ನರೇಗಲ್ಲ ಪೊಲೀಸ್ ಠಾಣೆ ಸಿಬ್ಬಂದಿಗಳಿಂದ ವಿದ್ಯಾರ್ಥಿನಿಗೆ ಕಿರುಕುಳ ದೂರು

KannadaprabhaNewsNetwork |  
Published : Feb 05, 2024, 01:46 AM IST
ನರೇಗಲ್ಲ ಪೊಲೀಸ್ ಠಾಣೆ. | Kannada Prabha

ಸಾರಾಂಶ

ಕಾಲೇಜು ವಿದ್ಯಾರ್ಥಿನಿಯೋರ್ವಳಿಗೆ ಪೊಲೀಸ್ ಇಲಾಖೆಯ ಅಧಿಕಾರಿ ಹಾಗೂ ಪೇದೆಯೋರ್ವ ನಿರಂತರ ಕಿರುಕುಳ ನೀಡುತ್ತಾ, ಅವಳ ಮೊಬೈಲ್‌ಗೆ ಅಶ್ಲೀಲ ಮೆಸೇಜ್‌ಗಳನ್ನು ಕಳಿಸುತ್ತಾ ಅಸಭ್ಯವಾಗಿ ವರ್ತಿಸಿದ ಘಟನೆ ನರೇಗಲ್ಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವರದಿಯಾಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಗದಗ: ಕಾಲೇಜು ವಿದ್ಯಾರ್ಥಿನಿಯೋರ್ವಳಿಗೆ ಪೊಲೀಸ್ ಇಲಾಖೆಯ ಅಧಿಕಾರಿ ಹಾಗೂ ಪೇದೆಯೋರ್ವ ನಿರಂತರ ಕಿರುಕುಳ ನೀಡುತ್ತಾ, ಅವಳ ಮೊಬೈಲ್‌ಗೆ ಅಶ್ಲೀಲ ಮೆಸೇಜ್‌ಗಳನ್ನು ಕಳಿಸುತ್ತಾ ಅಸಭ್ಯವಾಗಿ ವರ್ತಿಸಿದ ಘಟನೆ ನರೇಗಲ್ಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವರದಿಯಾಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ನರೇಗಲ್ಲ ಪೊಲೀಸ್ ಠಾಣೆಯ ಪಿಎಸ್ಐ ನಿಖಿಲ್ ಕುಮಾರ ಕಾಂಬ್ಳೆ ಹಾಗೂ ಪೇದೆ ಶಂಕರ್ ನಾಳಕರ್ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನರೇಗಲ್ಲ ಪಟ್ಟಣದ ಕಾಲೇಜು ವಿದ್ಯಾರ್ಥಿನಿಯ ಮೊಬೈಲ್‌ ನಂಬರ ಪಡೆದುಕೊಂಡು ಅವಳ ವಾಟ್ಸಪ್‌ಗೆ ಅಶ್ಲೀಲ, ಅನುಚಿತ, ಅಸಭ್ಯ ಸಂದೇಶಗಳನ್ನು ಕಳುಹಿಸಿದ್ದಲ್ಲದೇ ಲೈಂಗಿಕವಾಗಿ ಪೀಡಿಸಿ, ಮಂಚಕ್ಕೆ ಕರೆದ ಆರೋಪ ಎದುರಿಸುತ್ತಿದ್ದಾರೆ. ವಿದ್ಯಾರ್ಥಿನಿ ದೂರು ನೀಡಿದ್ದು, ಮಾನಸಿಕವಾಗಿ ಹಿಂಸೆ ನೀಡಿದ್ದಾರೆ ಎಂದಿದ್ದಾರೆ.

