ಎಸ್ಸೆಸ್ಸೆಂ ವಿರುದ್ಧ ಹರಿಹರ ಶಾಸಕ ಹರೀಶ್‌ ಸಲ್ಲದ ಟೀಕೆ

KannadaprabhaNewsNetwork |  
Published : Mar 15, 2025, 01:05 AM IST
14ಎಚ್‍ಆರ್‍ಆರ್ 01 ಹರಿಹರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಎಸ್. ರಾಮಪ್ಪ ಮಾತನಾಡಿದರು. ದಾವಣಗೆರೆ-ಹರಿಹರ ನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ದಿನೇಶ್ ಶೆಟ್ಟಿ ಹಾಗೂ ಇತರರು ಉಪಸ್ಥಿತರಿದ್ದರು. | Kannada Prabha

ಸಾರಾಂಶ

ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ವಿರುದ್ಧ ವೈಯಕ್ತಿಕವಾಗಿ ಟೀಕೆ ಮಾಡುವುದನ್ನು ಶಾಸಕ ಬಿ.ಪಿ. ಹರೀಶ್ ನಿಲ್ಲಿಸಬೇಕು. ಒಬ್ಬ ಜವಾಬ್ದಾರಿಯುತ ಶಾಸಕರಾಗಿ ಅವರು ವರ್ತಿಸಬೇಕು ಎಂದು ಮಾಜಿ ಶಾಸಕ ಎಸ್.ರಾಮಪ್ಪ ಎಚ್ಚರಿಸಿದ್ದಾರೆ.

- ಆರೋಪಗಳ ಬಿಟ್ಟು ಅಭಿವೃದ್ಧಿಗೆ ಗಮನಹರಿಸಿ: ಮಾಜಿ ಶಾಸಕ ರಾಮಪ್ಪ ಸಲಹೆ - - - ಕನ್ನಡಪ್ರಭ ವಾರ್ತೆ ಹರಿಹರ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ವಿರುದ್ಧ ವೈಯಕ್ತಿಕವಾಗಿ ಟೀಕೆ ಮಾಡುವುದನ್ನು ಶಾಸಕ ಬಿ.ಪಿ. ಹರೀಶ್ ನಿಲ್ಲಿಸಬೇಕು. ಒಬ್ಬ ಜವಾಬ್ದಾರಿಯುತ ಶಾಸಕರಾಗಿ ಅವರು ವರ್ತಿಸಬೇಕು ಎಂದು ಮಾಜಿ ಶಾಸಕ ಎಸ್.ರಾಮಪ್ಪ ಎಚ್ಚರಿಸಿದರು.

ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸಂಜೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹರೀಶ್ ಅವರಿಗೆ ತಾವು ಏನು ಮಾತನಾಡುತ್ತಿದ್ದೇನೆ, ಯಾರ ಬಗ್ಗೆ ಮಾತನಾಡುತ್ತಿದ್ದೇನೆ ಎಂಬ ಅರಿವು ಇಲ್ಲದಂತಾಗಿದೆ. ಅವರು ಯತ್ನಾಳ್‌ರ ಜೊತೆ ಸೇರಿ ಮನಬಂದಂತೆ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದರು.

ಕೇವಲ ಯಡಿಯೂರಪ್ಪ ಮತ್ತು ವಿಜಯೇಂದ್ರ ವಿರುದ್ಧ ಮಾತನಾಡುತ್ತಿದ್ದರು. ಈಗ ಕ್ಷೇತ್ರದ ಅಭಿವೃದ್ಧಿ ಬದಲು ಜಿಲ್ಲಾ ಸಚಿವರ ಬಗ್ಗೆ ಮಾತನಾಡುತ್ತಾರೆ. ವಿರೋಧ ಪಕ್ಷದಲ್ಲಿದ್ದೇನೆ ಎಂದು ಆಡಳಿತ ಪಕ್ಷದವರನ್ನು ಟೀಕೆ ಮಾಡುವುದೇ ಕಾಯಕ ಮಾಡಿಕೊಂಡಿದ್ದಾರೆ. ಸಚಿವ ಮಲ್ಲಿಕಾರ್ಜುನ್ ನಿರಂತರ ಜನಸಂಪರ್ಕದಲ್ಲಿದ್ದು, ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದಾರೆ. ಹರೀಶ್ ಟೀಕೆ ಬಿಟ್ಟು ಆಡಳಿತ ಪಕ್ಷದ ಸಚಿವರನ್ನು ವಿಶ್ವಾಸಕ್ಕೆ ಪಡೆದು, ಕ್ಷೇತ್ರದಲ್ಲಿ ಆಗಬೇಕಾದ ಕೆಲಸಗಳ ಬಗ್ಗೆ ಗಮನ ಹರಿಸಲಿ ಎಂದರು.

