ವಿದ್ಯಾರ್ಥಿಗಳ ಸಾಧನೆಗೆ ಛಲ, ಶ್ರಮ ಮುಖ್ಯ: ಮಂಜುನಾಥ ಬಿ.

KannadaprabhaNewsNetwork | Published : Jul 2, 2025 12:20 AM
ಕಾರ್ಯಾಗಾರವನ್ನು ಸ್ತ್ರೀಶಕ್ತಿ ಸಂಘಗಳ ತಾಲೂಕು ಘಟಕದ ಅಧ್ಯಕ್ಷೆ ಸುಶೀಲಕ್ಕ ಪಾಟೀಲ ಉದ್ಘಾಟಿಸಿದರು. | Kannada Prabha

ವಿದ್ಯಾರ್ಥಿಗಳು ಬಡತನ, ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸುವ ಗುಣ ಬೆಳೆಸಿಕೊಳ್ಳಬೇಕು.

ಶಿಗ್ಗಾಂವಿ: ಪ್ರತಿ ವಿದ್ಯಾರ್ಥಿಯಲ್ಲಿ ವಿಶೇಷವಾದ ಜ್ಞಾನಶಕ್ತಿ ಅಡಗಿದೆ. ಅದರ ಅನಾವರಣಕ್ಕೆ ಸೂಕ್ತ ವೇದಿಕೆ, ಅವಕಾಶ ಅಗತ್ಯ. ಅಲ್ಲದೆ ವಿದ್ಯಾರ್ಥಿಗಳಿಗೆ ಸಾಧನೆಯ ಛಲ, ಶ್ರಮ ಮುಖ್ಯವಾಗಿದೆ ಎಂದು ರಾಜ್ಯ ಸಂಪನ್ಮೂಲ ವ್ಯಕ್ತಿ, ಶಿಕಾರಿಪುರ ಸಾಧನಾ ಅಕಾಡೆಮಿಯ ಮುಖ್ಯಸ್ಥ ಮಂಜುನಾಥ ಬಿ. ತಿಳಿಸಿದರು.ಪಟ್ಟಣದ ಹನುಮಂತಗೌಡ್ರ ಪಾಟೀಲ ಕಲ್ಯಾಣ ಭವನದಲ್ಲಿ ಜ್ಞಾನದೀಪ ಅಕಾಡೆಮಿ ಕೋಚಿಂಗ್ ಕ್ಲಾಸಸ್ ವತಿಯಿಂದ ನಡೆದ ರಾಜ್ಯ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ಕುರಿತ ಉಚಿತ ಕಾರ್ಯಾಗಾರದಲ್ಲಿ ಮಾತನಾಡಿದರು.ಧಾರವಾಡ ಸಾಯಿ ಅಕಾಡೆಮಿ ನಿರ್ದೇಶಕ ಗುರುರಾಜ ಬುಲಬುಲೆ ಮಾತನಾಡಿ, ವಿದ್ಯಾರ್ಥಿಗಳು ಬಡತನ, ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸುವ ಗುಣ ಬೆಳೆಸಿಕೊಳ್ಳಬೇಕು. ಅಧ್ಯಯನದ ರೀತಿ, ವ್ಯವಸ್ಥೆಗಳನ್ನು ಅರಿಯಬೇಕು. ಪರೀಕ್ಷೆಯ ಹೊಸ ಶೈಲಿಗಳನ್ನು ತಿಳಿಯಬೇಕು. ಮಾಡುವ ಕಾರ್ಯಗಳ ಕುರಿತು ಆತ್ಮವಿಶ್ವಾಸ, ನಂಬಿಕೆ ಇಟ್ಟುಕೊಳ್ಳುವುದು ಮುಖ್ಯ ಎಂದರು.

ಸ್ತ್ರೀಶಕ್ತಿ ಸಂಘಗಳ ತಾಲೂಕು ಘಟಕದ ಅಧ್ಯಕ್ಷೆ ಸುಶೀಲಕ್ಕ ಪಾಟೀಲ ಉದ್ಘಾಟಿಸಿದರು. ಜ್ಞಾನದೀಪ ಅಕಾಡೆಮಿ ಕಾರ್ಯದರ್ಶಿ ಸುರೇಶ ದೇಸಾಯಿ, ಮಂಜುನಾಥ ರಾಯಪುರ, ಸಂಜೀವ ರೆಡ್ಡಿ, ಎಸ್.ಎಚ್. ಒಂಟಿಗೋಡಿ, ಆರ್.ಬಿ. ಹುಡೇದ, ಶಿವರಾಜ, ವಿಶಾಲಗೌಡ, ಸುರೇಶಗೌಡ ಪಾಟೀಲ, ಗಂಗಮ್ಮ ದೇಸಾಯಿ, ಪ್ರಾಧ್ಯಾಪಕ ನಿಂಗಪ್ಪ ಕಲಕೋಟಿ, ಜ್ಞಾನದೀಪ ಅಕಾಡೆಮಿ ಸದಸ್ಯರು, ವಿದ್ಯಾರ್ಥಿಗಳು ಇದ್ದರು.ನೂತನ ಬಸ್ ಸೇವೆ ಅರಂಭ

ಹಿರೇಕೆರೂರು: ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಅನೇಕ ದಿನಗಳಿಂದ ಬೇಡಿಕೆಯಿದ್ದ ಮಾರ್ಗದಲ್ಲಿ ಬಸ್ ಸೇವೆ ಅರಂಭಿಸಲಾಗಿದೆ ಎಂದು ಶಾಸಕ ಯು.ಬಿ. ಬಣಕಾರ ತಿಳಿಸಿದರು.

ತಾಲೂಕಿನ ಗೊಡಚಿಕೊಂಡ, ಯತ್ತಿನಹಳ್ಳಿ ಎಂ.ಕೆ. ನೂಲಗೇರಿಗೆ ನೂತನ ಬಸ್ ಸಂಚಾರಕ್ಕೆ ಚಾಲನೆ ನೀಡಿ ಮಾತನಾಡಿ, ಅನೇಕ ದಿನಗಳಿಂದ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳ ಬೇಡಿಕೆಗೆ ಸ್ಪಂದಿಸಿ ಬಸ್‌ ಸೌಕರ್ಯ ಕಲ್ಪಿಸಲಾಗಿದೆ ಎಂದರು.ಈ ವೇಳೆ ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಬುರಡಿಕಟ್ಟಿ, ಉಜಿನೆಪ್ಪ ಮಾವಿನತೋಪ, ವಿ.ಎಸ್. ಪುರದ, ಮಂಜುನಾಥ ಹಡಪದ, ಕಲ್ಲನಗೌಡ ಪಾಟೀಲ, ಪರಮೇಶ ಹೊಟ್ಟೇರ, ಬಸನಗೌಡ ಸಂಕೋಳ್ಳಿ, ರಾಜು ಪಾಟೀಲ, ಮಲ್ಲನಗೌಡ ಬಚಗೌಡ್ರ, ನಾಗರಾಜ ಕಮ್ಮಾರ, ಶಂಭುಲಿಂಗ ಬಚಗೌಡ್ರ, ಕರೇಗೌಡ ಪಾಟೀಲ ಇತರರು ಇದ್ದರು.