ಆ ವಿದ್ಯಾರ್ಥಿನಿಯು ತನ್ನ ಮೊಬೈಲ್‌ನಲ್ಲಿ ಈ ಇಬ್ಬರು ಪೊಲೀಸರ ನಂಬರ್‌ಗಳು ಬ್ಲಾಕ್ ಲಿಸ್ಟ್‌ನಲ್ಲಿ ಹಾಕಿದ್ದರೂ ಕೂಡ ಬೇರೆ ಬೇರೆ ಪೋನ್ ನಂಬರ್‌ಗಳನ್ನು ಬಳಕೆ ಮಾಡಿಕೊಂಡು ಕಾಲೇಜು ವಿದ್ಯಾರ್ಥಿನಿಗೆ ಪದೇ ಪದೇ ಅಶ್ಲೀಲವಾಗಿ ಸಂದೇಶ ಕಳುಹಿಸುವುದರ ಜೊತೆಗೆ ನಿಮಗೆ ಎಷ್ಟು ಹಣ ಬೇಕು ಹೇಳಿ, ನಾವು ಪೊಲೀಸರು, ನಿಮ್ಮ ಮನೆತನವನ್ನು ನಡೆಸಿಕೊಂಡು ಹೋಗುತ್ತೇವೆ. ಆದರೆ, ನೀವು ನಮಗೆ‌ ಲವ್ ಮಾಡಬೇಕು ಎಂದು ಕಳುಹಿಸಿದ ವಾಟ್ಸಾಪ್ ಸಂದೇಶಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಈ ಕುರಿತು ವಿದ್ಯಾರ್ಥಿನಿ ಎಸ್ಪಿಗೆ ಅವರಿಗೆ ಮೌಖಿಕವಾಗಿ ತನಗೆ ಆಗಿರುವ ತೊಂದರೆ, ಅನ್ಯಾಯದ ಬಗ್ಗೆ ತಿಳಿಸಿದ್ದಾಳೆ. ಆದರೆ ಈ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ.ತನ್ನ ತಂದೆಗೆ ಪ್ರತಿ ನಿತ್ಯ ಈ ಪೊಲೀಸ್‌ ಸಿಬ್ಬಂದಿಗಳೇ ಕಂಠಪೂರ್ತಿ ಮದ್ಯ ಕುಡಿಸಿ, ಅವರನ್ನು ಮನೆಗೆ ಬಿಡುವ ನೆಪ ಮಾಡಿಕೊಂಡು ಮನೆಗೆ ಬರುತ್ತಿದ್ದರು. ಅಷ್ಟೇ ಅಲ್ಲದೇ ಇದೇ ವೇಳೆಯಲ್ಲಿ ಮಂಚಕ್ಕೆ ಕರೆಯುತ್ತಿದ್ದರು ಎಂದು ಯುವತಿ‌ ಮಾಧ್ಯಮಗಳ ಮುಂದೆ ಗಂಭೀರ ಆರೋಪ ಮಾಡಿದ್ದಾಳೆ.ಸದ್ಯ ಗಂಭೀರ ಆರೋಪ ಎದುರಿಸುತ್ತಿರುವ ಪಿಎಸ್ಐ ಅವರು, ಕಳೆದ ಸಾಲಿನ ಆಗಸ್ಟ್ 19ರಂದು ಕರ್ತವ್ಯ ಲೋಪದಡಿಯಲ್ಲಿ ಅಮಾನತುಗೊಂಡಿದ್ದನ್ನು ಸ್ಮರಿಸಬಹುದು. ರಕ್ಷಣೆ ನೀಡಬೇಕಿದ್ದ ಆರಕ್ಷಕರೇ ಹೀಗೆ ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡುವುದನ್ನು ನೋಡಿದಲ್ಲಿ ಸಾಮಾನ್ಯರು ಬದುಕುವುದಾದರೂ ಹೇಗೆ ಎನ್ನುವ ಚರ್ಚೆ ಪ್ರಾರಂಭವಾಗಿದೆ. ನರೇಗಲ್ಲ ಪಟ್ಟಣಕ್ಕೆ ನಿತ್ಯ ಅಕ್ಕಪಕ್ಕದ ಗ್ರಾಮಗಳಿಂದ ಸಾವಿರಾರು ಸಂಖ್ಯೆಯ ವಿದ್ಯಾರ್ಥಿನಿಯರು ಬರುತ್ತಾರೆ. ಸಮಾಜದ ಕಾನೂನು ಸುವ್ಯವಸ್ಥೆ ಕಾಪಾಡಬೇಕಾದವರೆ ಹೀಗೆ ಮಾಡಿದರೆ ಹೇಗೆ ಈ ಬಗ್ಗೆ ಹಿರಿಯ ಅಧಿಕಾರಿಗಳು ಗಮನ ನೀಡಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.ಸಾರ್ವಜನಿಕರ ಬೇಸರ:ಸದ್ಯಕ್ಕೆ ನಡೆದಿರುವ ಪ್ರಾಥಮಿಕ ತನಿಖೆಯ ಆಧಾರದಲ್ಲಿ ವಿದ್ಯಾರ್ಥಿನಿ ಪೊಲೀಸ್ ಅಧಿಕಾರಿಯ ಮೇಲೆ ಮಾಡುತ್ತಿರುವ ಆರೋಪಕ್ಕೆ ಸೂಕ್ತವಾದ ದಾಖಲೆಗಳನ್ನು ನೀಡಿಲ್ಲ. ಮುಖ್ಯವಾಗಿ ಇದರ ಹಿಂದೆ ಇನ್ನೇನೋ ಉದ್ದೇಶವಿರುವ ಸಂಶಯ ಬಲವಾಗಿ ಕಾಡುತ್ತಿದೆ. ಅಧಿಕಾರಿ ತಪ್ಪು ಮಾಡಿದ್ದಾರೋ, ಪೇದೆ ತಪ್ಪು ಮಾಡಿದ್ದರೋ, ಇಬ್ಬರೂ ತಪ್ಪು ಮಾಡಿದ್ದಾರೋ ತನಿಖೆಯಿಂದಲೇ ಬಹಿರಂಗವಾಗಬೇಕಿದೆ. ಆದರೆ ಪೊಲೀಸ್ ಇಲಾಖೆ ಮೇಲೆ ಬಂದಿರುವ ಆರೋಪ ಮಾತ್ರ ಸಾರ್ವಜನಿಕರಲ್ಲಿ ತೀವ್ರ ಬೇಸರವನ್ನುಂಟು ಮಾಡಿದೆ.

