ಕನ್ನಡಪ್ರಭ ವಾರ್ತೆ ಬೆಂಗಳೂರು

ಮನೆಯಲ್ಲಿದ್ದ ತಾಯಿ ಸೇರಿದಂತೆ ಅಜ್ಜಿ ಹಾಗೂ ಸೋದರ ಮಾವನನ್ನು ಮಚ್ಚಿನಿಂದ ಕೊಚ್ಚಿ ಭೀಕರವಾಗಿ ಹತ್ಯೆಗೈದು ಮಗ ಆತ್ಮಹತ್ಯೆಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ರಾಜಧಾನಿಯಲ್ಲಿ ಶನಿವಾರ ನಡೆದಿದೆ.

ಕೊಟ್ಟಿಗೆಪಾಳ್ಯ ಸಮೀಪದ ನಿವಾಸಿಗಳಾದ ಮಂಗಳಮ್ಮ (55), ನಂಜಮ್ಮ (65), ಸತೀಶ್ (50) ಕೊಲೆಯಾದ ದುರ್ದೈವಿಗಳು. ಈ ಹತ್ಯೆ ಬಳಿಕ ಮನೆಯಲ್ಲಿ ನೇಣು ಬಿಗಿದುಕೊಂಡು ಮಂಗಳಮ್ಮ ಪುತ್ರ ಪ್ರಶಾಂತ್‌ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತರ ಮನೆಯಲ್ಲಿ ಬೆಳಗ್ಗೆ 7.30 ಗಂಟೆ ಸುಮಾರಿಗೆ ಚೀರಾಟ ಕೇಳಿ ಅವರ ನಿವಾಸಕ್ಕೆ ನೆರೆಮನೆಯವರು ಬಂದಾಗ ಈ ಭೀಕರ ಕೃತ್ಯ ಬೆಳಕಿಗೆ ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕೆಲಸಕ್ಕೆ ಹೋಗಿ ಬದುಕುಳಿದ ತಂದೆ

ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಹುಳಿಯೂರು ದುರ್ಗದ ಚಿಕ್ಕಣ್ಣ ಹಾಗೂ ಮಂಗಳಮ್ಮ ದಂಪತಿ ಹಲವು ವರ್ಷಗಳಿಂದ ನಗರಕ್ಕೆ ಕೆಲಸ ಅರಸಿ ಬಂದಿದ್ದರು. ಇವರಿಗೆ ಇಬ್ಬರು ಮಗಳು ಹಾಗೂ 1 ಗಂಡು ಮಗನಿದ್ದು, ಕೊಟ್ಟಿಗೆಪಾಳ್ಯದ ಅಂಜನೇಯಸ್ವಾಮಿ ದೇವಾಲಯ ಸಮೀಪ ಕುಟುಂಬದ ಜತೆ ನೆಲೆಸಿದ್ದರು. ಮಾಗಡಿ ರಸ್ತೆಯ ಬ್ಯಾಡರಹಳ್ಳಿ ಹತ್ತಿರದ ಭಾರತ್‌ ನಗರದಲ್ಲಿ ಅವರು ಲಾಂಡ್ರಿ ಅಂಗಡಿ ಇಟ್ಟಿದ್ದಾರೆ. ಗಾರ್ಮೆಂಟ್ಸ್‌ನಲ್ಲಿ ಪತ್ನಿ ಮಂಗಳ ದುಡಿಯುತ್ತಿದ್ದರು. ಇಬ್ಬರು ಹೆಣ್ಣು ಮಕ್ಕಳಾದ ಸೌಮ್ಯ ಹಾಗೂ ದಿವ್ಯಾ ಅವರಿಗೆ ಮದುವೆಯಾಗಿದೆ. ಮಗ ಪ್ರಶಾಂತ್ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಇತ್ತೀಚಿಗೆ ಆ ಕೆಲಸವು ಇಲ್ಲದೆ ಆತ ಅಲೆಯುತ್ತಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.


