ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಕಠಿಣ ಪರಿಶ್ರಮ ಅಗತ್ಯ: ಡಾ.ಶಿವಕುಮಾರ್

KannadaprabhaNewsNetwork | Published : Oct 9, 2024 1:40 AM

ಸಾರಾಂಶ

ವಿದ್ಯಾರ್ಥಿಗಳು ಮತ್ತು ಯುವಕರು ತಮ್ಮ ಕನಸು ಈಡೇರಿಸಿಕೊಳ್ಳಲು ಪ್ರತಿದಿನ 5 ಗಂಟೆಗಳ ಸತತ ಅಧ್ಯಯನದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.ಪ್ರಚಲಿತ ವಿದ್ಯಮಾನಗಳೊಂದಿಗೆ ದೇಶ, ವಿದೇಶಗಳ ಸ್ಥಿತಿಗತಿ, ಇತಿಹಾಸ, ಅಲ್ಲಿನ ರಾಜ್ಯಾಡಳಿತ, ಆರ್ಥಿಕ ಮತ್ತು ಸಾಮಾಜಿಕ ಪರಿಸರದ ಬಗ್ಗೆ ತಿಳಿದುಕೊಳ್ಳುವುದರೊಂದಿಗೆ ಕೌಶಲ್ಯ ಹೆಚ್ಚಿಸಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಲು ಕಠಿಣ ಪರಿಶ್ರಮ, ಸಮಯ ಪ್ರಜ್ಞೆ ಅಳವಡಿಸಿಕೊಂಡಾಗ ಮಾತ್ರ ಸಾಧ್ಯ ಎಂದು ಬೆಂಗಳೂರಿನ ಅಕ್ಕ ಐಎಎಸ್ ಅಕಾಡೆಮಿ ಸಂಸ್ಥಾಪಕ ನಿರ್ದೇಶಕ ಡಾ.ಶಿವಕುಮಾರ್ ಅಭಿಪ್ರಾಯಪಟ್ಟರು.

ಪಟ್ಟಣದ ಶಿಕ್ಷಕರ ಭವನದಲ್ಲಿ ದಿ. ಸಿಟಿಜನ್ಸ್ ಆಫ್ ಇಂಡಿಯಾ ಕ್ವಾಲಿಟಿ ಎಜುಕೇಷನ್ ಟ್ರಸ್ಟ್, ಪ್ರಬುದ್ಧ ಕರ್ನಾಟಕ ಸೇವಾ ಟ್ರಸ್ಟ್ ಮತ್ತು ಕಲ್ಪತರು ಪ್ರಥಮ ದರ್ಜೆ ಕಾಲೇಜು ಸಹಯೋಗದಲ್ಲಿ ‘ಪಿಯುಸಿ-ಪದವಿ ನಂತರ ಮುಂದೇನು’ ಎಂಬ ವಿಚಾರ ಸಂಕಿರಣದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಮತ್ತು ಯುವಕರು ತಮ್ಮ ಕನಸು ಈಡೇರಿಸಿಕೊಳ್ಳಲು ಪ್ರತಿದಿನ 5 ಗಂಟೆಗಳ ಸತತ ಅಧ್ಯಯನದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.ಪ್ರಚಲಿತ ವಿದ್ಯಮಾನಗಳೊಂದಿಗೆ ದೇಶ, ವಿದೇಶಗಳ ಸ್ಥಿತಿಗತಿ, ಇತಿಹಾಸ, ಅಲ್ಲಿನ ರಾಜ್ಯಾಡಳಿತ, ಆರ್ಥಿಕ ಮತ್ತು ಸಾಮಾಜಿಕ ಪರಿಸರದ ಬಗ್ಗೆ ತಿಳಿದುಕೊಳ್ಳುವುದರೊಂದಿಗೆ ಕೌಶಲ್ಯ ಹೆಚ್ಚಿಸಿಕೊಳ್ಳಬೇಕು. ಇಲ್ಲದಿದ್ದರೆ ನಾಗರೀಕ ಸೇವೆ ಉನ್ನತ ಹುದ್ದೆಗಳಾದ ಐಎಎಸ್, ಐಪಿಎಸ್ ಪರೀಕ್ಷೆ ಎದುರಿಸುವುದು ಕಷ್ಟ ಸಾಧ್ಯವಾಗುತ್ತದೆ ಎಂದರು.

