ಗೌರಮ್ಮ ವಾಸಿಸುವ ಮನೆಯ ಮೇಲ್ಛಾವಣಿ ಇಲ್ಲದಿರುವ ಕಾರಣ ವಾಸಿಸಲು ತುಂಬಾ ಕಷ್ಟವಾಗಿದ್ದು, ಮಳೆ ಬಂದಾಗ ಅಕ್ಕಪಕ್ಕದ ಮನೆಗಳಲ್ಲಿ ಆಶ್ರಯ ಪಡೆಯುತ್ತಿದ್ದು, ಬಯಲಿನಲ್ಲಿ ಕಲ್ಲೊಡ್ಡಿ ಅಡುಗೆ ಮಾಡಿ ತಿನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕನ್ನಡಪ್ರಭ ವಾರ್ತೆ ಕನಕಪುರ
ಬಡ ವೃದ್ಧ ಮಹಿಳೆಯು ಸ್ವಂತ ಸೂರಿಗಾಗಿ ಅಲೆದಾಡುವಂತಹ ಪರಿಸ್ಥಿತಿಯು ತಾಲೂಕಿನ ಹುಣಸನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ. ತಾಲೂಕಿನ ಹುಣಸನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ತಟ್ಟೆಕೆರೆ ಗ್ರಾಮದಲ್ಲಿ ಲೇಟ್ ಮರಿಯಾಚಾರಿ ಪತ್ನಿ ಗೌರಮ್ಮ ಎಂಬ ವೃದ್ಧೆ ವಾಸವಾಗಿದ್ದು, ವೃತ್ತಿಯಲ್ಲಿ ದೇವರ ತೇರು ಮಾಡುವ ಕೆಲಸದಲ್ಲಿ ನಿರತರಾಗಿದ್ದ ತಮ್ಮ ಗಂಡ ಲೇ. ಮರಿಯಾಚಾರಿ ಅದೇ ಗ್ರಾಮದ ಕುನ್ನಪ್ಪನವರಿಂದ ಒಂದು ನಿವೇಶನವನ್ನು ಖರೀದಿಸಿ, ಗ್ರಾಪಂಯ ಆಶ್ರಯ ಯೋಜನೆಯಡಿ ಧನ ಸಹಾಯ ಪಡೆದು ಮನೆಯ ನಿರ್ಮಿಸಿದ್ದರು. ಪತಿ ಮರಿಯಾಚಾರಿ ನಿಧನಾನಂತರ ಮಗ ಶಿವಣ್ಣ, ತನ್ನ ತಾಯಿ ಗೌರಮ್ಮಳಿಗೆ ಮನೆ ಖಾಲಿ ಮಾಡುವಂತೆ ಪ್ರತಿ ದಿನ ಕಿರುಕುಳ ನೀಡುತ್ತಿದ್ದಾನೆಂದು ಗೌರಮ್ಮ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಮನೆಯನ್ನು ಉರುಳಿಸುವ ಉದ್ದೇಶದಿಂದ ಮಗ ಶಿವಣ್ಣ ಮೇಲ್ಛಾವಣಿ ಕಿತ್ತು ಹಾಕಿದ್ದು, ಬಿಸಿಲು, ಮಳೆ, ಚಳಿ, ಗಾಳಿಯಲ್ಲಿ ತೊಂದರೆ ಅನುಭವಿಸುವ ಸ್ಥಿತಿ ಗೌರಮ್ಮಳಿಗೆ ಬಂದೊದಗಿದೆ. ಸದ್ಯ ವೃದ್ಧ ಮಹಿಳೆಯ ಬಳಿ ಮನೆ ವಿಚಾರವಾಗಿ ಆಶ್ರಯ ಯೋಜನೆಯ ರಸೀದಿ ಮತ್ತು ಗಂಡನ ಹೆಸರಿನಲ್ಲಿರುವ ವಿದ್ಯುತ್ ಬಿಲ್ ಗಳನ್ನು ಹೊರತುಪಡಿಸಿ, ಬೇರೆ ದಾಖಲೆಗಳು ಇಲ್ಲದೆ ಇರುವುದರಿಂದ ನ್ಯಾಯ ಸಿಗದೆ ಕಷ್ಟ ಅನುಭವಿಸುವ ಸ್ಥಿತಿ ನಿರ್ಮಾಣವಾಗಿದೆ.
ಗೌರಮ್ಮ ವಾಸಿಸುವ ಮನೆಯ ಮೇಲ್ಛಾವಣಿ ಇಲ್ಲದಿರುವ ಕಾರಣ ವಾಸಿಸಲು ತುಂಬಾ ಕಷ್ಟವಾಗಿದ್ದು, ಮಳೆ ಬಂದಾಗ ಅಕ್ಕಪಕ್ಕದ ಮನೆಗಳಲ್ಲಿ ಆಶ್ರಯ ಪಡೆಯುತ್ತಿದ್ದು, ಬಯಲಿನಲ್ಲಿ ಕಲ್ಲೊಡ್ಡಿ ಅಡುಗೆ ಮಾಡಿ ತಿನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.
ಶಾಸಕರು, ಸಂಸದರು ಸ್ಥಳಕ್ಕೆ ಖುದ್ದು ಭೇಟಿ ನೀಡಿ, ಸ್ಥಳ ಪರಿಶೀಲಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿ ತಮಗೆ ನ್ಯಾಯ ಕೊಡಿಸುವಂತೆ ಮನವಿ ಮಾಡಿದ್ದು, ತನಗೆ ನ್ಯಾಯ ಸಿಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವೃದ್ಧ ಮಹಿಳೆ ಗೌರಮ್ಮ ತಮ್ಮ ನೋವು ತೋಡಿಕೊಂಡಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.