ಕನ್ನಡಪ್ರಭ ವಾರ್ತೆ ಬೆಂಗಳೂರು

ಸಾಲ ಕೊಡಿಸುವ ನೆಪದಲ್ಲಿ ನೂರಾರು ಉದ್ಯಮಿಗಳಿಗೆ ವಂಚನೆ ಪ್ರಕರಣ ಸಂಬಂಧ ಪ್ರಮುಖ ಆರೋಪಿ ಪೀಟರ್ ಕ್ಯಾಡಿ ಮನೆ ಹಾಗೂ ಕಚೇರಿ ಸೇರಿದಂತೆ 9 ಸ್ಥಳಗಳ ಮೇಲೆ ರಾಜ್ಯ ಅಪರಾಧ ತನಿಖಾ ಇಲಾಖೆಯ (ಸಿಐಡಿ) ಅಧಿಕಾರಿಗಳು ಮಂಗಳ‍ಾರ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ.

ಫುಲಿಕೇಶಿನಗರದ ಕೋಲ್ಸ್ ಪಾರ್ಕ್‌ನ ಹತ್ತಿರದಲ್ಲಿರುವ ಪೀಟರ್ ಕ್ಯಾಡಿ ಮನೆ, ಎಂ.ಜಿ.ರಸ್ತೆಯಲ್ಲಿರುವ ಕಚೇರಿ ಹಾಗೂ ನಗರದ ಇತೆರೆಡೆ ಆತನಿಗೆ ಸೇರಿದ ಸ್ಥಳಗಳಲ್ಲಿ ಬೆಳಗ್ಗೆಯಿಂದ ಸಂಜೆವರೆಗೆ ಸಿಐಡಿ ಅಧಿಕಾರಿಗಳು ಶೋಧಿಸಿದ್ದಾರೆ. ಈ ವೇಳೆ ಪೀಟರ್ ಮನೆ ಹಾಗೂ ಕಚೇರಿಯಲ್ಲಿ ವಂಚನೆಗೆ ಸಂಬಂಧಿಸಿದ ಟನ್‌ಗಟ್ಟಲೇ ದಾಖಲೆಗಳು ಸಿಕ್ಕಿವೆ ಎನ್ನಲಾಗಿದೆ.

ನೂರಾರು ಜನರಿಗೆ ಪಂಗನಾಮ:

ಕಡಿಮೆ ಬೆಲೆಗೆ ಸಾಲ ಕೊಡಿಸುವುದಾಗಿ ನಂಬಿಸಿ ಜನರಿಂದ ಶುಲ್ಕ ರೂಪದಲ್ಲಿ ಲಕ್ಷ ಲಕ್ಷ ಹಣ ವಸೂಲಿ ಮಾಡಿ ಪೀಟರ್ ಟೋಪಿ ಹಾಕುತ್ತಿದ್ದ. ತಾವು ಕೊಟ್ಟ ಹಣವನ್ನು ಮರಳಿಸುವಂತೆ ಸಂತ್ರಸ್ತರು ಕೇಳಿದರೆ ಅವರ ವಿರುದ್ಧ ಸುಳ್ಳು ಚೆಕ್ ಬೌನ್ಸ್‌ ಪ್ರಕರಣಗಳನ್ನು ದಾಖಲಿಸಿ ಆತ ಬೆದರಿಸುತ್ತಿದ್ದ ಎಂಬ ಆರೋಪಗಳು ಕೇಳಿ ಬಂದಿವೆ.


ಅಲ್ಲದೆ ಹಣ ಕಳೆದುಕೊಂಡವರು ಗಲಾಟೆ ಮಾಡಿದರೆ ತನ್ನ ಮ್ಯಾನೇಜರ್ ಮೂಲಕ ಲೈಂಗಿಕ ದೌರ್ಜನ್ಯ ಪ್ರಕರಣ ಸಹ ದಾಖಲಿಸುತ್ತಿದ್ದ. ಇದೇ ರೀತಿ ಸುಮಾರು 10ಕ್ಕೂ ಹೆಚ್ಚು ಲೈಂಗಿಕ ಕಿರುಕುಳ ಪ್ರಕರಣಗಳು ದಾಖಲಾಗಿದ್ದವು. ಆದರೆ ಕೊನೆಗೆ ತನಿಖೆ ನಡೆಸಿ ಆರೋಪಗಳಲ್ಲಿ ಸತ್ಯವಿಲ್ಲ ಎಂದು ನ್ಯಾಯಾಲಯಕ್ಕೆ ಪೊಲೀಸರು ಬಿ ರಿಪೋರ್ಟ್ ಸಲ್ಲಿಸಿದ್ದಾಗಿ ತಿಳಿದು ಬಂದಿದೆ.

ಏನಿದು ಪ್ರಕರಣ?:

ಸುಬ್ಬರಾವ್ ಎಂಬುವರಿಗೆ 300 ಕೋಟಿ ರು. ಅಧಿಕ ಮೊತ್ತಕ್ಕೆ ಜಮೀನು ಮಾರಾಟ ಮಾಡಿಸುವುದಾಗಿ ನಂಬಿಸಿ 96 ಲಕ್ಷ ರು. ಪಡೆದು ವಂಚಿಸಿದ್ದ ಆರೋಪದ ಮೇರೆಗೆ ಪೀಟರ್ ಕ್ಯಾಡಿ ಹಾಗೂ ಆತನ ಕುಟುಂಬದವರ ವಿರುದ್ಧ ಪುಲಿಕೇಶಿನಗರ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿತ್ತು.

ಬಹುಕೋಟಿ ವಂಚನೆ ಪ್ರಕರಣದ ಕುರಿತು ತನಿಖೆಗೆ ಸಿಐಡಿಗೆ ವಹಿಸಿ ರಾಜ್ಯ ಸರ್ಕಾರ ಆದೇಶಿಸಿತ್ತು. ಅಂತೆಯೇ ಪ್ರಕರಣದ ತನಿಖೆಗಿಳಿದಿರುವ ಪೊಲೀಸರು, ಪೀಟರ್ ಕ್ಯಾಡಿ ಹಾಗೂ ಆತನ ಸಹಚರರಿಗೆ ಬಿಸಿ ಮುಟ್ಟಿಸಿದ್ದಾರೆ. ಈ ತನಿಖೆಯ ಭಾಗವಾಗಿ ಪೀಟರ್ ಮನೆ ಹಾಗೂ ಕಚೇರಿಗಳ ಮೇಲೆ ಸಿಐಡಿ ದಾಳಿ ನಡೆಸಿದೆ ಎಂದು ಮೂಲಗಳು ಹೇಳಿವೆ.