ತಮ್ಮ ಮಗಳ ಕುಟುಂಬದ ಜತೆ ಮಂಗಳಮ್ಮ ತಾಯಿ ನಂಜಮ್ಮ ಹಾಗೂ ಅವಿವಾಹಿತ ಸೋದರ ಸತೀಶ್ ವಾಸವಾಗಿದ್ದರು. ಈತ ಕೊಳಾಯಿ ರಿಪೇರಿ (ಪ್ಲಂಬರ್) ಕೆಲಸ ಮಾಡುತ್ತಿದ್ದನು. ಚಿಕ್ಕಣ್ಣ ಅವರ ಕುಟುಂಬದಲ್ಲಿ ಉತ್ತಮ ಬಾಂಧವ್ಯ ಹಾಗೂ ಮಮತೆ ಇತ್ತು. ಖುಷಿಯಿಂದ ಜೀವನ ಸಾಗಿಸುತ್ತಿದ್ದರು.

ಶನಿವಾರ ಬೆಳಗ್ಗೆಯೇ ತನ್ನ ಇಸ್ತ್ರಿ ಅಂಗಡಿ ತೆರೆಯಲು ಚಿಕ್ಕಣ್ಣ ಮನೆಯಿಂದ ಹೊರ ಹೋಗಿದ್ದರು. ಇತ್ತ ಕೋಣೆಯಲ್ಲಿ ಮಲಗಿದ್ದ ಸೋದರ ಮಾವನ ಮೇಲೆ ಎರಗಿದ ಪ್ರಶಾಂತ್, ಆತನನ್ನು ಮನಬಂದಂತೆ ಕೊಚ್ಚಿ ಕೊಂದಿದ್ದಾನೆ. ಈ ಚೀರಾಟ ಕೇಳಿ ನಿದ್ರೆಯಿಂದ ಎಚ್ಚರಗೊಂಡು ರೂಮ್‌ನಿಂದ ಹೊರ ಬಂದ ತಾಯಿ ಮಂಗಳಮ್ಮ ಹಾಗೂ ಅಜ್ಜಿ ನಂಜಮ್ಮ ಮೈಯಲ್ಲಿ ರಕ್ತಸಿಕ್ತವಾಗಿದ್ದ ಪ್ರಶಾಂತ್‌ನನ್ನು ಕಂಡು ಭೀತಿಗೊಂಡು ಮನೆಯಿಂದ ಪರಾರಿ ಆಗಲು ಯತ್ನಿಸಿದ್ದಾರೆ. ಆದರೆ ಇಬ್ಬರನ್ನು ಬಲವಾಗಿ ಹಿಡಿದು ಮುಂಬಾಗಿಲಿನಿಂದ ಒಳಗೆ ಎಳೆದು ಆತ, ಇಬ್ಬರ ಮೇಲೂ ಮಚ್ಚಿನಿಂದ ಹೊಡೆದಿದ್ದಾನೆ. ತಾಯಿ ಹಾಗೂ ಅಜ್ಜಿ ಮೇಲೆ ಆತ ಕ್ರೌರ್ಯ ಮೆರೆದಿದ್ದಾನೆ. ಆತನ ಭೀಭತ್ಸನ ಕೃತ್ಯಕ್ಕೆ ಮನೆಯಲ್ಲಿ ಚೆಲ್ಲಾಡಿದ್ದ ರಕ್ತ ಹಾಗೂ ತುಂಡು ತುಂಡಾಗಿದ್ದ ಮೃತದೇಹಗಳು ಸಾಕ್ಷಿಯಾಗಿದ್ದವು. ಈ ಕೂಗಾಟ ಕೇಳಿ ಅದೇ ಕಟ್ಟಡದ ಮೊದಲ ಮಹಡಿಯಲ್ಲಿ ನೆಲೆಸಿದ್ದವರು, ಕೆಳಗಿಳಿದು ಬಂದು ಮೃತ ಮಂಗಳಮ್ಮ ಮನೆಯೊಳಗೆ ಇಣುಕಿದಾಗ ಅಲ್ಲಿನ ರಕ್ತಪಿಪಾಸು ಭೀಕರ ದೃಶ್ಯ ಕಂಡು ಆಘಾತಗೊಂಡಿದ್ದಾರೆ.

