ಕಿರುಕುಳ- ಗುತ್ತಿಗೆದಾರ ಆತ್ಮಹತ್ಯೆ

KannadaprabhaNewsNetwork | Published : Oct 15, 2023 12:46 AM

ಸಾರಾಂಶ

ಕಾಮಗಾರಿ ಪೂರ್ಣಗೊಂಡರೂ ಬಾರದ ಹಣ, ಖಾಸಗಿಯಾಗಿಯೂ ಕಿರುಕುಳದಿಂದಾಗಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರ ಮನೆಯವರು ಆರೋಪಿಸಿ ದೂರು ನೀಡಿದ್ದಾರೆ. ಈ ಸಾವು ಕೊಪ್ಪಳ ಜಿಲ್ಲೆಯ ಗುತ್ತಿಗೆದಾರರ ವಲಯದಲ್ಲಿ ತಲ್ಲಣವನ್ನುಂಟು ಮಾಡಿದೆ.

ಕೊಪ್ಪಳ: ಇಲ್ಲಿಯ ಗುತ್ತಿಗೆದಾರ ಹಾಗೂ ಹಿಂದು ಸಂಘಟನೆಯ ಪ್ರಮುಖ ಕಾರ್ಯಕರ್ತ ರಾಜೀವ ಬಗಾಡೆ (50) ವಿಷ ಸೇವಿಸಿ ಆತ್ಮಹತ್ಯೆ ಶರಣಾಗಿದ್ದಾರೆ.ಕಾಮಗಾರಿ ಪೂರ್ಣಗೊಂಡರೂ ಬಾರದ ಹಣ, ಖಾಸಗಿಯಾಗಿಯೂ ಕಿರುಕುಳದಿಂದಾಗಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರ ಮನೆಯವರು ಆರೋಪಿಸಿ ದೂರು ನೀಡಿದ್ದಾರೆ. ಈ ಸಾವು ಕೊಪ್ಪಳ ಜಿಲ್ಲೆಯ ಗುತ್ತಿಗೆದಾರರ ವಲಯದಲ್ಲಿ ತಲ್ಲಣವನ್ನುಂಟು ಮಾಡಿದೆ.ರಾಜೀವ ಬಗಾಡೆ ಕಳೆದ ಅ.10 ರಂದು ನಗರದ ಹೊರವಲಯದಲ್ಲಿ ವಿಷ ಸೇವಿಸಿದ್ದರು. ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್‌ಗೆ ಸ್ಥಳಾಂತರಿಸಲಾಗಿತ್ತು. ಆದರೆ, ಫಲಕಾರಿಯಾಗದೇ ಶುಕ್ರವಾರ ಸಾವನ್ನಪ್ಪಿದ್ದಾರೆ.

ಕಿರುಕುಳವೇ ಕಾರಣ: ಆತ್ಮಹತ್ಯೆಗೆ ಕೆಲವರ ಕಿರುಕುಳವೇ ಕಾರಣ. ಗುತ್ತಿಗೆ ಕಾಮಗಾರಿ ಮಾಡಿರುವುದಕ್ಕೆ ಹಣವೂ ಬಂದಿಲ್ಲ. ಜತೆಗೆ ಕೆಲವರು ಹಣಕ್ಕಾಗಿ ವಿಪರೀತ ಕಿರುಕುಳ ನೀಡಿದ್ದರಿಂದಲೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹೀಗಾಗಿ, ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಮೃತನ ತಂದೆ ಮೋಹನ ಬಗಾಡೆ ಆಗ್ರಹಿಸಿದ್ದಾರೆ.

ದೂರಿನಲ್ಲಿ ಮೃತ ಗುತ್ತಿಗೆದಾರನ ದೊಡ್ಡಪ್ಪ ಹರಿಗುರು, ರಫಿ ಆರ್.ಎಂ. ಪ್ರಸನ್ನ ಗಡಾದ, ಮಲ್ಲಿಕಾರ್ಜುನ, ಮುನಿ ವಿಜಯಕುಮಾರ, ಡಾ.ಉಪೇಂದ್ರ ರಾಜು, ಚೆನ್ನಪ್ಪ ಕೋಟ್ಯಾಳ ಅವರೇ ನನ್ನ ಮಗನ ಸಾವಿಗೆ ಕಾರಣ ಎಂದು ಗಂಭೀರ ಆರೋಪ ಮಾಡಿದ್ದಾರೆ.

