- ಮಹಜೇನಹಳ್ಳಿ ದೇವಸ್ಥಾನದಲ್ಲಿ ದೇವಿಗೆ ಉಡಿ ಅರ್ಪಿಸಿದ ಭಕ್ತರು
- ಬಲಿ ಪೂಜೆ, ಕೊಪ್ಪರಿಗೆ ಪೂಜೆ । ಚರಗ ಸಂಪ್ರದಾಯಕ್ಕೆ ಚಾಲನೆ- - - ಕನ್ನಡಪ್ರಭ ವಾರ್ತೆ ಹರಿಹರ ನಗರದ ಗ್ರಾಮದೇವತೆ ಊರಮ್ಮನ ಉತ್ಸವಕ್ಕೆ ಮೊದಲ ದಿನವಾದ ಮಂಗಳವಾರ ವಿಜೃಂಭಣೆಯಿಂದ ಚಾಲನೆ ದೊರೆಯತು. 5 ದಿನಗಳ ಉತ್ಸವದ ಹಿನ್ನೆಲೆ ನಗರದ ಬಹುತೇಕ ಮನೆಗಳ ಮುಂದೆ ಬಣ್ಣಬಣ್ಣದ ಚಿತ್ತಾರದ ರಂಗೋಲಿ ಕಂಗೊಳಿಸುತ್ತಿದ್ದವು.
ಮಹಿಳೆಯರು ಬೆಳಗಿನ ಜಾವದಿಂದಲೇ ಸ್ನಾನ ಮುಗಿಸಿ, ಹೋಳಿಗೆ ಸೇರಿದಂತೆ ವಿವಿಧ ಸಿಹಿ ತಿನಿಸು ಸಿದ್ಧಪಡಿಸಿ, ಅಕ್ಕಿ, ಗೋಧಿ, ಬೆಲ್ಲ, ಎಲೆ, ಬೆಟ್ಟಡಿಕೆ, ಅರಿಶಿನ, ಕುಂಕುಮ, ಉತ್ತುತ್ತಿ ಶಕ್ತಾನುಸಾರ ರವಿಕೆ ಕಣ, ಸೀರೆಯೊಂದಿಗೆ ಕುಟುಂಬ ಸಮೇತ ಮಹಜೇನಹಳ್ಳಿ ದೇವಸ್ಥಾನಕ್ಕೆ ತೆರಳಿ ತಾಯಿ ಊರಮ್ಮನಿಗೆ ಉಡಿ ತುಂಬಿ ಹರಸುವಂತೆ ಬೇಡಿಕೊಂಡರು. ಮಂಗಳವಾರ ರಾತ್ರಿಯವರೆಗೆ ಉಡಿ ತುಂಬುವ ಕಾರ್ಯ ನಡೆಯಿತು.ಕಸಬಾ ಹಾಗೂ ಮಹಜೇನಹಳ್ಳಿ ಗ್ರಾಮಗಳು ಸೇರಿ ಹರಿಹರ ನಗರವಾಗಿದೆ. ದೇವಸ್ಥಾನದ ರಸ್ತೆಯ ಎಡಭಾಗ ಕಸಬಾ ಗ್ರಾಮದ್ದಾಗಿದ್ದರೆ, ಬಲಭಾಗ ಮಹಜೇನಹಳ್ಳಿ ಗ್ರಾಮಕ್ಕೆ ಸೇರಿದೆ. ಹೀಗಾಗಿ ಎರಡೂ ಗ್ರಾಮಗಳ ಮಧ್ಯೆ ಬರುವ ದೇವಸ್ಥಾನದ ರಸ್ತೆಯಲ್ಲಿ ಚೌಕಿಮನೆ ಸ್ಥಾಪಿಸಿ ಹಬ್ಬ ಆಚರಿಸುವುದು ಊರಮ್ಮನ ಹಬ್ಬದ ವೈಶಿಷ್ಟ್ಯ.
ಎರಡು ಚರಗ:ಊರು ಒಂದೇ ಆದರೂ ಇಲ್ಲಿನ ಸಂಪ್ರದಾಯ ಬದಲಾಗಿಲ್ಲ. ಚೌಕಿಮನೆಯ ಎಡಭಾಗದಲ್ಲಿರುವ ಕಸಬಾ ಚರಗ ಬೇಯಿಸಿದರೆ, ಬಲಭಾಗದಲ್ಲಿ ಮಹಜೇನಹಳ್ಳಿ ಚರಗ ಬೇಯಿಸುತ್ತಾರೆ. ಬೇಯಿಸಿದ ಚರಗ ಅಕ್ಕಪಕ್ಕ ರಾಶಿ ಮಾಡಿದರೂ, ಒಂದು ಕಾಳು ಚರಗ ಸಹ ಮತ್ತೊಂದು ಚರಗದಲ್ಲಿ ಸೇರದಂತೆ ಎಚ್ಚರ ವಹಿಸುತ್ತಾರೆ. ಬುಧವಾರ ಬೆಳಗ್ಗೆ ತಮ್ಮ ತಮ್ಮ ಗ್ರಾಮದ ವ್ಯಾಪ್ತಿಯಲ್ಲಿ ಚರಗ ಚಲ್ಲುವ ಕಾರ್ಯಕ್ರಮ ನಡೆಯುತ್ತದೆ.