ಸಂಬಂಧಿಕರ ಆಕ್ರಂದನ:ಚಿಕ್ಕಣ ಕುಟುಂಬದ ಹತ್ಯೆ ವಿಚಾರ ತಿಳಿದು ಮನೆ ಬಳಿ ಅವರ ಬಂಧುಗಳು ಹಾಗೂ ಸಂಬಂಧಿಕರು ನೆರೆದಿದ್ದರು. ಮೃತನ ನೆನೆದು ಬಂಧುಗಳ ಆಕ್ರಂದನ ಮುಗಿಲು ಮುಟ್ಟಿತು. ತನ್ನ ತಾಯಿ ಕಳೆದುಕೊಂಡ ಮೃತಳ ಹೆಣ್ಣು ಮಕ್ಕಳಾದ ದಿವ್ಯಾ ಹಾಗೂ ಸೌಮ್ಯ ಅವರ ಕಣ್ಣೀರಿನ ದೃಶ್ಯವು ಮನಕಲಕುವಂತೆ ಇತ್ತು. ಈ ಹತ್ಯೆಯಿಂದ ಚಿಕ್ಕಣ್ಣ ನೊಂದು ಮೌನವಾಗಿದ್ದರು.

ಹೊರಗಿನಿಂದ ಚಿಲಕ ಹಾಕಿದ ಸ್ಥಳೀಯರು

ತಕ್ಷಣವೇ ಆ ಮನೆಗೆ ಹೊರಗಿನಿಂದ ಚಿಲಕ ಹಾಕಿದ ನೆರೆಮನೆಯವರು, ಮನೆ ಮಾಲಿಕರಿಗೆ ವಿಷಯ ಮುಟ್ಟಿಸಿದ್ದಾರೆ. ಆಗ ಇಸ್ತ್ರಿ ಅಂಗಡಿಯಲ್ಲಿದ್ದ ಚಿಕ್ಕಣ್ಣ ಅವರಿಗೆ ಕರೆ ಮಾಡಿ ಕೂಡಲೇ ಬರುವಂತೆ ಮಾಲೀಕರು ತಿಳಿಸಿದ್ದಾರೆ. ಅಷ್ಟರಲ್ಲಿ ಪೊಲೀಸ್ ನಿಯಂತ್ರಣ ಕೊಠಡಿಗೆ (ನಮ್ಮ-112) ಕರೆ ಮಾಡಿ ಸಾರ್ವಜನಿಕರು ವಿಷಯ ಮುಟ್ಟಿಸಿದ್ದಾರೆ. ಕೆಲವೇ ಕ್ಷಣಗಳಲ್ಲಿ ಘಟನಾ ಸ್ಥಳಕ್ಕೆ ಪೊಲೀಸರು ಧಾವಿಸಿದ್ದಾರೆ. ಆದರೆ ಬಾಗಿಲು ತೆರೆದು ಮನೆಯೊಳಗೆ ಹೋದಾಗ ತ್ರಿವಳಿ ಹತ್ಯೆ ಬಳಿಕ ತಾನು ನೇಣು ಬಿಗಿದುಕೊಂಡು ಪ್ರಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ. ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಲೆಗಾರ ಮಾನಸಿಕ ರೋಗಿ-ಪೊಲೀಸರು