ಈ ಘಟನೆಗೆ ಸಂಬಂಧಿಸಿದಂತೆ, ಸಂಬಂಧಪಟ್ಟ ಅಧಿಕಾರಿ ಹಾಗೂ ಸಿಬ್ಬಂದಿಗಳ ಮೇಲೆ ಇಲಾಖಾ ವಿಚಾರಣೆಗೆ ಆದೇಶಿಸಿದ್ದು ನಿಷ್ಪಕ್ಷಪಾತ ವಿಚಾರಣೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಶೀಘ್ರವಾಗಿ ಸೂಕ್ತ ಶಿಸ್ತಿನ ಕ್ರಮ ಜರುಗಿಸಲಾಗುವುದು ಎಂದು ಎಸ್ಪಿ ಬಿ.ಎಸ್‌.ನೇಮಗೌಡ ಹೇಳಿದ್ದಾರೆ.

ನನ್ನ ವಿರುದ್ಧ ದೂರು ಕೊಟ್ಟಿರುವ ವಿದ್ಯಾರ್ಥಿನಿ ಯಾರು ಎನ್ನುವುದೇ ನನಗೆ ಗೊತ್ತಿಲ್ಲ. ನನ್ನ ಹೆಸರನ್ನು ಯಾವ ಕಾರಣಕ್ಕೆ ಪ್ರಸ್ತಾಪ ಮಾಡುತ್ತಿದ್ದಾರೊ ಗೊತ್ತಿಲ್ಲ. ಇದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಆರೋಪ ಎದುರಿಸುತ್ತಿರುವ ಪಿಎಸ್ಐ ನಿಖಿಲ್ ಕಾಂಬ್ಳೆ ಹೇಳಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