ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರ ಹೊರವಲಯದ ಖಾಸಗಿ ವಸತಿ ಶಾಲೆಯಲ್ಲಿ 6ನೇ ತರಗತಿ ವಿದ್ಯಾರ್ಥಿಯೊಬ್ಬ ಬುಧವಾರ ಶಂಕಾಸ್ಪದವಾಗಿ ಸಾವನ್ನಪ್ಪಿದ್ದು, ಘಟನೆಯಿಂದ ರೊಚ್ಚಿಗೆದ್ದು ಶಿಕ್ಷಕರೊಬ್ಬರ ಮೇಲೆ ಹಲ್ಲೆ ನಡೆಸಿ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಾಗಲೂರು ಸಮೀಪದ ಖಾಸಗಿ ವಸತಿ ಶಾಲೆಯ ವಿದ್ಯಾರ್ಥಿ ಗುರುಕಿರಣ್‌ (12) ಮೃತದುರ್ದೈವಿ. ವಿದ್ಯಾರ್ಥಿ ಸಾವಿಗೆ ಕಾರಣರಾಗಿದ್ದಾರೆ ಎಂದು ಆರೋಪಿಸಿ ದೈಹಿಕ ಶಿಕ್ಷಣ ಶಿಕ್ಷಕ ನಾರಾಯಣ್ ಮೇಲೆ ಪೋಷಕರು ಹಾಗೂ ಸಾರ್ವಜನಿಕರು ಹಲ್ಲೆ ನಡೆಸಿದ್ದಾರೆ. ಈ ಘಟನೆಯಿಂದ ಕೆಲ ಹೊತ್ತು ಶಾಲಾ ಆವರಣವು ಉದ್ವಿಗ್ನಗೊಂಡು ಬಳಿಕ ಪೊಲೀಸರು ಹರಸಾಹಸ ಪಟ್ಟು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.

ಏನಿದು ಘಟನೆ?

ಕಾಡರಾಯಪ್ಪನಹಳ್ಳಿಯ ಸ್ಟ್ರಲ್ಲಿಂಗ್‌ ಆಂಗ್ಲ ವಸತಿ ಶಾಲೆಯಲ್ಲಿ 6ನೇ ತರಗತಿಯಲ್ಲಿ ಸುಬೇದಾರ್‌ ಪಾಳ್ಯದ ರಾಘವೇಂದ್ರ ದಂಪತಿ ಪುತ್ರ ಗುರುಕಿರಣ್‌ ವ್ಯಾಸಂಗ ಮಾಡುತ್ತಿದ್ದ. ಎಂದಿನಂತೆ ಬುಧವಾರ ಬೆಳಗ್ಗೆ ಜಾಕಿಂಗ್ ಮಾಡುವಾಗ ದಿಢೀರನೇ ಅಸ್ವಸ್ಥಗೊಂಡು ಆತ ಕುಸಿದು ಬಿದ್ದಿದ್ದಾನೆ. ತಕ್ಷಣವೇ ಶಾಲೆ ಸಮೀಪದ ಖಾಸಗಿ ಆಸ್ಪತ್ರೆಗೆ ವಿದ್ಯಾರ್ಥಿಯನ್ನು ಶಾಲಾ ಸಿಬ್ಬಂದಿ ಕರೆದೊಯ್ದು ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ಆತ ಕೊನೆಯುಸಿರೆಳೆದಿದ್ದಾನೆ ಎಂದು ತಿಳಿದು ಬಂದಿದೆ.


ಪೋಷಕರ ಆಕ್ರೋಶ

ವಿದ್ಯಾರ್ಥಿ ಸಾವಿನ ಸುದ್ದಿ ತಿಳಿಯುತ್ತಲೇ ಆತಂಕದಿಂದ ಶಾಲಾ ಆವರಣದಲ್ಲಿ ಪೋಷಕರು ಜಮಾಯಿಸಿದ್ದಾರೆ. ಆಗ ತಮ್ಮ ಮಗನ ಸಾವಿಗೆ ದೈಹಿಕ ಶಿಕ್ಷಣ ಶಿಕ್ಷಕ ನಾರಾಯಣ ಕಾರಣವಾಗಿದ್ದಾರೆ ಎಂದು ಆರೋಪಿಸಿದ ಮೃತನ ಕುಟುಂಬದವರು, ಆ ವೇಳೆ ಶಾಲಾ ಆವರಣದಲ್ಲಿ ಕಾಣಿಸಿಕೊಂಡ ಆ ಶಿಕ್ಷಕನ್ನು ಹಿಡಿದು ಮನಬಂದಂತೆ ಥಳಿಸಿದ್ದಾರೆ. ಅಲ್ಲದೆ ಈ ಘಟನೆಗೆ ಶಾಲಾ ಆಡಳಿತ ಮಂಡಳಿ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಮೃತನ ಕುಟುಂಬದವರು ಆಗ್ರಹಿಸಿ ಪ್ರತಿಭಟನೆಗಿಳಿದರು. ಈ ಹೋರಾಟಕ್ಕೆ ಇತರೆ ವಿದ್ಯಾರ್ಥಿಗಳ ಪೋಷಕರು ಕೂಡ ಸಾಥ್ ಕೊಟ್ಟಿದ್ದರಿಂದ ಪರಿಸ್ಥಿತಿ ಮತ್ತಷ್ಟು ಪ್ರಕ್ಷುಬ್ಧವಾಯಿತು.