ವೀಡಿಯೋದಲ್ಲಿ ಹೇಳಿಕೆ: ಆತ್ಮಹತ್ಯೆ ಮಾಡಿಕೊಂಡ ರಾಜೀವ ಬಗಾಡೆ ಸಾಯುವ ಮುನ್ನ ಆಸ್ಪತ್ರೆಯಲ್ಲಿ ತನ್ನ ಸಾವಿಗೆ ಯಾರು ಕಾರಣ ಎಂದು ಹೇಳಿದ್ದಾರೆ. ಹಣಕ್ಕಾಗಿ ಪೀಡಿಸುತ್ತಿದ್ದರಿಂದಲೇ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಿರುವ ವೀಡಿಯೋ ಹೇಳಿಕೆ ದಾಖಲಾಗಿದೆ.

ಗುತ್ತಿಗೆದಾರರ ವಲಯದಲ್ಲಿ ತಲ್ಲಣ: ಎಲ್ಲರೊಂದಿಗೆ ಆತ್ಮೀಯವಾಗಿಯೇ ಇದ್ದ ರಾಜೀವ ಬಗಾಡೆ ಕಟ್ಟಾ ಹಿಂದೂ ಕಾರ್ಯಕರ್ತ. ಹಿಂದೂಪರ ಸಂಘಟನೆಯಲ್ಲಿ ಬಲವಾಗಿ ಗುರುತಿಸಿಕೊಂಡಿದ್ದರು. ಈಗ ಇವರು ಆತ್ಮಹತ್ಯೆ ಮಾಡಿಕೊಂಡಿರುವುದು ಹಾಗೂ ವೀಡಿಯೋ ಹೇಳಿಕೆ ನೀಡಿರುವುದು ಗುತ್ತಿಗೆದಾರರ ವಲಯದಲ್ಲಿ ತಲ್ಲಣ ಮೂಡಿಸಿದೆ.

ಇವರು ನೇರವಾಗಿ ಗುತ್ತಿಗೆ ಕಾಮಗಾರಿ ಮಾಡದಿದ್ದರೂ ಅವರಿವರ ಹೆಸರಿನಲ್ಲಿ ಗುತ್ತಿಗೆ ಕಾಮಗಾರಿ ಮಾಡುತ್ತಿದ್ದರು. ಹೀಗಾಗಿ, ಇವರಿಗೂ ಬರಬೇಕಾದ ಹಣ ಬಹಳಷ್ಟು ಬಾಕಿ ಇತ್ತು ಎಂದು ಹೇಳಲಾಗಿದೆ. ಸಕಾಲಕ್ಕೆ ಗುತ್ತಿಗೆ ಹಣ ಬಾರದಿದ್ದರಿಂದ ಬಡ್ಡಿಯೇ ಹೊರೆಯಾಗಿ ಇಕ್ಕಟ್ಟಿಗೆ ಸಿಲುಕಿದ್ದರು. ಇದರ ಕಿರುಕುಳದಿಂದಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಕೇವಲ ರಾಜೀವ ಬಗಾಡೆ ಅಷ್ಟೇ ಅಲ್ಲ, ಇಂಥ ಒತ್ತಡದಲ್ಲಿ ಜಿಲ್ಲೆಯಲ್ಲಿ ನೂರಾರು ಗುತ್ತಿಗೆದಾರರು ಸಿಲುಕಿದ್ದಾರೆ. ಜಿಲ್ಲೆಯೊಂದರಲ್ಲೇ ಸುಮಾರು ₹2500 ಕೋಟಿಗೂ ಅಧಿಕ ಬಿಲ್ ಬಾಕಿ ಇದೆ ಎಂದು ಗುತ್ತಿಗೆದಾರರ ವಲಯದಲ್ಲಿ ಚರ್ಚೆಯಾಗುತ್ತಿದೆ.

ಬಾರದಿರುವ ಬಿಲ್‌ನಿಂದಾಗಿ ಗುತ್ತಿಗೆ ಕೆಲಸಕ್ಕಾಗಿ ಖಾಸಗಿಯಾಗಿ ಬಡ್ಡಿ ಸಾಲ ತಂದಿರುವುದೇ ಈಗ ಉರುಳಾಗುತ್ತಿದೆ ಎಂದು ಹೇಳುತ್ತಿದ್ದಾರೆ.

Share this article