ಹರಿಹರೇಶ್ವರ ಸ್ವಾಮಿಯ ವೈಭವದ ಬ್ರಹ್ಮ ರಥೋತ್ಸವ

KannadaprabhaNewsNetwork |  
Published : Feb 25, 2024, 01:45 AM IST
ಹರಿಹರದಲ್ಲಿ ಶನಿವಾರ ಜರುಗಿದ ಶ್ರೀ ಹರಿಹರೇಶ್ವರಸ್ವಾಮಿ ಬ್ರಹ್ಮ ರಥೋತ್ಸವ. ಶ್ರದ್ಧಾಭಕ್ತಿ, ಸಡಗರದಿಂದ ಸೇರಿದ್ದ ಜನಸ್ತೋಮ. | Kannada Prabha

ಸಾರಾಂಶ

ತೇರಿಗೆ ಬಾಳೆಹಣ್ಣು, ಹೂವು, ಉತ್ತತ್ತಿ ಎಸೆದರು. ತೇರಿನ ಗಾಲಿಗಳಿಗೆ ತೆಂಗಿನ ಕಾಯಿ ಒಡೆದು ಭಕ್ತರು ಹರಕೆ ತೀರಿಸಿದರು. ರಥೋತ್ಸವದಲ್ಲಿ ಸಾವಿರಾರು ಮಂದಿ ಭಕ್ತಿ, ಶ್ರದ್ಧೆಯಿಂದ ಪಾಲ್ಗೊಂಡರು. ರಥವು ಶಿವಮೊಗ್ಗ ವೃತ್ತಕ್ಕೆ ಆಗಮಿಸುತ್ತಿದ್ದಂತೆ ನಗರದ ಶಿವಮೊಗ್ಗ, ಹರಪನಹಳ್ಳಿ ಹಾಗೂ ದಾವಣಗೆರೆ ಮಾರ್ಗ ಬಂದ್ ಆದ್ದರಿಂದ ಒಂದು ಕಿ.ಮೀ.ಗೂ ಅಧಿಕ ದೂರ ವಾಹನಗಳು ಸಾಲುಗಟ್ಟಿ ನಿಂತಿದ್ದವು.

ಕನ್ನಡಪ್ರಭ ವಾರ್ತೆ ಹರಿಹರ

ಮಧ್ಯ ಕರ್ನಾಟಕದ ಐತಿಹಾಸಿಕ ಪುರಾಣ ಪ್ರಸಿದ್ಧ ಕ್ಷೇತ್ರನಾಥ ಶ್ರೀ ಹರಿಹರೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವವು ನಗರದಲ್ಲಿ ಶನಿವಾರ ಶ್ರದ್ಧೆ, ಭಕ್ತಿ, ಸಡಗರದಿಂದ ಜರುಗಿತು.

ಬೆಳಗ್ಗೆ ೧೧.೨೫ಕ್ಕೆ ವೃಷಭ ಲಗ್ನದ ಶುಭ ಮುಹೂರ್ತದಲ್ಲಿ ಶಾಸಕ ಬಿ.ಪಿ.ಹರೀಶ್ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ದೇವಸ್ಥಾನ ರಸ್ತೆಯ ತೇರುಗಡ್ಡೆ ವೃತ್ತದಿಂದ ಶಿವಮೊಗ್ಗ ವೃತ್ತದವರೆಗೆ ಭಕ್ತರು ಹರ ಹರ ಮಹಾದೇವ್, ಗೋವಿಂದಾ ಗೋವಿಂದಾ ಎಂದು ನಾಮಸ್ಮರಿಸಿ ರಥ ಎಳೆದರು. ತೇರಿಗೆ ಬಾಳೆಹಣ್ಣು, ಹೂವು, ಉತ್ತತ್ತಿ ಎಸೆದರು. ತೇರಿನ ಗಾಲಿಗಳಿಗೆ ತೆಂಗಿನ ಕಾಯಿ ಒಡೆದು ಭಕ್ತರು ಹರಕೆ ತೀರಿಸಿದರು. ರಥೋತ್ಸವದಲ್ಲಿ ಸಾವಿರಾರು ಮಂದಿ ಭಕ್ತಿ, ಶ್ರದ್ಧೆಯಿಂದ ಪಾಲ್ಗೊಂಡರು. ರಥವು ಶಿವಮೊಗ್ಗ ವೃತ್ತಕ್ಕೆ ಆಗಮಿಸುತ್ತಿದ್ದಂತೆ ನಗರದ ಶಿವಮೊಗ್ಗ, ಹರಪನಹಳ್ಳಿ ಹಾಗೂ ದಾವಣಗೆರೆ ಮಾರ್ಗ ಬಂದ್ ಆದ್ದರಿಂದ ಒಂದು ಕಿ.ಮೀ.ಗೂ ಅಧಿಕ ದೂರ ವಾಹನಗಳು ಸಾಲುಗಟ್ಟಿ ನಿಂತಿದ್ದವು.

ತಹಸೀಲ್ದಾರ್ ಕೆ.ಎಂ.ಗುರು ಬಸವರಾಜ್, ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್, ಬಿಜೆಪಿ ಮುಖಂಡ ಎಸ್.ಎಂ.ವೀರೇಶ್ ಹನಗವಾಡಿ, ಚಂದ್ರಶೇಖರ್ ಪೂಜಾರ್ ಹನಗವಾಡಿ, ನಗರಸಭೆ ಸದಸ್ಯರು, ದೇವಸ್ಥಾನ ಸಮಿತಿ ಸದಸ್ಯರು, ಜನಪ್ರತಿನಿಧಿಗಳು ಭಾಗವಹಿಸಿದ್ದರು. ರಥೋತ್ಸವಕ್ಕೂ ಮೊದಲು ಪುರಾಣ ಪ್ರಸಿದ್ಧ ಹರಿಹರೇಶ್ವರ ಉತ್ಸವ ಮೂರ್ತಿ ಪಲ್ಲಕ್ಕಿಯಲ್ಲಿಟ್ಟು ರಥಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು. ರಥೋತ್ಸವದಲ್ಲಿ ಸರ್ವಧರ್ಮಿಯರೂ ಪಾಲೊಂಡಿದ್ದು ವಿಶೇಷವಾಗಿತ್ತು.

ದೇವಸ್ಥಾನದ ಸಮಿತಿ ಹಾಗೂ ಕೋಟೆಕೇರಿ ಗಜಾನನ ಯುವಕ ಸಂಘದ ಸಹಯೋಗದಲ್ಲಿ ಸಮೀಪದ ಬಿರ್ಲಾ ಕಲ್ಯಾಣ ಮಂಟಪ, ದೇವಸ್ಥಾನ ರಸ್ತೆಯಲ್ಲಿ ನಡುವಲಪೇಟೆ ಯುವಕ ಸಂಘದಿಂದ ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ವಾಸವಿ ಯುವಜನ ಸಂಘ, ಎನ್.ಎಚ್.ಶ್ರೀನಿವಾಸ್ ಬಳಗ, ಗಣಪಾಸ್ ಇನೋವೇಟಿವ್ ಗ್ರೂಪ್ ಸೇರಿ ಮತ್ತಿತರೆ ಸಂಘಗಳಿಂದ ಭಕ್ತರಿಗೆ ಬಿಸಿಲಿನ ಧಗೆ ತಣಿಸಲು ಮಜ್ಜಿಗೆ, ಶರಬತ್, ಪಾನಕ ವಿತರಿಸುತ್ತಿದ್ದ ದೃಶ್ಯ ಕಂಡು ಬಂತು.

ಶ್ರೀ ಹರಿಹರೇಶ್ವರ ಸ್ವಾಮಿ ಹಾಗೂ ಲಕ್ಷ್ಮೀ ದೇವಿಗೆ ಬೆಳಗಿನಿಂದಲೇ ಪೂಜಾ ಕಾರ್ಯಕ್ರಮಗಳಾದ ಗಣಪತಿ ಪೂಜೆ, ರುದ್ರಾಭಿಷೇಕ, ಅಲಂಕಾರ, ನವಗ್ರಹ ಪೂಜೆ, ಜಪ ಹೋಮ ಹವನಾದಿಗಳ ನಡೆಸಲಾಯಿತು. ಗ್ರಾಮದ ಶಾನಭೋಗರು, ಪಟೇಲರು ಹಾಗೂ ಮುಜರಾಯಿ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.

ಮೈಲಾರ ಜಾತ್ರೆಗೆ ಹೋಗುವ ಮತ್ತು ಅಲ್ಲಿಂದ ಬರುವ ಭಕ್ತರು ಹರಿಹರೇಶ್ವರನ ದರ್ಶನ ಪಡೆಯುವುದು ಮೊದಲಿನಿಂದ ಬಂದ ಪದ್ಧತಿ. ಈ ಹಿನ್ನೆಲೆಯಲ್ಲಿ ಈ ಬಾರಿ ಕೋಟೆಕೇರಿ ಗಜಾನನ ಯುವಕ ಸಂಘ ದಿಂದ ಬಿರ್ಲಾ ಕಲ್ಯಾಣ ಮಂಟಪದಲ್ಲಿ ಫೆ.೨೫ ರಂದು ಬೆಳಗ್ಗೆ- ರಾತ್ರಿ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿದೆ.

ದಾಸರ ತಂಡದಿಂದ ಕೀರ್ತನೆ:

ನಗರ ಸೇರಿ ಗ್ರಾಮೀಣ ಪ್ರದೇಶದ ಬಹುತೇಕ ಮನೆಗಳಲ್ಲಿ ಹೋಳಿಗೆ, ಶಾವಿಗೆ, ಪಾಯಸ ಇತರೆ ಸಿಹಿ ಪದಾರ್ಥಗಳ ಮಾಡಿ ಸವಿಯಲಾಯಿತು. ರಥೋತ್ಸವದಲ್ಲಿ ನಗರ ಹಾಗೂ ತಾಲೂಕಿನ ವಿವಿಧ ಭಾಗಗಳಿಂದ ದಾಸ ಪರಂಪರೆ ಅನುಯಾಯಿಗಳು ಶ್ವೇತವಸ್ತ್ರ ಧಾರಿಗಳಾಗಿ ಭಾಗಿಯಾಗಿ ಕೀರ್ತನೆಗಳ ಹಾಡಿದ್ದು ಜನಮನ ಸೆಳೆಯಿತು.

PREV

Latest Stories

ಡಿಕೆಶಿ ಪರ ದಾವಣಗೆರೆಯಲ್ಲಿ 101 ತೆಂಗಿನಕಾಯಿ ಸೇವೆ
ಬೆಂಗಳೂರು-ತುಮಕೂರುಪ್ರಯಾಣ, ಜನ ಹೈರಾಣ
ಸ್ಮಾರ್ಟ್‌ ಮೀಟರ್‌ ವಿವಾದ: ಸಚಿವಜಾರ್ಜ್ ವಿರುದ್ಧ ಬಿಜೆಪಿ ದೂರು