ಕೋಣ ಬಲಿಯಿಂದ ವಿಧವೆ:ಮಂಗಳವಾರ ರಾತ್ರಿ 10 ಗಂಟೆರವರೆಗೆ ಉಡಿ ತುಂಬುವ ಕಾರ್ಯ ನಡೆಯಿತು. ಅನಂತರ ಊರಮ್ಮನ ಅದ್ಧೂರಿ ಮೆರವಣಿಗೆ ಪ್ರಾರಂಭವಾಯಿತು. ಬುಧವಾರ ಬೆಳಗಿನ ಜಾವ ಚೌಕಿಮನೆ ಬಳಿ ಬರುತ್ತಲೆ ಕೋಣಬಲಿ ನಡೆಯುತ್ತದೆ. ನಂತರ ಚೌಕಿಮನೆಯಲ್ಲಿ ದೇವಿ ಪೀಠಸ್ಥಳಾಗುತ್ತಾಳೆ. ಕೋಣ ಬಲಿಯಿಂದ ಊರಮ್ಮ ದೇವಿ ವಿಧವೆ ಆಗುತ್ತಾಳೆ ಎಂಬ ನಂಬಿಕೆ ತಲತಲಾಂತರದಿಂದ ನಡೆದುಬಂದಿದೆ. ಹಾಗಾಗಿ, ಬುಧವಾರ ಮಧ್ಯಾಹ್ನದವರೆಗೆ ದೇವಿಯ ಮುಂದೆ ಪರದೆ ಹಾಕಲಾಗುತ್ತದೆ. ಅನಂತರ ಮತ್ತೆ ವಿವಿಧ ವಿಧಿವಿಧಾನಗಳ ಮೂಲಕ ದೇವಿಗೆ ಮುತ್ತೈದೆಪಟ್ಟ ಕಟ್ಟಲಾಗುತ್ತದೆ.
ತುಂಗಭದ್ರಾ ನದಿಯ ಸೇತುವೆಯಿಂದ ದಾವಣಗೆರೆ ರಸ್ತೆಯ 1ನೇ ಗೇಟ್ ಹಾಗೂ ಗುತ್ತೂರು ಗ್ರಾಮದ ಗಡಿಯಿಂದ ಬೈಪಾಸ್ ಸಮೀದವರೆಗೆ ಝಗಮಗಿಸುವ ವಿದ್ಯುತ್ ಲೈಟ್ ವ್ಯವಸ್ಥೆ ಮಾಡಲಾಗಿದೆ. ದೇವಸ್ಥಾನದ ರಸ್ತೆಯಂತೂ ಬಣ್ಣಬಣ್ಣದ ಲೈಟ್‌ಗಳಿಂದಾಗಿ ಝಗಮಗಿಸಿ, ನೋಡುಗರ ಮನಸೂರೆಗೊಳಿಸುತ್ತಿದೆ.ಪ್ರತಿ ಬಾರಿ ಗ್ರಾಮದೇವತಾ ಉತ್ಸವ ನಡೆದಾಗಲೂ ಉತ್ಸವ ಸಮಿತಿ ಪದಾಧಿಕಾರಿಗಳು ಸುದ್ದಿಗೋಷ್ಠಿ ಮಾಡಿ, ಪತ್ರಕರ್ತರಿಗೆ ಕಾರ್ಯಕ್ರಮದ ಮಾಹಿತಿ ನೀಡುತ್ತಿದ್ದರು. ಉತ್ಸವ ನಿಮಿತ್ತ ಕುಸ್ತಿ, ಟಗರು ಕಾಳಗ, ಬಂಡಿ ಓಡಿಸುವ ಸ್ಪರ್ಧೆ, ಬೆಲ್ಲದ ಬಂಡಿ, ಇತ್ಯಾದಿಗಳ ಮಾಹಿತಿ ನೀಡುತ್ತಿದ್ದರು. ಆದರೆ, ಈ ಬಾರಿ ಸುದ್ದಿಗೋಷ್ಠಿ ಮಾಡಿ, ಮಾಹಿತಿ ನೀಡಿಲ್ಲ.