ನಾನು ಶಾಸಕನಾಗಿದ್ದ ಸಂದರ್ಭ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇತ್ತು. ಸಚಿವರನ್ನು ವಿಶ್ವಾಸಕ್ಕೆ ಪಡೆದು ತಾಲೂಕಿನ ಅಭಿವೃದ್ಧಿಗೆ ₹600 ಕೋಟಿ ಅನುದಾನ ತಂದಿದ್ದೇನೆ. ನನ್ನ ಅವಧಿಯಲ್ಲಿ ಭೈರನಪಾದ ಏತ ನೀರಾವರಿ ಯೋಜನೆ ಜಾರಿ ಕೆಲವರು ಕುತಂತ್ರದಿಂದಾಗಿ ತಪ್ಪಿತು. ಪರಿಣಾಮ ಯೋಜನೆ ಮತ್ತೆ ನನೆಗುದಿಗೆ ಬೀಳುವಂತಾಗಿದೆ ಎಂದರು.

ದಾವಣಗೆರೆ- ಹರಿಹರ ನಗರ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಕೆ.ದಿನೇಶ್ ಶೆಟ್ಟಿ ಮಾತನಾಡಿ, ಶಾಸಕ ಹರೀಶ್ ರಾಜಕೀಯವನ್ನೇ ಉದ್ಯೋಗ ಮಾಡಿಕೊಂಡಿದ್ದಾರೆ. ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ರಾಜಕೀಯಕ್ಕೆ ಬರುವ ಮುನ್ನವೇ ಉದ್ಯಮಿಗಳಾಗಿದ್ದರು. ಅವರ ಬಗ್ಗೆ ದಾವಣಗೆರೆ ಜನತೆಗೆ ಗೊತ್ತಿದೆ ಎಂದರು.

ಹರಿಹರ ಕ್ಷೇತ್ರದ ಅಭಿವೃದ್ಧಿಗಿಂತ ಯತ್ನಾಳರೊಂದಿಗೆ ದೆಹಲಿಗೆ ತೆರಳಿ ತಮ್ಮದೇ ಪಕ್ಷದವರ ವಿರುದ್ಧ ಹಾಗೂ ಸಚಿವ ಮಲ್ಲಿಕಾರ್ಜುನ್ ವಿರುದ್ಧ ಮೆಂಟಲ್ ಗಿರಾಕಿ ರೀತಿ ಮಾತನಾಡುತ್ತಿದ್ದಾರೆ ಎಂದು ಅವರದೇ ಪಕ್ಷದವರು ಮಾತನಾಡಿಕೊಳ್ಳುತ್ತಿದ್ದಾರೆ. ಹರಿಹರ ನಗರಸಭೆಯಲ್ಲಿ ದೂಡಾ ಕಚೇರಿ ಉದ್ಘಾಟನೆ ಸಂದರ್ಭದಲ್ಲಿಯೂ ಮನಬಂದಂತೆ ಮಾತನಾಡಿದರು. ಇಷ್ಟಲ್ಲದೇ ಹಕ್ಕು ಚುತಿಯಾಗಿದೆ ಎಂದು ಅಧಿಕಾರಿಗಳ ವಿರುದ್ಧ ದೂರು ನೀಡಿದ್ದಾರೆ. ಇವತ್ತೇ ಚುನಾವಣೆ ನಡೆದರೂ ಅವರು ಠೇವಣಿ ಕಳೆದುಕೊಳ್ಳುತ್ತಾರೆ ಎಂದು ವ್ಯಂಗ್ಯವಾಡಿದರು.

ಹರಿಹರ ನಗರಕ್ಕೆ ₹7 ಕೋಟಿ ಅಭಿವೃದ್ಧಿ ಕಾಮಗಾರಿಗಳನ್ನು ಸಚಿವರ ಸೂಚನೆಯಂತೆ ದೂಡಾದಿಂದ ಮಾಡುತ್ತಿದ್ದೇವೆ. ಆದರೆ ಹರೀಶ್ ಎಲ್ಲದಕ್ಕೂ ಅಡ್ಡಗಾಲು ಹಾಕುವ ಕೆಲಸ ಮಾಡುತ್ತಿದ್ದಾರೆ. ಅವರು ಶಾಸಕರಾದ ನಂತರ ತಾಲೂಕಿನಲ್ಲಿ ಎಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ ಎಂದು ಪ್ರಶ್ನಿಸಿದರು.

ಕೆಪಿಸಿಸಿ ಸದಸ್ಯ ಬಿ.ರೇವಣಸಿದ್ದಪ್ಪ, ದೂಡಾ ಸದಸ್ಯ ಜಬ್ಬರ್ ಸಾಬ್, ಪಾಲಿಕೆಯ ಸದಸ್ಯ ಎ.ನಾಗರಾಜ್, ಮುಖಂಡರಾದ ಸಿ.ಎ.ನ್ ಹುಲಿಗೇಶ್, ಸೈಯದ್ ಸನಾವುಲ್ಲಾ, ಹಬೀಬ್ ಬೇಗ್, ಆಸಿಫ್ ಪೈಲ್ವಾನ್, ಅಬ್ದುಲ್, ರಾಹುಲ್ ಜೆ.ಬಿ. ಇತರರಿದ್ದರು.

- - - -14ಎಚ್‍ಆರ್‍ಆರ್01:

ಹರಿಹರ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಎಸ್.ರಾಮಪ್ಪ ಮಾತನಾಡಿದರು. ದಾ-ಹ ನಗರ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಕೆ.ದಿನೇಶ್ ಶೆಟ್ಟಿ ಇತರರು ಇದ್ದರು.

PREV