ಕನ್ನಡಪ್ರಭ ವಾರ್ತೆ ಮದ್ದೂರು

ಪತಿ-ಪತ್ನಿ ನಡುವಿನ ಜಗಳದ ಹಿನ್ನೆಲೆಯಲ್ಲಿ ಪತ್ನಿ ಮೇಲೆ ನೀಡಿದ್ದ ದೂರಿನ ವಿರುದ್ಧ ಪೊಲೀಸರು ಕ್ರಮ ಜರುಗಿಸದ ಕಾರಣ ಅಮಾನತ್ತುಗೊಂಡಿರುವ ಜೈಲರ್ ಬೇಸತ್ತು ಮದ್ದೂರು ಪೊಲೀಸ್‌ ಠಾಣೆ ಎದುರೇ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಭಾನುವಾರ ರಾತ್ರಿ ಜರುಗಿದೆ.

ಘಟನೆ ಕುರಿತಂತೆ ಪೊಲೀಸರು ಗೌಪ್ಯತೆ ಕಾಪಾಡಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ. ಶಿವಮೊಗ್ಗದ ಕಾರಾಗೃಹದಲ್ಲಿ ಕರ್ತವ್ಯ ಲೋಪದ ಮೇಲೆ ಈಚೆಗೆ ಅಮಾನತ್ತುಗೊಂಡಿರುವ ಜಯರಾಮ 52 ಠಾಣೆಯ ಸಿಬ್ಬಂದಿ ಎದುರೇ ಮೈ ಮೇಲೆ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಯತ್ನಿಸಿ ತೀವ್ರವಾಗಿ ಗಾಯಗೊಂಡಿದ್ದಾರೆ.

ಭಾನುವಾರ ರಾತ್ರಿ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ಬೆಂಕಿಯನ್ನು ನಂದಿಸಿ ಜಯರಾಮನನ್ನು ರಕ್ಷಣೆ ಮಾಡಿದ ನಂತರ ಮದ್ದೂರು ಮತ್ತು ಮಂಡ್ಯ ಜಿಲ್ಲಾಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ನೀಡಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಜೆಎಸ್ಎಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬೆಂಕಿಯಿಂದ ಈತನ ತಲೆಗೆ ತೀವ್ರ ಸುಟ್ಟಗಾಯವಾಗಿದೆ. ಪರಿಸ್ಥಿತಿ ಚಿಂತಾ ಜನಕವಾಗಿದೆ.

ಮೂಲತಃ ಮಂಡ್ಯದ ದ್ವಾರಕಾನಗರದ ನಿವಾಸಿ ಜಯರಾಮು ಮದ್ದೂರು ತಾಲೂಕು ರುದ್ರಾಕ್ಷಿಪುರ ಗ್ರಾಮದ ಪತ್ನಿ ಹಾಗೂ ಜಯರಾಮ್ ನಡುವೆ ಕಳೆದ ಎರಡು ದಿನಗಳ ಹಿಂದೆ ಗಲಾಟೆಯಾಗಿದೆ. ಈ ಬಗ್ಗೆ ಜಯರಾಮ ಮದ್ದೂರು ಠಾಣೆಗೆ ದೂರು ನೀಡಿದ್ದರೂ ಸಹ ಕರ್ತವ್ಯದಲ್ಲಿದ್ದ ಅಧಿಕಾರಿಗಳು ದೂರು ದಾಖಲು ಮಾಡಿಕೊಳ್ಳದೆ ನಿರ್ಲಕ್ಷ ಮಾಡಿದ್ದರು.


ಇದರಿಂದ ಬೇಸತ್ತು ಜಯರಾಮ ಭಾನುವಾರ ರಾತ್ರಿ ಠಾಣೆಗೆ ಹಾಜರಾಗಿ ಪತ್ನಿ ವಿರುದ್ಧ ದೂರು ದಾಖಲಿಸದ ಬಗ್ಗೆ ಪ್ರಶ್ನೆ ಮಾಡಿದ್ದಾನೆ. ಈ ವೇಳೆ ಜಯರಾಮ ಸರ್ಕಲ್ ಇನ್ಸ್ ಪೆಕ್ಟರ್ ನಡುವೆ ಮಾತಿನ ಚಕಮಕಿ ನಡೆದಿದೆ. ಇದರಿಂದ ನಾನು ನೀಡಿದ ದೂರಿನ ಬಗ್ಗೆ ಅಧಿಕಾರಿಗಳಿಂದ ಸೂಕ್ತ ಉತ್ತರ ಬಾರದ ಹಿನ್ನೆಲೆಯಲ್ಲಿ ಬೇಸತ್ತ ಜಯರಾಮ ಪಾನಮತ್ತನಾಗಿ ಠಾಣೆಗೆ ಬಂದು ಮಧ್ಯರಾತ್ರಿ ವೇಳೆಗೆ ಸಿಬ್ಬಂದಿ ಎದುರೇ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಹೇಳಲಾಗಿದೆ.

ಈ ಸಂಬಂಧ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ ಸೋಮವಾರ ಬೆಳಗ್ಗೆ ಮದ್ದೂರಿಗೆ ದಿಢೀರ್ ಭೇಟಿ ಘಟನೆ ಕುರಿತಂತೆ ಮಾಹಿತಿ ಪಡೆದುಕೊಂಡರು.