- - -ಬಾಕ್ಸ್ * ಕನ್ನಡಪ್ರಭ ವಾರ್ತೆ ಹರಿಹರ
ಊರಮ್ಮ ದೇವಿ ಮಹೋತ್ಸವಕ್ಕೆ ಮಂಗಳವಾರ ದೇವಿಗೆ ಅಭಿಷೇಕ ಅಲಂಕಾರ ಮಾಡಲಾಗಿತ್ತು. ವಜ್ರದ ಮೂಗುತಿ, ಚಿನ್ನದ ಕಿರೀಟ, ಬೆಳ್ಳಿಯ ತ್ರಿಶೂಲಗಳಿಂದ ಸಿಂಗಾರಗೊಂಡಿದ್ದ ದೇವಿಯು ಭಕ್ತರ ಕಣ್ಮನ ಸೆಳೆದಳು. ಮಂಗಳವಾರ ಕಸಬಾ ಹಾಗೂ ಮಹಜೇನಹಳ್ಳಿ ಗ್ರಾಮದಿಂದ ಬಲಿ ಪೂಜೆ, ಕೊಪ್ಪರಿಗೆ ಪೂಜೆ ಮಾಡಿ ಮೆರವಣಿಗೆ ಮೂಲಕ ಪ್ರತ್ಯೇಕ ಎತ್ತಿನ ಬಂಡಿಯಲ್ಲಿ ಚರಗದ ಜೋಳವನ್ನು ತಂದು ಚೌಕಿ ಮನೆಯ ಸಮೀಪ ಬೇಯಿಸಿ ರಾಶಿ ಮಾಡಲಾಯಿತು. ಅಮ್ಮನನ್ನು ಕೂರಿಸುವ ಮಂಟಪವನ್ನು ಕಸಬಾ ದೇವಸ್ಥಾನದಿಂದ ಅದ್ಧೂರಿ ಮೆರವಣಿಗೆ ಮೂಲಕ ಚೌಕಿ ಮನೆಗೆ ತರಲಾಯಿತು.ಬಿಗಿ ಪೊಲೀಸ್ ಬಂದೋಬಸ್ತ್:
ಹರಿಹರ ನಗರದಲ್ಲಿ ಐದು ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ದೇವಸ್ಥಾನಗಳು ಹಾಗೂ ಚೌಕಿ ಮನೆ ಸೇರಿದಂತೆ ವಿವಿಧೆಡೆ ಸಿಸಿ ಕ್ಯಾಮರಗಳನ್ನು ಅಳವಡಿಸಲಾಗಿದೆ. ಸುಗಮ ಸಂಚಾರಕ್ಕಾಗಿ ಮಾರ್ಗದಲ್ಲಿ ಕೆಲವು ಬದಲಾವಣೆ ಮಾಡುವ ಮೂಲಕ ಸಂಚಾರ ದಟ್ಟನೆಯಾಗದಂತೆ ಇಲಾಖೆಯಿಂದ ಸೂಕ್ತ ಕ್ರಮ ಕೈಗೊಳ್ಳಲಾಗಿದೆ.ನಗರದ ಸರ್ಕಾರಿ ಆಸ್ಪತ್ರೆಯಿಂದ ಉಡಿ ತುಂಬಲು ಬಂದ ಸಾರ್ವಜನಿಕರಿಗೆ ಬಿಸಿಲಿನಿಂದ ಅನಾರೋಗ್ಯ ಸಮಸ್ಯೆ ಆಗಬಾರದು ಎಂದು ಒಆರ್‌ಎಸ್ ಪೌಡರ್ ಹಾಗೂ ಇನ್ನಿತರ ಔಷಧಿಗಳ ವ್ಯವಸ್ಥೆ ಮಾಡಲಾಗಿತ್ತು.
ಶಾಸಕ ಬಿ.ಪಿ. ಹರೀಶ್, ಮಾಜಿ ಶಾಸಕರಾದ ಎಚ್.ಎಸ್. ಶಿವಶಂಕರ್, ಎಸ್.ರಾಮಪ್ಪ ನಗರಸಭಾ ಅಧ್ಯಕ್ಷೆ ಕವಿತಾ ಮಾರುತಿ ಬೇಡರ್, ಉಪಾಧ್ಯಕ್ಷ ಜಂಬಣ್ಣ ಸೇರಿದಂತೆ ವಿವಿಧ ಮುಖಂಡರು ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು.- - - -18ಎಚ್‍ಆರ್‌ಆರ್01: ಹರಿಹರದ ಗ್ರಾಮದೇವತೆ ಊರಮ್ಮ.
-18ಎಚ್‍ಆರ್‍ಆರ್02: ಹರಿಹರದ ಗ್ರಾಮದೇವತೆ ಊರಮ್ಮ ದೇವಿ ಉತ್ಸವ ನಿಮಿತ್ತ ಮಂಗಳವಾರ ಭಕ್ತರು ಸರತಿ ಸಾಲಿನಲ್ಲಿ ಆಗಮಿಸಿ ಉಡಿ ನೀಡಿದರು.-18ಎಚ್‍ಆರ್‍ಆರ್03: ಹರಿಹರದ ಗ್ರಾಮದೇವತೆ ಊರಮ್ಮ ದೇವಿ ಉತ್ಸವಕ್ಕೆ ಚೌಕಿಮನಿ ಸಿದ್ಧಪಡಿಸಿರುವುದು.
-18ಎಚ್‍ಆರ್‍ಆರ್04: ಹರಿಹರದ ಗ್ರಾಮದೇವತೆ ಊರಮ್ಮ ದೇವಿ ಉತ್ಸವಕ್ಕೆ ಸಿದ್ಧವಾಗಿರುವ ದ್ವಾರಬಾಗಿಲು.