ಲಘು ಲಾಠಿ ಪ್ರಹಾರ:

ಈ ಪ್ರತಿಭಟನೆ ಮಾಹಿತಿ ಪಡೆದು ತಕ್ಷಣವೇ ಘಟನಾ ಸ್ಥಳಕ್ಕೆ ಬಾಗಲೂರು ಪೊಲೀಸರು ದೌಡಾಯಿಸಿದ್ದಾರೆ. ಆದರೆ ವಿದ್ಯಾರ್ಥಿಗಳ ಪೋಷಕರ ಪ್ರತಿಭಟನೆಯನ್ನು ಸ್ಥಳೀಯ ಪೊಲೀಸರು ನಿಯಂತ್ರಿಸಲು ಸಾಧ್ಯವಾಗಿಲ್ಲ. ಕೂಡಲೇ ಹಿರಿಯ ಅಧಿಕಾರಿಗಳಿಗೆ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ತರುವಾಯ ಕೆಲ ಕ್ಷಣಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ ಆವರಣದಲ್ಲಿ ಪೊಲೀಸರು ಜಮಾಯಿಸಿದರು. ಆದರೆ ಆಕ್ರೋಶಗೊಂಡಿದ್ದ ಪೋಷಕರು, ಶಾಲಾ ಆಡಳಿತ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಒಳ ನುಗ್ಗಲು ಯತ್ನಿಸಿದರು. ಶಿಕ್ಷಕರ ವಿರುದ್ಧ ಧಿಕ್ಕಾರ ಕೂಗುತ್ತ ಶಾಲಾ ಆವರಣದಲ್ಲಿ ಕೈಗೆ ಸಿಕ್ಕಿದ್ದನ್ನು ಪುಡಿಗಟ್ಟಿ ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಪರಿಸ್ಥಿತಿ ಕೈಮೀರುತ್ತಿರುವುದನ್ನು ಅರಿತ ಅಧಿಕಾರಿಗಳು, ವಿಧಿ ಇಲ್ಲದೆ ಲಘು ಲಾಠಿ ಪ್ರಹಾರ ನಡೆಸಿ ನೆರೆದ ಉದ್ರಿಕ್ತ ಜನರನ್ನು ಚುದುರಿಸಿ ಶಾಲಾ ಆವರಣವನ್ನು ಶಾಂತಗೊಳಿಸಿದ್ದಾರೆ. ಈ ಸಂಬಂಧ ಬಾಗಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಡ್‌ನಿಂದ ಮಗನ ಮೇಲೆ ಹಲ್ಲೆ

ನಮಗೆ ಬೆಳಗ್ಗೆ 6.45ಕ್ಕೆ ಶಾಲಾ ಸಿಬ್ಬಂದಿ ಕರೆ ಮಾಡಿ ನಮ್ಮ ಮಗ ಕುಸಿದು ಬಿದ್ದಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದರು. ಕೂಡಲೇ ನಾವು ಆಸ್ಪತ್ರೆಗೆ ಬರುವ ವೇಳೆಗೆ ಆತ ಮೃತಪಟ್ಟಿ. ನಮ್ಮ ಮಗನಿಗೆ ಶಿಕ್ಷಕರು ಹಿಂಸೆ ಕೊಟ್ಟಿದ್ದಾರೆ ಎಂದು ಮೃತ ವಿದ್ಯಾರ್ಥಿ ತಂದೆ ರಾಘವೇಂದ್ರ ಆರೋಪಿಸಿದ್ದಾರೆ. ಮಗನ ಸಾವಿನ ಬಗ್ಗೆ ಆತನ ಸಹಪಾಠಿಗಳನ್ನು ಕೇಳಿದಾಗ ಘೋರ ಹಲ್ಲೆ ಸಂಗತಿ ಗೊತ್ತಾಯಿತು. ನಮ್ಮ ಮಗನನ್ನು ಶೌಚಾಲಯದಲ್ಲಿ ಕೂಡಿ ಹಾಕಿ ದೈಹಿಕ ಶಿಕ್ಷಕ ನಾರಾಯಣ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿದ್ದಾನೆ. ನಂತರ ಮೈದಾನವನ್ನು 2 ಸುತ್ತು ಹಾಕುವಂತೆ ಮಗನಿಗೆ ಸೂಚಿಸಿದ್ದರು. ಮೈದಾನದಲ್ಲಿ ಸುತ್ತು ಹಾಕುವಾಗ ಗುರುಕಿರಣ್ ಕುಸಿದುಬಿದ್ದಿದ್ದ ಮೃತಪಟ್ಟಿದ್ದಾನೆ. ಸಾವಿಗೆ ದೈಹಿಕ ಶಿಕ್ಷಕನ ಹಲ್ಲೆ ಕಾರಣರಾಗಿದ್ದಾರೆ ಎಂದು ಕಿಡಿಕಾರಿದರು.

