ಸಾಲದ ಹೆಸರಿನಲ್ಲಿ ಕಿರುಕುಳ: ಮಹಿಳೆಗೆ ₹6.28 ಲಕ್ಷ ವಂಚನೆ

KannadaprabhaNewsNetwork |  
Published : Nov 27, 2026, 02:15 AM IST
ಸಾಂದರ್ಭಿಕ ಚಿತ್ರ. | Kannada Prabha

ಸಾರಾಂಶ

ಸಂಬಂಧಿಕರು ಹಾಗೂ ಸ್ನೇಹಿತರ ಮುಂದೆ ಮಾನಹಾನಿಯಾಗಬಹುದೆಂಬ ಭಯದಿಂದ ಆರೋಪಿತರು ಕಳುಹಿಸಿದ ಬ್ಯಾಂಕ್ ಖಾತೆ ಮತ್ತು ಯುಪಿಐ ಐಡಿಗಳಿಗೆ 03- 06- 2026ರಿಂದ 21- 10- 2026ರವರೆಗೆ ಹಂತ ಹಂತವಾಗಿ ಒಟ್ಟು ₹6,28,898 ಹಣ ಜಮಾ ಮಾಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.

ಕಾರವಾರ: ಸಾಲ ಪಡೆಯದಿದ್ದರೂ ಸಾಲ ಪಡೆದಿರುವುದಾಗಿ ಹೇಳಿ, ಬಡ್ಡಿ ಸಮೇತ ಹಣ ಪಾವತಿಸುವಂತೆ ಬೆದರಿಸಿ ಮಹಿಳೆಯೊಬ್ಬರಿಂದ ₹6,28,898 ಹಣ ವಸೂಲಿ ಮಾಡಿರುವ ಆರೋಪದಡಿ ಕಾರವಾರ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಸಿದ್ದಾಪುರ ಮೂಲದ ವೀಣಾ ಕಿರಣಕುಮಾರ ಅವರು 01- 06- 2026ರಂದು ಗೂಗಲ್‌ನಲ್ಲಿ ಹುಡುಕಾಟ ನಡೆಸುತ್ತಿದ್ದಾಗ ‘Furtila Rupee App’ ಹೆಸರಿನ ಸಾಲದ ಆ್ಯಪ್‌ ಕಾಣಿಸಿಕೊಂಡಿದೆ. ಅದರ ಮೇಲೆ ಕ್ಲಿಕ್ ಮಾಡಿದ ಬಳಿಕ ಮೊಬೈಲ್‌ಗೆ ಬಂದ ನೋಟಿಫಿಕೇಶನ್‌ಗಳಿಗೆ ಅನುಮತಿ ನೀಡಿದಾಗ, ಅವರ ಮೊಬೈಲ್‌ನಲ್ಲಿ ‘Timely Cash’ ಹೆಸರಿನ ಲೋನ್ ಆ್ಯಪ್ ವ್ಯಾಲೆಟ್ ಡೌನ್‌ಲೋಡ್ ಆಗಿದೆ. ಅದರಲ್ಲಿ ₹3,000 ಸಾಲ ಮಂಜೂರಾಗಿರುವುದಾಗಿ ನಮೂದಿಸಲಾಗಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.ನಂತರ 03- 06- 2026ರಂದು ಅಪರಿಚಿತ ವ್ಯಕ್ತಿಯೊಬ್ಬರು +62 88705415220 ಸಂಖ್ಯೆಯಿಂದ ಕರೆ ಮಾಡಿ, ತಾನು ‘Furtila Rupee App’ ಸಾಲದ ಕಂಪನಿಯಿಂದ ಮಾತನಾಡುತ್ತಿರುವುದಾಗಿ ತಿಳಿಸಿದ್ದಾರೆ. ಆ್ಯಪ್ ಮೂಲಕ ಸಾಲ ಪಡೆದಿದ್ದು, ಅಸಲು ಮತ್ತು ಬಡ್ಡಿ ಸೇರಿ ಒಟ್ಟು ₹32,000 ಪಾವತಿಸಬೇಕೆಂದು ಹೇಳಿದ್ದಾರೆ. ಆದರೆ, ತಾನು ಯಾವುದೇ ಸಾಲ ಪಡೆದಿಲ್ಲ ಎಂದು ಮಹಿಳೆ ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ.ಇದಾದ ಬಳಿಕ +92 3258708985 ಮತ್ತು +628812424275 ಸೇರಿದಂತೆ ವಿವಿಧ ಮೊಬೈಲ್ ಸಂಖ್ಯೆಗಳ ಮೂಲಕ ಹಲವು ಬಾರಿ ಕರೆ ಮಾಡಿರುವ ಆರೋಪಿತರು, ಸಾಲದ ಬಡ್ಡಿ ಪಾವತಿಸದಿದ್ದರೆ ಅವರ ಮೊಬೈಲ್‌ನಲ್ಲಿರುವ ಎಲ್ಲ ಸಂಪರ್ಕ ಸಂಖ್ಯೆಗಳಿಗೂ ಸಾಲ ಬಾಕಿ ಇರುವ ಬಗ್ಗೆ ಸಂದೇಶ ಕಳುಹಿಸುವುದಾಗಿ ಬೆದರಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.ಪ್ರತಿದಿನ ಬೇರೆ ಬೇರೆ ಸಂಖ್ಯೆಗಳ ಮೂಲಕ ಕರೆ ಮಾಡಿ, ತಾವು ಪಡೆಯದ ಸಾಲದ ಅಸಲು ಮತ್ತು ಬಡ್ಡಿ ಪಾವತಿಸುವಂತೆ ಒತ್ತಡ ಹೇರಲಾಗಿದೆ. ಹಣ ಪಾವತಿಸದಿದ್ದರೆ ಮಾನ- ಮರ್ಯಾದೆಗೆ ಧಕ್ಕೆ ತರುವುದಾಗಿ ಬೆದರಿಸಿ ಮಾನಸಿಕ ಹಿಂಸೆ ನೀಡಲಾಗಿದೆ ಎಂದು ಮಹಿಳೆ ಆರೋಪಿಸಿದ್ದಾರೆ.

ಸಂಬಂಧಿಕರು ಹಾಗೂ ಸ್ನೇಹಿತರ ಮುಂದೆ ಮಾನಹಾನಿಯಾಗಬಹುದೆಂಬ ಭಯದಿಂದ ಆರೋಪಿತರು ಕಳುಹಿಸಿದ ಬ್ಯಾಂಕ್ ಖಾತೆ ಮತ್ತು ಯುಪಿಐ ಐಡಿಗಳಿಗೆ 03- 06- 2026ರಿಂದ 21- 10- 2026ರವರೆಗೆ ಹಂತ ಹಂತವಾಗಿ ಒಟ್ಟು ₹6,28,898 ಹಣ ಜಮಾ ಮಾಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.ಈ ಸಂಬಂಧ ಕಾರವಾರ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚಿತ್ತರಂಜನ್ ಬೋಳಾರ್‌ಗೆ ರಾಜ್ಯದ ಶ್ರೇಷ್ಠ ಸಾಧಕ ಪುರಸ್ಕಾರ ‘ಕರುನಾಡ ರತ್ನ’ ಪ್ರಶಸ್ತಿ
ಸೌಜನ್ಯಾ ಪ್ರಕರಣದಲ್ಲಿ ಸಿಎಂ ಡಿಕೆಶಿ ನ್ಯಾಯ ಕೊಡಿಸಬೇಕು: ತಿಮರೋಡಿ