ಪಿಯುಸಿ ಮತ್ತು ಪದವಿ ಶಿಕ್ಷಣವನ್ನು ಸವಾಲಾಗಿ ತೆಗೆದುಕೊಂಡು ವ್ಯಾಸಂಗ ಮಾಡಿದರೆ ನಾಗರೀಕ ಸೇವಾ ಪರೀಕ್ಷೆಗಳು ಸುಲಭವಾಗುತ್ತದೆ. ಇಲ್ಲದಿದ್ದರೆ ಪರೀಕ್ಷೆ ಎದುರಿಸುವುದು ಕಷ್ಟವಾಗಲಿದೆ ಎಂದರು.

ರಾಜ್ಯ ಸಂಪನ್ಮೂಲ ತರಬೇತುದಾರ ವಿಠಲಾಪುರ ಜಯರಾಮು ಮಾತನಾಡಿ, ಸ್ಪರ್ಧಾತ್ಮಕ ಪ್ರಪಂಚದಲ್ಲಿ ಯಶಸ್ಸು ಸಾಧಿಸಲು ಸಾಕಷ್ಟು ಪರಿಶ್ರಮ, ಆತ್ಮವಿಶ್ವಾಸ ಮುಖ್ಯವಾಗುತ್ತದೆ. ನಮ್ಮ ಮನಸ್ಸಿನೊಳಗಿನ ತುಡಿತ ಯಶಸ್ಸಿನ ಮೂಲವಾಗುತ್ತದೆ. ಅಕ್ಕ ಐಎಎಸ್ ಅಕಾಡೆಮಿ ನೆರವು ನೀಡಿದರೆ ಅವರ ಸಹಯೋಗದಲ್ಲಿ ಪಟ್ಟಣದಲ್ಲಿ ಸ್ಪರ್ಧಾತ್ಮಕ ಪರಿಕ್ಷೆಗಳಿಗೆ ತರಬೇತಿ ನೀಡುವ ಕೇಂದ್ರ ತೆರೆಯಲು ಸಿದ್ಧವಿರುವುದಾಗಿ ತಿಳಿಸಿದರು.

ಲೇಖಕ ಬಲ್ಲೇನಹಳ್ಳಿ ಮಂಜುನಾಥ್ ಮಾತನಾಡಿ, ಪರಿಸ್ಥಿತಿ ಮತ್ತು ಸಮಯ ಎಲ್ಲಾ ಕಾಲದಲ್ಲಿಯೂ ನಮ್ಮ ಪರವಾಗಿಯೇ ಇರುತ್ತದೆಂದು ನಂಬಿಕೊಳ್ಳಬಾರದು. ಆಯಾ ಸಂದರ್ಭದ ಕಾರ್ಯಗಳನ್ನು ಅಂದೇ ಮುಗಿಸುವ ದೃಢ ಯೋಜನೆ ವಿದ್ಯಾರ್ಥಿಗಳಲ್ಲಿರಬೇಕು. ಓದುವ ಸಮಯವನ್ನು ವ್ಯರ್ಥ ಮಾಡಿದರೆ ಮುಂದೆ ಪಶ್ಚತ್ತಾಪ ಪಡಬೇಕಾಗುತ್ತದೆ ಎಂದರು.

ಜೀವನ ಕೌಶಲ್ಯ ತರಬೇತುದಾರ ಮಂಜುನಾಥ್ ಪ್ರಾಸ್ತಾವವಿಕ ಮಾತುಗಳನ್ನಾಡಿದರು. ಕಾರ್ಯಕ್ರಮದಲ್ಲಿ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಆನಂದ್‌ಕುಮಾರ್, ಪ್ರಮುಖರಾದ ಧನಂಜಯ, ರಾಮಚಂದ್ರು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದ ಅಧ್ಯಕ್ಷ ಪೂರ್ಣಚಂದ್ರ ತೇಜಸ್ವಿ, ಸ್ಕಾಲರ್ಸ್‌ ಪಿಯು ಕಾಲೇಜಿನ ಪ್ರಾಂಶುಪಾಲ ಮಂಜುನಾಥ್, ಪ್ರಬುದ್ಧ ಕರ್ನಾಟಕ ಸೇವಾ ಟ್ರಸ್ಟ್‌ನ ಅಧ್ಯಕ್ಷ ಎಚ್.ಜೆ.ಕಾಂತರಾಜು, ದಿ ಸಿಟಿಜನ್ಸ್ ಆಫ್ ಇಂಡಿಯಾ ಕ್ವಾಲಿಟಿ ಎಜುಕೇಷನ್ ಟ್ರಸ್ಟ್ ಅಧ್ಯಕ್ಷೆ ಎಚ್.ಡಿ. ಪ್ರಿಯಾಂಕ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

Share this article