ತನ್ನ ತಾಯಿ ಹಾಗೂ ಕುಟುಂಬ ಸದಸ್ಯರನ್ನು ನಿರ್ದಯವಾಗಿ ಹತ್ಯೆಗೈದು ಆತ್ಮಹತ್ಯೆ ಮಾಡಿಕೊಂಡ ಪ್ರಶಾಂತ್‌ ಮಾನಸಿಕ ಕಾಯಿಲೆಯಿಂದ ಬಳುತ್ತಿದ್ದ ಎಂಬ ಸಂಗತಿ ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ. ಈ ಹತ್ಯೆಗೆ ನಿಖರ ಕಾರಣ ಗೊತ್ತಾಗಿಲ್ಲ. ಆದರೆ ಮಾನಸಿಕ ಕಾಯಿಲೆ ಪ್ರಶಾಂತ್‌ಗೆ ಇತ್ತು. ಹಲವು ದಿನಗಳಿಂದ ಆತ ಚಿಕಿತ್ಸೆ ಪಡೆಯುತ್ತಿದ್ದ. ಆತನದಲ್ಲಿ ಅಸಹಜ ವರ್ತನೆ ಕಂಡು ಬರುತ್ತಿದ್ದವು. ಇದ್ದಕ್ಕಿದ್ದಂತೆ ಪ್ರಶಾಂತ್ ಕೋಪಗೊಂಡು ಗಲಾಟೆ ಮಾಡುತ್ತಿದ್ದ. ಅಂತೆಯೇ ಕಾರಣವಿಲ್ಲದೆ ಶನಿವಾರ ಬೆಳಗ್ಗೆ ಸಹ ದಿಢೀರನೇ ಆತ ಸಿಟ್ಟಿಗೆದ್ದು ಈ ಕೃತ್ಯ ಎಸಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ನಾನು ಬೆಳಗ್ಗೆ ಅಂಗಡಿಗೆ ಹೋದ ಕಾರಣ ನನ್ನ ಪ್ರಾಣ ಉಳಿಯಿತು. ಮನೆಯಲ್ಲಿದ್ದರೆ ನನ್ನನ್ನು ಮಗ ಕೊಲ್ಲುತ್ತಿದ್ದ. ತಾಯಿ ಅಂದರೆ ಮಗನಿಗೆ ಪ್ರಾಣ. ಆದರೆ ಏಕೆ ಹೀಗೆ ಮಾಡಿದ್ದನೋ ಗೊತ್ತಿಲ್ಲ.

-ಚಿಕ್ಕಣ್ಣ ಮೃತನ ತಂದೆ

ಹಲವು ವರ್ಷಗಳಿಂದ ಚಿಕ್ಕಣ್ಣ ಕುಟುಂಬದ ಪರಿಚಯವಿದೆ. ಪ್ರಶಾಂತ್ ಒಳ್ಳೆಯ ಸ್ವಭಾವನ ಹುಡುಗ. ಯಾರ ತಂಟೆ ತಕರಾರು ಹೋಗದವನು. ಈತ ಈ ರೀತಿಯ ಕೃತ್ಯ ಎಸಗಿದ್ದಾನೆ ಅಂದರೇ ನಂಬಲು ಸಾಧ್ಯವಾಗುತ್ತಿಲ್ಲ.

-ಸ್ಥಳೀಯ ಕಿರಾಣಿ ಅಂಗಡಿ ಮಾಲಿಕ

ಕಳೆದ ವಾರ ತಂಗಿ ದಿವ್ಯ ಮನೆಯಲ್ಲಿ ಕಾರ್ಯಕ್ರಮವಿತ್ತು. ಆಗ ತಾಯಿ-ಅಜ್ಜಿಯನ್ನು ಕರೆದು ಆತನೇ ಫೋಟೋ ತೆಗೆಸಿದ. ಎಲ್ಲರೊಂದಿಗೂ ಆತ್ಮೀಯವಾಗಿಯೇ ನಡೆದುಕೊಳ್ಳುತ್ತಿದ್ದ. ಈ ಘಟನೆ ಆಘಾತ ತಂದಿದೆ.

-ಮೃತ ಸಂಬಂಧಿ