ಸಾರಾಂಶ
ಕನ್ನಡಪ್ರಭ ವಾರ್ತೆ ತಿಪಟೂರು
ನಗರದ ಇಂದಿರಾನಗರದಲ್ಲಿ ವರಾಹ ಚಿಹ್ನೆ ಇದ್ದ ಕೇಸರಿ ಧ್ವಜ ಹಾರಿಸಿದ್ದಕ್ಕೆ ಪೊಲೀಸ್ ಇಲಾಖೆ ಐದು ಜನ ಯುವಕರ ಮೇಲೆ ಎಫ್‌ಐಆರ್ ಹಾಕಿದ್ದು ಈ ಸಂಬಂಧ ನಗರಸಭೆ ನೀಡಿರುವ ದೂರನ್ನು ವಾಪಸ್ ಪಡೆಯಬೇಕೆಂದು ಆಗ್ರಹಿಸಿ ನಗರಸಭೆ ಮುಂದೆ ಬಿಜೆಪಿ ವತಿಯಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು.ಈ ವೇಳೆ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಗಂಗರಾಜು ಮಾತನಾಡಿ ಇಂದಿರಾನಗರದ ಎಲ್ಲಮ್ಮದೇವಿ ದೇವಸ್ಥಾನದ ಪಕ್ಕ ಹಿಂದೂ ಧ್ವಜವನ್ನು ಹಾರಿಸಿದ್ದರಿಂದ ಐದು ಜನ ಹಿಂದೂ ಕಾರ್ಯಕರ್ತರನ್ನು ಪೊಲೀಸ್ ಠಾಣೆಯಲ್ಲಿ ಕೂರಿಸಿಕೊಂಡಿದ್ದಾರೆ. ಆದರೆ ಕಳೆದ ೭ ವರ್ಷಗಳ ಹಿಂದೆಯೇ ಅಲ್ಲಿ ಧ್ವಜ ಸ್ಥಂಭ ಸ್ಥಾಪಿಸಿ ಹಿಂದೂ ಸಂಕೇತವಾದ ಕೇಸರಿ ಧ್ವಜವನ್ನು ಹಾರಿಸಲಾಗುತ್ತಿದೆ. ಯಾವುದೇ ರೀತಿಯ ಕೋಮು ಗಲಭೆ ಇಲ್ಲದ್ದಿದ್ದರೂ ಕೇವಲ ಹಿಂದೂಗಳನ್ನು ಟಾರ್ಗೆಟ್ ಮಾಡಿ ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದಾರೆ. ಪೊಲೀಸರಿಗೆ ಬೇರೆ ಕೋಮಿನ ಧ್ವಜಗಳು ಕಾಣಿಸುವುದಿಲ್ಲವೇ. ಇದರ ಹಿಂದೆ ದೊಡ್ಡ ಪಿತೂರಿಯೇ ಇದ್ದು ಯಾರು ಧ್ವಜವನ್ನು ತೆಗೆದರೋ ಅವರೇ ಬಂದು ಧ್ವಜ ಹಾರಿಸಬೇಕು. ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವವರೆಗೂ ನಾವು ಹೋರಾಟ ನಿಲ್ಲಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಗರಸಭೆ ಮಾಜಿ ಅಧ್ಯಕ್ಷ ರಾಮಮೋಹನ್ ಮಾತನಾಡಿ, ಇಂದಿರಾನಗರದಲ್ಲಿ ಒಂದು ವಾರದ ಹಿಂದೆಯೇ ಕಾರ್ಯಕರ್ತರು ಧ್ವಜ ಹಾರಿಸಿದ್ದಾರೆ. ಪೊಲೀಸರು ಒಂದು ವಾರದ ನಂತರ ಏಕಾಏಕಿ ರಾತ್ರಿ ವೇಳೆ ಪೊಲೀಸರ ಜೀಪಿನಲ್ಲಿ ಅಲ್ಲಿಗೆ ಬಂದು ಧ್ವಜ ತೆಗೆಸಿದ್ದಾರೆ. ಧ್ವಜ ಹಾರಿಸಿದ್ದರಿಂದ ಯಾರಿಗೂ ಯಾವ ತೊಂದರೆಯೂ ಆಗಿರಲಿಲ್ಲ. ಯಾರಿಂದಲೂ ದೂರು ಕೂಡ ಬಂದಿರಲಿಲ್ಲ. ಆದರೂ ನಗರಸಭೆಯವರಿಗೆ ದೂರು ಕೊಡಲು ತಿಳಿಸಿ ಅವರಿಂದ ದೂರು ಪಡೆದುಕೊಂಡು ಅಮಾಯಕ ಹಿಂದೂ ಕಾರ್ಯಕರ್ತರ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. ಯಾರ ಚಿತಾವಣೆಯಿಂದ ಪೊಲೀಸರು ಈ ಕೆಲಸ ಮಾಡುತ್ತಿದ್ದಾರೆ ಎಂಬುದು ಬಹಿರಂಗಪಡಿಸಬೇಕು. ನಗರಸಭೆ ಪೌರಾಯುಕ್ತರು ದೂರು ಹಿಂಪಡೆದುಕೊಳ್ಳಬೇಕೆಂದು ಆಗ್ರಹಿಸಿದರು.ನಗರಸಭೆ ಆಯುಕ್ತ ವಿಶ್ವೇಶ್ವರ ಬದರಗಡೆ ಮಾತನಾಡಿ ಯಾವುದೇ ಕೋಮಿನ ಬಾವುಟ ಅಥವಾ ಬ್ಯಾನರ್‌ನ್ನು ನಗರಸಭೆಯ ಅನುಮತಿ ಪಡೆಯದೇ ಹಾರಿಸಬಾರದು ಎಂದು ನಗರಸಭೆಯಲ್ಲಿಯೇ ನಿರ್ಣಯ ಕೈಗೊಳ್ಳಲಾಗಿದೆ. ಕಳೆದ ವಾರ ಹಾರಿಸಿರುವ ಬಾವುಟ ಸೂಕ್ಷ್ಮ ಪ್ರದೇಶದಲ್ಲಿದ್ದು ಕೋಮು ಗಲಭೆಗೆ ಕಾರಣವಾಗಬಹುದು ಎಂಬ ಪೊಲೀಸ್ ವರದಿ ಆಧರಿಸಿ ನಾವು ಅದನ್ನು ತೆಗೆಸಲು ದೂರು ನೀಡಿದ್ದೇವೆ. ಅಧಿಕಾರಿಗಳೊಂದಿಗೆ ಮಾತನಾಡಿ ಮುಂದಿನ ಕ್ರಮದ ಬಗ್ಗೆ ನಿರ್ಧಾರ ಮಾಡುವುದಾಗಿ ತಿಳಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಾದ ಪ್ರಸನ್ನಕುಮಾರ್, ವಿಶ್ವದೀಪ್, ತರಕಾರಿ ಗಂಗಾಧರ್, ಮಾಜಿ ಪುರಸಭೆ ಅಧ್ಯಕ್ಷ ಟಿ.ಜಿ.ಲಿಂಗರಾಜು, ನಗರಸಭಾ ಸದಸ್ಯರು, ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು.