ಕೌಟುಂಬಿಕ ಕಲಹ ಹಿನ್ನಲೆಯಲ್ಲಿ ನವವಿವಾಹಿತೆಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಕೌಟುಂಬಿಕ ಕಲಹ ಹಿನ್ನಲೆಯಲ್ಲಿ ನವವಿವಾಹಿತೆಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸುಂಕದಕಟ್ಟೆ ಸಮೀಪದ ನಿವಾಸಿ ಶ್ವೇತಾ (23) ಮೃತ ದುರ್ದೈವಿ. ಈ ಘಟನೆ ಸಂಬಂಧ ಮೃತಳ ಪತಿ ಮೂರ್ತಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಕೌಟುಂಬಿಕ ವಿಚಾರವಾಗಿ ಭಾನುವಾರ ದಂಪತಿ ಮಧ್ಯೆ ಉಂಟಾದ ಜಗಳವು ದುರಂತ ಅಂತ್ಯ ಕಂಡಿದೆ. ಮನೆಯಲ್ಲಿ ಪತಿ ಇಲ್ಲದ ವೇಳೆ ನೇಣು ಬಿಗಿದುಕೊಂಡು ಶ್ವೇತಾ ಆತ್ಮಹತ್ಯೆಗೆ ಶರಣಾಗಿದ್ದು, ಕೆಲ ಹೊತ್ತಿನ ಬಳಿಕ ಆಕೆಯ ಪತಿ ಮರಳಿದಾಗ ಘಟನೆ ಬೆಳಕಿಗೆ ಬಂದಿದೆ.ರೈಲು ಪಯಣದಲ್ಲಿ ಪ್ರೀತಿ
4 ತಿಂಗಳ ಹಿಂದೆ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಹುಲಿತಿಮ್ಮಪುರ ಗ್ರಾಮದ ಶ್ವೇತಾ ಹಾಗೂ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಮೂರ್ತಿ ಪ್ರೇಮ ವಿವಾಹವಾಗಿದ್ದರು. ವರ್ಷದ ಹಿಂದೆ ಚಿಕ್ಕಮಗಳೂರಿಗೆ ಹೋಗಿ ಬರುವಾಗ ರೈಲಿನಲ್ಲಿ ಮೂರ್ತಿಗೆ ಶ್ವೇತಾ ಪರಿಚಯವಾಗಿ ಬಳಿಕ ಪ್ರೇಮವಾಗಿತ್ತು. ಕಾಮಾಕ್ಷಿಪಾಳ್ಯ ಸಮೀಪ ಖಾಸಗಿ ಶಾಲೆಯಲ್ಲಿ ಆಕೆ ಶಿಕ್ಷಕಿಯಾಗಿದ್ದರೆ, ಖಾಸಗಿ ವಿಮಾ ಕಂಪನಿಯಲ್ಲಿ ಮೂರ್ತಿ ನೌಕರಿಯಲ್ಲಿದ್ದಾರೆ ಎಂದು ತಿಳಿದು ಬಂದಿದೆ.ಮದುವೆ ಬಳಿಕ ಸುಂದಕಟ್ಟೆ ಬಳಿ ದಂಪತಿ ನೆಲೆಸಿದ್ದರು. ಇತ್ತೀಚಿಗೆ ಕೌಟುಂಬಿಕ ವಿಷಯವಾಗಿ ಇಬ್ಬರ ಮಧ್ಯೆ ಮನಸ್ತಾಪವಾಯಿತು. ತನ್ನ ಬಾಲ್ಯದಲ್ಲೇ ತಂದೆ-ತಾಯಿ ಕಳೆದುಕೊಂಡಿದ್ದ ಮೂರ್ತಿಯನ್ನು ಸಾಕಿ ಸಲುಹಿದ್ದು ಮಲ ಸೋದರಿ ನರಸಮ್ಮ. ರಾಜಗೋಪಾಲನಗರದಲ್ಲಿ ಆತನ ಸೋದರಿ ಕುಟುಂಬ ನೆಲೆಸಿದೆ. ಆದರೆ ತನ್ನ ಸೋದರಿ ಜತೆ ಸಂಬಂಧ ಕಡಿದುಕೊಳ್ಳುವಂತೆ ಪತಿಗೆ ಶ್ವೇತಾ ಒತ್ತಾಯಿಸುತ್ತಿದ್ದಳು. ಇದಕ್ಕೆ ಮೂರ್ತಿಯಿಂದ ಕಡು ವಿರೋಧವಿತ್ತು. ಇದೇ ವಿಚಾರವಾಗಿ ಮನೆಯಲ್ಲಿ ಪದೇ ಪದೇ ಜಗಳವಾಗಿತ್ತು. ಅಂತೆಯೇ ಭಾನುವಾರ ಸೋದರಿಗೆ ಕರೆ ಮಾಡಿ ಮೂರ್ತಿ ಮಾತನಾಡುತ್ತಿದ್ದುದನ್ನು ಗಮನಿಸಿದ ಶ್ವೇತಾ ಕೆಂಡವಾಗಿದ್ದಾಳೆ. ಆಗ ಜಗಳವಾಗಿ ಕೊನೆಗೆ ತನ್ನ ರೂಮಿಗೆ ತೆರಳಿ ನೇಣು ಬಿಗಿದುಕೊಂಡು ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಡೆತ್‌ನೋಟ್ ಪತ್ತೆಮೃತಳ ಮನೆಯಲ್ಲಿ ಮರಣ ಪತ್ರ ಪತ್ತೆಯಾಗಿದೆ. ಇದರಲ್ಲಿ ತನ್ನ ಸಾವಿಗೆ ಪತಿ ಮೂರ್ತಿ ಹಾಗೂ ಆತನ ಅಕ್ಕನೇ ಕಾರಣರಾಗಿದ್ದಾರೆ. ಈ ಇಬ್ಬರಿಗೆ ಕಾನೂನು ಪ್ರಕಾರ ಕಠಿಣ ಶಿಕ್ಷೆ ವಿಧಿಸುವಂತೆ ಮೃತ ಶ್ವೇತಾ ಬರೆದಿದ್ದಾಳೆ ಎನ್ನಲಾಗಿದೆ.
