ಸಾರಾಂಶ
ಹಣಕಾಸು ವ್ಯವಹಾರ ಸಂಬಂಧ ಮಾತನಾಡುವ ನೆಪದಲ್ಲಿ ವ್ಯಕ್ತಿಯೊಬ್ಬರನ್ನು ಗೋಡೌನ್‌ಗೆ ಕರೆದೊಯ್ದು ಹಲ್ಲೆ ಮಾಡಿ ಬಳಿಕ ರೇಣುಕಾಸ್ವಾಮಿ ರೀತಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ ಆರೋಪ ಸಂಬಂಧ ಇಬ್ಬರು ವ್ಯಕ್ತಿಗಳ ವಿರುದ್ಧ ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು : ಹಣಕಾಸು ವ್ಯವಹಾರ ಸಂಬಂಧ ಮಾತನಾಡುವ ನೆಪದಲ್ಲಿ ವ್ಯಕ್ತಿಯೊಬ್ಬರನ್ನು ಗೋಡೌನ್‌ಗೆ ಕರೆದೊಯ್ದು ಹಲ್ಲೆ ಮಾಡಿ ಬಳಿಕ ರೇಣುಕಾಸ್ವಾಮಿ ರೀತಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ ಆರೋಪ ಸಂಬಂಧ ಇಬ್ಬರು ವ್ಯಕ್ತಿಗಳ ವಿರುದ್ಧ ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಂದ್ರಾಲೇಔಟ್‌ನ ಐಟಿಐ ಎಚ್‌ಬಿಸಿಎಸ್ ಲೇಔಟ್ 2ನೇ ಹಂತದ ನಿವಾಸಿ ಎಂ.ವಿ.ಬಾಗೇಗೌಡ (30) ಎಂಬುವವರು ನೀಡಿದ ದೂರಿನ ಮೇರೆಗೆ ಮಂಜುನಾಥ ಹುಲುಗೂರ್ ಮತ್ತು ಪರಮೇಶಪ್ಪ ಹುಲುಗೂರ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಘಟನೆಯು ಗದಗ ಜಿಲ್ಲೆ ಲಕ್ಷ್ಮೀಶ್ವರ ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ನಡೆದಿದೆ. ಹೀಗಾಗಿ ಪ್ರಕರಣವನ್ನು ಸಂಬಂಧಪಟ್ಟ ಪೊಲೀಸ್ ಠಾಣೆಗೆ ವರ್ಗಾಯಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ದೂರಿನಲ್ಲಿ ಏನಿದೆ?:
ದೂರುದಾದ ಬಾಗೇಗೌಡ ನೀಡಿದ ದೂರಿನಲ್ಲಿ ಮಂಜುನಾಥ ಹುಲುಗೂರ್ ಅವರು 2021ರಲ್ಲಿ ಪರಿಚಿತರಾಗಿ ಸ್ನೇಹಿತರಾಗಿದ್ದೆವು. 2022ನೇ ಸಾಲಿನಲ್ಲಿ ಎಂಬಿಬಿ ಗ್ಲೋಬಲ್ ಲಿಮಿಟೆಡ್ ಕಂಪನಿಯಲ್ಲಿ ಇಬ್ಬರು ಹೂಡಿಕೆ ಮಾಡಿದ್ದೆವು. ಆದರೆ, ಕಂಪನಿ ನಮಗೆ ಮೋಸ ಮಾಡಿದ ಪರಿಣಾಮ ಎರಡು ವರ್ಷದ ಹಿಂದೆ ಯಶವಂತಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದೆವು. ಈ ಪ್ರಕರಣವು ಸಿಐಡಿಗೆ ವರ್ಗವಾಗಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಮಂಜುನಾಥ ಹುಲುಗೂರ್ ಅವರು ಅ.23ರಂದು ರಾತ್ರಿ 12.15ಕ್ಕೆ ಮೆಜೆಸ್ಟಿಕ್ ರೈಲು ನಿಲ್ದಾಣಕ್ಕೆ ಬರಲು ಹೇಳಿದ್ದರು. ಅದರಂತೆ ರೈಲು ನಿಲ್ದಾಣಕ್ಕೆ ತೆರಳಿದ್ದೆ. ಮಂಜುನಾಥ್ ಅವರೇ ನನಗೂ ಟಿಕೆಟ್ ಬುಕ್ ಮಾಡಿದ್ದರು. ಬಳಿಕ ಇಬ್ಬರೂ ರೈಲಿನಲ್ಲಿ ಲಕ್ಷ್ಮೇಶ್ವರಕ್ಕೆ ಪ್ರಯಾಣಿಸಿದೆವು. ಮಾರನೇ ದಿನ ಲಕ್ಷ್ಮೀಶ್ವರ ತಲುಪಿ ಅಲ್ಲಿ ಮಂಜುನಾಥ್ ಅವರೇ ಕಾಯ್ದಿರಿಸಿದ್ದ ಖಾಸಗಿ ಹೋಟೆಲ್‌ನಲ್ಲಿ ರೂಮ್‌ನಲ್ಲಿ ಉಳಿದು ಕೊಂಡೆವು.