ಹೃದಯಾಘಾತದಿಂದ ಸಾವು?

ಮೃತ ಗುರುಕಿರಣ್ ಸಾವಿಗೆ ಸ್ಪಷ್ಟ ಕಾರಣ ಗೊತ್ತಾಗಿಲ್ಲ. ಪ್ರಾಥಮಿಕ ಮಾಹಿತಿ ಪ್ರಕಾರ ಆತ ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಆದರೆ ಮರಣೋತ್ತರ ವರದಿ ಬಳಿಕವೇ ಸಾವಿಗೆ ಸ್ಪಷ್ಟ ಕಾರಣ ತಿಳಿಯಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕೊಲೆ ಪ್ರಕರಣ ದಾಖಲು:

ಮೃತ ವಿದ್ಯಾರ್ಥಿ ಪೋಷಕರ ದೂರು ಆಧರಿಸಿ ಬಾಗಲೂರು ಠಾಣೆಯಲ್ಲಿ ಕೊಲೆ ಆರೋಪದಡಿ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಲಾಗುತ್ತದೆ. ಆರೋಪಿತ ಶಿಕ್ಷಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದ್ದು, ಶಾಲೆಯ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಗುರುಕಿರಣ್ ಸಾವಿಗೂ ಹಲ್ಲೆ ನಡೆದಿರುವ ಬಗ್ಗೆ ವಿದ್ಯಾರ್ಥಿಗಳು ಗೊಂದಲಕಾರಿ ಹೇಳಿಕೆ ಕೊಡುತ್ತಿದ್ದಾರೆ. ಒಮ್ಮೆ ಎರಡು ದಿನಗಳ ಹಿಂದೆ ಹಲ್ಲೆ ನಡೆದಿತು ಅಂದರೆ ಮತ್ತೊಂದು ಬಾರಿ ಬೆಳಗ್ಗೆ ಹಲ್ಲೆ ನಡೆದಿತ್ತು ಎನ್ನುತ್ತಾರೆ. ಹೀಗಾಗಿ ಮತ್ತೆ ವಿಚಾರಣೆ ನಡೆಸಿ ಹೇಳಿಕೆ ಪಡೆಯಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೇಸರಿಗೆ ರಜೆ ಮುಗಿಸಿ ತಿಂಗಳ ಹಿಂದಷ್ಟೇ ವಸತಿಗೆ ಶಾಲೆಗೆ ಮಗನನ್ನು ಕಳುಹಿಸಿದ್ದೇವು. ನಮಗೆ ಸೋಮವಾರ ರಾತ್ರಿ ಕರೆ ಮಾಡಿ ಹೊಸ ಸಮವಸ್ತ್ರ ಹಾಗೂ ಶೂ ಕೊಡಿಸುವಂತೆ ತಿಳಿಸಿದ್ದ. ಮಗನಿಗೆ ಈ ಹಿಂದೆ ಯಾವುದೇ ಹೃದಯ ಸಂಬಂಧಿ ಕಾಯಿಲೆ ಇರಲಿಲ್ಲ. ಮಗನದ್ದು ಹೃದಯಾಘಾತದ ಸಾವಲ್ಲ.

-ಯಶಶ್ವಿನಿ, ಮೃತ ವಿದ್ಯಾರ್ಥಿ ತಾಯಿ

ಸಣ್ಣಪುಟ್ಟ ಕಾರಣಗಳಿಗೆ ನಮಗೆ ಶಿಕ್ಷಕರು-ಸಿಬ್ಬಂದಿ ಹಿಂಸೆ ಕೊಡುತ್ತಾರೆ. ಅದರಲ್ಲೂ ದೈಹಿಕ ಶಿಕ್ಷಣ ಶಿಕ್ಷಕ ಹೊಡೆದು ಕಿರುಕುಳ ಕೊಡುತ್ತಾರೆ. ನಾವು ಯಾರ ಬಳಿಯೂ ಹೇಳುವಂತಿಲ್ಲ

-ಮೃತನ ಸಹಪಾಠಿಗಳು