂದು ಹೇಳಿದರು.
ಪುರಸಭಾ ಹಿರಿಯ ಸದಸ್ಯ ಎಂ.ವಿ. ಅಂಜಿನಪ್ಪ ಮಾತನಾಡಿ, ಹರಪನಹಳ್ಳಿ ಪಟ್ಟಣದಲ್ಲಿ ಎಸ್ಸಿ, ಎಸ್ಟಿ, ಹಿಂದುಳಿದ ಹಾಗೂ ಅಲ್ಪಸಂಖ್ಯಾತರೇ ಹೆಚ್ಚು ಇದ್ದು, ಹಿಂದಿನ ಶಾಸಕರು ತಕ್ಕ ಮಟ್ಟಿಗೆ ಕೆಲಸ ಮಾಡಿದ್ದಾರೆ. ಮಾಜಿ ಶಾಸಕ ದಿ.ಎಂ.ಪಿ. ರವೀಂದ್ರ ಸಹ ಅನೇಕ ಅಭಿವೃದ್ದಿ ಕೆಲಸ ಮಾಡಿದರು. ಈಗಿನ ಶಾಸಕಿ ಎಂ.ಪಿ. ಲತಾ ಸಹ ₹80 ಲಕ್ಷ ದಲ್ಲಿ ನೂತನ ಡಿವೈಡರ್ ನಿರ್ಮಿಸಿ ದೀಪ ಅಳವಡಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.ಹರಪನಹಳ್ಳಿ ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸಿದ್ದಾರೆ. ಅಯ್ಯನ ಕೆರೆ ಪುನರುಜ್ಜೀವನ ಕಾಮಗಾರಿ ₹80 ಲಕ್ಷಗಳಲ್ಲಿ ಆಗುತ್ತದೆ. ಪಟ್ಟಣಕ್ಕೆ ತುಂಗಭದ್ರ ನದಿ ನೀರು ಸರಬರಾಜು ಎರಡನೇ ಹಂತದ ಯೋಜನೆ ಮಂಜೂರಾತಿ ಆಗಿದೆ ಎಂದು ಹೇಳಿದರು.
ಇನ್ನೊಬ್ಬ ಹಿರಿಯ ಸದಸ್ಯ ಅಬ್ದುಲ್ ರಹಿಮಾನ್ ಮಾತನಾಡಿ, ಶಾಸಕರು ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಮುಂದೆ ಸಹ ನಾವು ಅಭಿವೃದ್ಧಿ ಕೆಲಸಗಳಿಗೆ ಸಹಕರಿಸುತ್ತೇವೆ ಎಂದು ತಿಳಿಸಿದರು.ಉಪವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ ಮಾತನಾಡಿ, ಸರ್ಕಾರದಿಂದ ಜಾರಿಯಾದ ಅಭಿವೃದ್ಧಿ ಕಾರ್ಯಗಳನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರುತ್ತೇವೆ ಎಂದು ಹೇಳಿದರು.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಜೈನ ಅಭಿವೃದ್ಧಿ ಯೋಜನೆಯಲ್ಲಿ ಪಟ್ಟಣದ ಶಾಂತಿನಾಥ ದಿಗಂಬರ ಜೈನ ಜೀರ್ಣೋದ್ದಾರಕ್ಕೆ ₹8 ಲಕ್ಷ ಚೆಕ್ ನ್ನು ಹಾಗೂ 3 ಜನ ಜೈನ ಅರ್ಚಕರಿಗೆ ಗೌರಧನದ ಚೆಕ್ ನ್ನು ಈ ಸಂದರ್ಭದಲ್ಲಿ ಶಾಸಕರು ವಿತರಿಸಿದರು.ಕರ್ನಾಟಕ ಮೌಲಾನ ಅಜಾದ್ ಪಬ್ಲಿಕ್ ಶಾಲೆ ಪಟ್ಟಣಕ್ಕೆ ಶಾಸಕರು ಮಂಜೂರು ಮಾಡಿಸಿದ್ದಾರೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿ ತಿಳಿಸಿದರು.
ಪುರಸಭಾ ಅಧ್ಯಕ್ಷೆ ಎಂ.ಪಾತೀಮಾಬೀ, ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ವೆಂಕಟೇಶ, ಸದಸ್ಯರಾದ ಲಾಟಿ ದಾದಾಪೀರ, ಗೊಂಗಡಿ ನಾಗರಾಜ, ಉದ್ದಾರ ಗಣೇಶ, ಮಂಜುನಾಥ ಇಜಂತಕರ್, ಜಾಕೀರ ಹುಸೇನ್, ಟಿ.ವಸಂತಪ್ಪ, ಭೀಮವ್ವ , ಭರತೇಶ, ಜಾವೇದ್, ಕಿರಣ್ ಶಾನ್ ಬಾಗ್, ಹನುಮಕ್ಕ, ಶೋಭಾ, ಗುಡಿ ನಾಗರಾಜ, ಹೇಮಣ್ಣ ಮೋರಗೇರಿ, ಅಲೀಂ, ಗೌಳಿ ವಿನಾಯಕ, ಬಿಇಒ ಎಚ್.ಲೇಪಾಕ್ಷಪ್ಪ, ಮುಖ್ಯಾಧಿಕಾರಿ ರೇಣುಕಾ ಎಸ್.ದೇಸಾಯಿ ಉಪಸ್ಥಿತರಿದ್ದರು.