ಗೋಡೌನ್‌ಗೆ ಕರೆದೊಯ್ದು ಹಲ್ಲೆ:
ಬಳಿಕ ಸ್ನೇಹಿತನ ಜತೆಗೆ ಮಾತನಾಡಬೇಕು ಎಂದು ಮಂಜುನಾಥ್ ಅವರು ನನ್ನನ್ನು ಶಿಗ್ಲಿ ಗ್ರಾಮಕ್ಕೆ ಕರೆದೊಯ್ದರು. ಅಲ್ಲಿಂದ ಗೋಡೌನ್‌ವೊಂದಕ್ಕೆ ಕರೆದೊಯ್ದು ಮಾತನಾಡುವಾಗ ನನ್ನ ಮೊಬೈಲ್ ಕಸಿದುಕೊಂಡ ಮಂಜುನಾಥ್, ಅವಾಚ್ಯ ಶಬ್ಧಗಳಿಂದ ನನ್ನ ಮತ್ತು ನನ್ನ ಮಡದಿಯನ್ನು ನಂದಿಸಿದರು. ಈ ವೇಳೆ ಗೋಡೌನ್‌ನಲ್ಲಿ 8 ಮಂದಿ ಇದ್ದರು. ಈ ವೇಳೆ ಮಂಜುನಾಥ್ ಮತ್ತು ಪರಮೇಶಪ್ಪ ಇಬ್ಬರು ಸೇರಿಕೊಂಡು ನನ್ನ ಮೇಲೆ ಹಲ್ಲೆ ಮಾಡಿ ಹಣ ಹಿಂದಿರುಗಿಸದಿದ್ದಲ್ಲಿ ರೇಣುಕಾಸ್ವಾಮಿ ರೀತಿ ಕೊಲೆ ಮಾಡುತ್ತೇವೆ ಎಂದು ಧಮಕಿ ಹಾಕಿದರು ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಬಲವಂತವಾಗಿ ಅಗ್ರಿಮೆಂಟ್‌ಗೆ ಸಹಿ
ನನ್ನ ಭಾವಮೈದುನ ಮನುಗೆ ಕರೆ ಮಾಡಿ ನಾಲ್ಕು ಚೆಕ್ ತರಿಸಿಕೊಳ್ಳುವಂತೆ ಒತ್ತಡ ಹಾಕಿದರು. ಇಲ್ಲವಾದರೆ ಕೊಲೆ ಮಾಡುವುದಾಗಿ ಬೆದರಿಸಿದರು. ಇದರಿಂದ ಭಯಗೊಂಡು ನನ್ನ ಭಾವಮೈದುನಾ ಮನುಗೆ ಕರೆ ಮಾಡಿ ನಾಲ್ಕು ಚೆಕ್ ತರಿಸಿಕೊಂಡೆ. ಬಳಿಕ ಮಂಜುನಾಥ್ ಮತ್ತು ಪರಮೇಶಪ್ಪ 44.60 ಲಕ್ಷ ರು.ಗೆ ಅಗ್ರಿಮೆಂಟ್ ಮಾಡಿಸಿ ಬಲವಂತವಾಗಿ ನನ್ನಿಂದ ಸಹಿ ಪಡೆದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ವಿಡಿಯೋ ಮಾಡಿಸಿಕೊಂಡರು
ಈ ಗೋಡೌನ್‌ನಲ್ಲಿ ನನ್ನಿಂದ ಬಲವಂತವಾಗಿ ಕೆಲವು ವಿಡಿಯೋ ಮಾಡಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುವುದಾಗಿ ಹೆದರಿಸಿದರು. ತಮಗೆ ಏನಾದರೂ ಆದರೆ ನಾನೇ ಕಾರಣ ಎಂದು ವಿಡಿಯೋ ಮಾಡಿಸಿಕೊಂಡರು. ಅಷ್ಟೇ ಅಲ್ಲದೆ, ನನ್ನ ಅಕೌಂಟ್‌ನಿಂದ 15 ಸಾವಿರ ರು. ವರ್ಗಾಯಿಸಿಕೊಂಡರು. ಜೀವ ಭಯದಿಂದ ಅವರು ಹೇಳಿದಂತೆ ಮಾಡಿದೆ. ಬಳಿಕ ನಾನು ಮತ್ತು ನನ್ನ ಭಾವಮೈದುನ ಕಾರಿನಲ್ಲಿ ಬೆಂಗಳೂರು ನಗರಕ್ಕೆ ವಾಪಾಸ್ ಆದೆವು. ನನಗೆ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿರುವ ಮಂಜುನಾಥ್ ಮತ್ತು ಪರಮೇಶಪ್ಪ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಬಾಗೇಗೌಡ ದೂರಿನಲ್ಲಿ ಮನವಿ ಮಾಡಿದ್ದಾರೆ.
;Resize=(690,390))
)
;Resize=(128,128))
;Resize=(128,128))
;Resize=(128,128))