ಕನ್ನಡಪ್ರಭ ವಾರ್ತೆ ಬೆಂಗಳೂರುಕೆ.ಆರ್.ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ತ್ರಿವಳಿ ಕೊಲೆ ಪ್ರಕರಣದ ಆರೋಪಿಗಳು ಮೃತದೇಹಗಳನ್ನು ತುಂಡು ತುಂಡಾಗಿ ಕತ್ತರಿಸಿ ಸಾಗಿಸಲೆಂದೇ ದೊಡ್ಡ ಬೀನ್ ಬ್ಯಾಗ್ ಖರೀದಿಸಿದ್ದರು ಎಂಬುದು ತನಿಖೆಯ ವೇಳೆ ಪತ್ತೆಯಾಗಿದೆ.
ತಂದೆ, ತಾಯಿ ಮತ್ತು ತಂಗಿಯನ್ನೇ ಭೀಕರವಾಗಿ ಹತ್ಯೆ ಮಾಡಿದ್ದ ಪ್ರಕರಣದ ಸಂಬಂಧ ಪುತ್ರಿ ಶ್ವೇತಾ ಮತ್ತು ಈಕೆಯ ಪ್ರಿಯಕರ ಕೆನತ್‌ನನ್ನು ಇತ್ತೀಚೆಗೆ ಕೆ.ಆರ್.ಪುರ ಠಾಣೆ ಪೊಲೀಸರು ಬಂಧಿಸಿದ್ದರು. ಆರೋಪಿಗಳನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಆರೋಪಿಗಳು ವಿಚಾರಣೆಯ ವೇಳೆ ಮೃತದೇಹಗಳನ್ನು ತುಂಡು ತುಂಡಾಗಿ ಕತ್ತರಿಸಿ ಬೀನ್ ಬ್ಯಾಗ್‌ನಲ್ಲಿ ಸಾಗಿಸಲು ಸಂಚು ರೂಪಿಸಿದ್ದರು. ಇದಕ್ಕಾಗಿ ಬೀನ್ ಬ್ಯಾಗ್ ಅನ್ನು ಖರೀದಿ ಮಾಡಿದ್ದರು ಎಂಬುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ.ಟ್ರಾಲಿ ಕೂಡ ಖರೀದಿಸಿದ್ದ ಹಂತಕರು:
ಹಂತಕರು ಬೀನ್‌ಬ್ಯಾಗ್ ಜತೆಗೆ ಟ್ರಾಲಿ ಕೂಡಾ ಖರೀದಿಸಿದ್ದರು. ಮೃತದೇಹಗಳನ್ನು ಬೀನ್‌ಬ್ಯಾಗ್‌ನಲ್ಲಿ ತುಂಬಿ ಅದನ್ನು ಟ್ರ್ಯಾಲಿಯ ಮೂಲಕ ಸಾಗಿಸಲು ಸಜ್ಜಾಗಿದ್ದರು. ಅಲ್ಲದೇ ಮೃತದೇಹಗಳನ್ನ ಸುಡಲು ತಯಾರಿ ನಡೆಸಿದ್ದರು. ಮೃತದೇಹಗಳನ್ನು ಸುಡಲೆಂದೇ ಕಟ್ಟಿಗೆಯನ್ನು ಖರೀದಿಸಿ ಫ್ಲ್ಯಾಟ್‌ನಲ್ಲಿ ಇಟ್ಟಿದ್ದರು. ಇನ್ನು ಮನೆಯಿಂದ ಹೊಗೆ ಆಚೆ ಹೋಗುವಂತೆ ಮಾಡಲು ಎಕ್ಸಾಸ್ಟ್ ಫ್ಯಾನ್‌ಗಳನ್ನು ಖರೀದಿ ಮಾಡಿದ್ದರು. ಆದರೆ ಶ್ವೇತಾ ತಂದೆ ಸೋಮಸುಂದರ್ ಆಚೆ ಓಡಿಬಂದಿದ್ದಕ್ಕೆ ಇವರ ಎಲ್ಲಾ ಪ್ಲಾನ್ ತಲೆಕೆಳಕ್ಕಾಗಿದೆ ಎಂದು ತಿಳಿದು ಬಂದಿದೆ. ಈ ಎಲ್ಲಾ ವಿಚಾರವನ್ನು ಆರೋಪಿಗಳು ಪೊಲೀಸರ ವಿಚಾರಣೆಯ ವೇಳೆ ಬಾಯ್ಬಿಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.