ಕನ್ನಡ ಪ್ರಭ ವಾರ್ತೆ ಮಳವಳ್ಳಿ
ಪಟ್ಟಣದ ಪುರ ಹಾಗೂ ಗ್ರಾಮಾಂತರ ಪೊಲೀಸ್ ಠಾಣೆಯ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿರುವ ದೃಶ್ಯಾವಳಿಗಳ ಹಾರ್ಡ್‌ಡಿಸ್ಕ್‌ನ್ನು ಪರಿಶೀಲನೆಗೆ ಒಳಪಡಿಸಿ ಲಭ್ಯ ಮಾಹಿತಿಯನ್ನು ಮೇಲ್ಮನವಿದಾರರಿಗೆ ನೀಡುವಂತೆ ಕರ್ನಾಟಕ ಮಾಹಿತಿ ಆಯೋಗ ಆದೇಶಿಸಿದೆ.ಎಂ.ಆರ್.ನಾಗರಾಜು ಎಂಬುವರು ೨೦೨೨ರ ಆಗಸ್ಟ್‌ನಲ್ಲಿ ಡಿವೈಎಸ್ಪಿ ಅವರಿಗೆ ಅರ್ಜಿ ಸಲ್ಲಿಸಿ, ಪುರ ಹಾಗೂ ಗ್ರಾಮಾಂತರ ಪೊಲೀಸ್ ಠಾಣೆಯ ೧೦-೧೦-೨೦೨೧ ರಿಂದ ೩೧-೦೩-೨೦೨೨ರ ವರೆಗಿನ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿರುವ ದೃಶ್ಯಾವಳಿಗಳನ್ನು ನೀಡುವಂತೆ ಕೋರಿದ್ದರು. ಮಾಹಿತಿ ಹಕ್ಕು ಕಾಯ್ದೆ ೮(೧)(ಜೆ) ಪ್ರಕಾರ ನೀಡಲು ಸಾಧ್ಯವಿಲ್ಲ ಎಂದು ಅಂದಿನ ಡಿವೈಎಸ್ಪಿ ಆಗಿದ್ದ ನವೀನ್‌ಕುಮಾರ್, ಪುರ ಹಾಗೂ ಗ್ರಾಮಾಂತರ ಠಾಣೆಯ ಅಧಿಕಾರಿಗಳು ನಿರಾಕರಿಸಿದ್ದರು ಎನ್ನಲಾಗಿದೆ.
ಈ ಸಂಬಂಧ ಅರ್ಜಿದಾರ ಎಂ.ಆರ್.ನಾಗರಾಜು ಮೇಲ್ಮನವಿ ಸಲ್ಲಿಸಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಆಯೋಗದ ನಾಲ್ಕನೇ ಪೀಠದ ರಾಜ್ಯ ಮಾಹಿತಿ ಆಯುಕ್ತ ರುದ್ರಣ್ಣ ಹರ್ತಿಕೋಟೆ ಎರಡು ಪೊಲೀಸ್ ಠಾಣೆಯ ಸಿಸಿ ಕ್ಯಾಮೆರಾಗಳ ಹಾರ್ಡ್‌ಡಿಸ್ಕ್‌ನ್ನು ಎ-ಎಸ್‌ಎಲ್‌ಗೆ ಕಳುಹಿಸಿ ತನಿಖೆಗೆ ಒಳಪಡಿಸಿ ಅದರಲ್ಲಿರುವ ಲಭ್ಯ ದೃಶ್ಯಾವಳಿಯನ್ನು ಅರ್ಜಿದಾರರಿಗೆ ನೀಡಬೇಕು. ಕೇಳಿರುವ ದೃಶ್ಯಾವಳಿಗಳನ್ನು ಮಾತ್ರವೇ ನೀಡಬೇಕು. ಕ್ಯಾಮೆರಾದಲ್ಲಿ ದಾಖಲಾಗಿರುವ ಇತರೆ ಮಾಹಿತಿಯನ್ನು ನ್ಯಾಯಾಲಯಗಳ ಆದೇಶಗಳಂತೆ ಮುಸುಕು ಮಾಡಬೇಕು ಎಂದು ಸೂಚನೆ ನೀಡಿದ್ದಾರೆ.ಆಯೋಗದ ಇತಿಹಾಸದಲ್ಲಿಯೇ ಸಿಸಿ ಕ್ಯಾಮೆರಾಗಳನ್ನು ಎ-ಎಸ್‌ಎಲ್ ಪರಿಶೀಲನೆಗೆ ಒಳಪಡಿಸಿ ಅರ್ಜಿದಾರರಿಗೆ ಅದರಲ್ಲಿರುವ ದೃಶ್ಯಾವಳಿಗಳನ್ನು ಕೊಡಿಸಿರುವ ಅಪರೂಪದ ಪ್ರಕರಣ ಇದಾಗಿದೆ. ಪ್ರಕರಣದಲ್ಲಿ ನಿರ್ಲಕ್ಷ್ಯ ವಹಿಸಿದ ಸಾರ್ವಜನಿಕ ಮಾಹಿತಿ ಅಧಿಕಾರಿಯಾಗಿದ್ದ ಹಿರಿಯ ಪೊಲೀಸ್ ಅಧಿಕಾರಿ ವಿರುದ್ಧ ಶಿಸ್ತು ಕ್ರಮಕ್ಕೂ ಶಿಫಾರಸು ಮಾಡಿದೆ.
ಆಗಿನ ಡಿವೈಎಸ್ಪಿ ಹಾಗೂ ಈಗ ಬಳ್ಳಾರಿಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿರುವ ನವೀನ್‌ಕುಮಾರ್ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ಸೂಚನೆ ನೀಡಲಾಗಿತ್ತು. ನವೀನ್‌ಕುಮಾರ್ ಅವರು ತಾವು ನಿಯಮಬದ್ಧವಾಗಿಯೇ ಅರ್ಜಿ ವರ್ಗಾವಣೆ ಮಾಡಿರುವುದಾಗಿ ತಮ್ಮ ಸಮಜಾಯಿಷಿಯನ್ನು ಬಳ್ಳಾರಿ ಎಸ್ಪಿ ಹಾಗೂ ಮಾಹಿತಿ ಆಯೋಗಕ್ಕೆ ನೀಡಿದ್ದಾರೆ.
ಅರ್ಜಿ ನಿಯಮಬದ್ಧ ವರ್ಗಾವಣೆ ಮಾಡದೇ ಅಧಿಕಾರಿಗಳ ಮೌಖಿಕ ಸೂಚನೆಯ ಮೇರೆಗೆ ಹಿಂಬರಹ ನೀಡಿದ್ದ ಎರಡು ಠಾಣೆಗಳಲ್ಲಿ ಆಗ ಕರ್ತವ್ಯ ನಿರ್ವಹಿಸುತ್ತಿದ್ದ ಇಬ್ಬರೂ ಸಿಪಿಐಗಳಿಗೆ ಮಾಹಿತಿ ಹಕ್ಕು ಅರ್ಜಿಗಳನ್ನು ನಿರ್ಲಕ್ಷ್ಯ ಮಾಡದಂತೆ ಆಯೋಗ ಎಚ್ಚರಿಕೆ ನೀಡಲಾಗಿದೆ.