ಕನ್ನಡಪ್ರಭ ವಾರ್ತೆ ಗದಗ
ಗದಗ ನಗರದ ತೋಂಟದಾರ್ಯ ಮಠದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದ ಆಶ್ರಯದಲ್ಲಿ ಆಯೋಜಿಸಲಾಗಿದ್ದ 2820ನೇ ಶಿವಾನುಭವ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಬಸವಣ್ಣನವರ ತತ್ತ್ವ ಸಂದೇಶಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಮಂಜಪ್ಪನವರ ಪಾತ್ರ ಹಿರಿದು ಎಂದರು.
ಬಸವಣ್ಣ ಎಂದರೆ ಕೇವಲ ನಂದಿಯಲ್ಲ, ಅವರೊಬ್ಬ ಚಾರಿತ್ರಿಕ ಯುಗಪುರುಷ. ಅಂತಹ ಮಹಾತ್ಮ ಬಸವಣ್ಣನವರ ಸಂದೇಶಗಳನ್ನು ಮನೆ ಮನಗಳಿಗೆ ಮುಟ್ಟಿಸಿದ ಹರ್ಡೇಕರ ಮಂಜಪ್ಪನವರು 1913 ರಲ್ಲಿ ದಾವಣಗೆರೆಯಲ್ಲಿ ಮೊಟ್ಟಮೊದಲ ಬಾರಿಗೆ ಬಸವ ಜಯಂತಿಯನ್ನು ಆರಂಭಿಸಿದ ಕೀರ್ತಿಗೆ ಭಾಜನರಾಗಿದ್ದಾರೆ. ಉತ್ತಂಗಿ ಚನ್ನಪ್ಪ, ಹರ್ಡೇಕರ ಮಂಜಪ್ಪ ಹಾಗೂ ಫ.ಗು. ಹಳಕಟ್ಟಿಯವರು ಲಿಂಗಾಯತ ಧರ್ಮದ ಮೂರು ಆಧಾರಸ್ತಂಭಗಳಿದ್ದಂತೆ.ಮಂಜಪ್ಪನವರು ಗಾಂಧೀಜಿಯವರ ಅಪ್ಪಟ ಅನುಯಾಯಿಯಾಗಿ ಖಾದಿ ಪ್ರಚಾರ ಮಾಡಿದರು. 1924ರ ಬೆಳಗಾವಿ ಕಾಂಗ್ರೆಸ್ ಅಧಿವೇಶನದಲ್ಲಿ ಶಿಸ್ತಿನಿಂದ ಕಾರ್ಯನಿರ್ವಹಿಸಿ ಗಮನ ಸೆಳೆದಿದ್ದರು. ಇಂದಿನ ಮಕ್ಕಳೇ ಮುಂದಿನ ಭವಿಷ್ಯ ಎಂಬುದನ್ನು ಅರಿತು ಮಕ್ಕಳಿಗಾಗಿ ನೈತಿಕ ಸಾಹಿತ್ಯ ರಚನೆಗೆ ಒತ್ತು ನೀಡಿದರು. ಆಲಮಟ್ಟಿಯಲ್ಲಿ ಗುರುಕುಲ ಸ್ಥಾಪಿಸಿ, ದಾರಿ ತಪ್ಪಿದ ಮಕ್ಕಳಿಗೆ ಸನ್ನಡತೆ ಹಾಗೂ ಸಂಸ್ಕಾರ ಕಲಿಸಿ ಸಮಾಜದ ಮುಖ್ಯವಾಹಿನಿಗೆ ತಂದರು. ಈ ಮಹನೀಯರ ನೆನಪಿನಲ್ಲಿ ಸಂಸ್ಥಾನ ಮಠದಿಂದ ಆಲಮಟ್ಟಿಯಲ್ಲಿ ಶಾಲೆ-ಕಾಲೇಜುಗಳನ್ನು ಸ್ಥಾಪಿಸಲಾಗಿದೆ ಎಂದು ಸ್ಮರಿಸಿದರು.
ಇದೇ ಸಂದರ್ಭ ಜಿಪಂ ಮಾಜಿ ಅಧ್ಯಕ್ಷ ಪ್ರಭಣ್ಣ ಹುಣಸಿಕಟ್ಟಿ ಹಾಗೂ ನೀಲಮ್ಮ ಹುಣಸಿಕಟ್ಟಿ ದಂಪತಿಯ ಸಾಮಾಜಿಕ ಸೇವೆ ಮತ್ತು ಆದರ್ಶ ದಾಂಪತ್ಯವನ್ನು ಗೌರವಿಸಿ ಪೂಜ್ಯರು ಸನ್ಮಾನಿಸಿದರು. ಸಮಾರಂಭದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಡಾ. ಉಮೇಶ ಪುರದ ಸ್ವಾಗತಿಸಿದರು. ವಚನ ಹಳ್ಯಾಳ ಧರ್ಮಗ್ರಂಥ ಪಠಣ, ಮಹಾಂತೇಶ ಏಳಳ್ಳಿ ವಚನ ಚಿಂತನ ನಡೆಸಿಕೊಟ್ಟರು. ಪ್ರೊ. ಶಿವಬಸವ ಗಡ್ಡದಮಠ ಹಾಗೂ ಡಾ. ಹನುಮಂತ ಹೂಗಾರ ವಚನ ಸಂಗೀತ ಸೇವೆ ಸಲ್ಲಿಸಿದರು.