ಎರಡು ತೊಲ ಬಂಗಾರ ಕೊಡಲಿಲ್ಲ ಎಂಬ ಕಾರಣಕ್ಕೆ ಅತ್ತೆಯನ್ನು ಅಳಿಯನೇ ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಯಲಹಂಕ ನ್ಯೂಟೌನ್‌ದಲ್ಲಿ ನಡೆದಿದೆ. ಅತ್ತೆ ರೋಶನಬಿ (50) ಎಂಬುವರನ್ನು ಕೊಲೆ ಮಾಡಿದ ಆರೋಪದ ಮೇಲೆ ಯಾದಗಿರಿ ಮೂಲದ ಅಕ್ಬರ್ ಅಲಿ (35) ಎಂಬುವನನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು : ಎರಡು ತೊಲ ಬಂಗಾರ ಕೊಡಲಿಲ್ಲ ಎಂಬ ಕಾರಣಕ್ಕೆ ಅತ್ತೆಯನ್ನು ಅಳಿಯನೇ ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಯಲಹಂಕ ನ್ಯೂಟೌನ್‌ದಲ್ಲಿ ನಡೆದಿದೆ.
ಅತ್ತೆ ರೋಶನಬಿ (50) ಎಂಬುವರನ್ನು ಕೊಲೆ ಮಾಡಿದ ಆರೋಪದ ಮೇಲೆ ಯಾದಗಿರಿ ಮೂಲದ ಅಕ್ಬರ್ ಅಲಿ (35) ಎಂಬುವನನ್ನು ಪೊಲೀಸರು ಬಂಧಿಸಿದ್ದಾರೆ.
ಜೆ.ಕೆ ಬಸವನಗರದಲ್ಲಿ ಕುಟುಂಬದೊಂದಿಗೆ ವಾಸವಿದ್ದ
ಆರೋಪಿ ಅಕ್ಬರ್ ಅಲಿ ಮೇಡಿ ಅಗ್ರಹಾರ ಸಮೀಪದ ಜೆ.ಕೆ ಬಸವನಗರದಲ್ಲಿ ಕುಟುಂಬದೊಂದಿಗೆ ವಾಸವಿದ್ದ. ಮನೆ ಸಮೀಪವೇ ಅತ್ತೆಯ ಮನೆ ಇದೆ. ಅಕ್ಬರ್ ಅಲಿ 8 ವರ್ಷಗಳ ಹಿಂದೆ ರೋಶನಬಿ ಪುತ್ರಿಯನ್ನು ಪ್ರೀತಿಸಿ ಮದುವೆಯಾಗಿದ್ದ. ಈಗಾಗಲೇ ಒಂದು ಹೆಣ್ಣು ಮಗುವಿತ್ತು. ಕಳೆದ ತಿಂಗಳು ಗಂಡು ಮಗು ಜನನವಾಗಿತ್ತು.
ಎರಡು ತೊಲ ಬಂಗಾರ ಕೊಡಿ ಎಂದು ಅತ್ತೆಯ ಬಳಿ ಬೇಡಿಕೆ
ಗಂಡು ಮಗವಾಗಿರುವ ಹಿನ್ನೆಲೆಯಲ್ಲಿ ಎರಡು ತೊಲ ಬಂಗಾರ ಕೊಡಿ ಎಂದು ಅತ್ತೆಯ ಬಳಿ ಬೇಡಿಕೆ ಇಟ್ಟಿದ್ದ. ಆದರೆ ರೋಶನಬಿ ಎರಡು ತೊಲ ಬಂಗಾರಕ್ಕೆ ಅಂದಾಜು 3-4 ಲಕ್ಷ ಬೇಕಾಗುತ್ತದೆ. ಹೀಗಾಗಿ ಹಣ ಹೊಂದಿಸಿಕೊಂಡು ಬಂಗಾರ ಕೊಡಿಸುವುದಾಗಿ ಹೇಳಿದ್ದಾರೆ. ಆದರೆ ಆರೋಪಿ ಅಕ್ಬರ್ ಶುಕ್ರವಾರ ಮಧ್ಯಾಹ್ನ ಮದ್ಯದ ಅಮಲಿನಲ್ಲಿ ಅತ್ತೆಗೆ ಕರೆ ಮಾಡಿ ತನಗೆ ಬಂಗಾರ ಬೇಕೆ ಬೇಕು ಎಂದು ಪಟ್ಟು ಹಿಡಿದಿದ್ದಾನೆ.
ಈ ವೇಳೆ ವಾಗ್ವಾದವಾಗಿದ್ದು, ಇದರಿಂದ ಕೆರಳಿದ ಆರೋಪಿ ಕೊಡಲಿ ತೆಗೆದುಕೊಂಡು ಹೋಗಿ ಅತ್ತೆಯ ತಲೆಗೆ ಹಲ್ಲೆ ಮಾಡಿದ್ದ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಭಾನುವಾರ ಮೃತಪಟ್ಟಿದ್ದಾರೆ. ಈ ಸಂಬಂಧ ಕೊಲೆ ಪ್ರಕರಣ ದಾಖಲಿಸಿರುವ ಯಲಹಂಕ ನ್ಯೂಟೌನ್ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

