ನಿರ್ಲಕ್ಷ್ಯದಿಂದ ಶಿಥಿಲಾವಸ್ಥೆಯತ್ತ ಹರಿಹರೇಶ್ವರ ದೇಗುಲ

KannadaprabhaNewsNetwork | Published : Dec 22, 2023 1:30 AM

ಸಾರಾಂಶ

ಶ್ರೀ ಹರಿಹರೇಶ್ವರ ದೇಗುಲವು ದ್ವಿಕೂಟಾಚಲ ಅಂದರೆ ೨ ಗರ್ಭಗುಡಿ ಒಳಗೊಂಡಂತೆ ಹೊಯ್ಸಳ ವಾಸ್ತುಶಿಲ್ಪದಲ್ಲಿ ನಿರ್ಮಾಣಗೊಂಡಿದೆ. ಬೆಟ್ಟೇಶ್ವರ (ಕೇಶವ) ಮೂರ್ತಿಯ ಗರ್ಭಗುಡಿ ದಕ್ಷಿಣಾಭಿಮುಖವಾಗಿದ್ದರೆ ಶಿವಲಿಂಗ ವಿಗ್ರಹವಿರುವ ಗರ್ಭಗುಡಿ ಪೂರ್ವಾಭಿಮುಖವಾಗಿದ್ದು ಸದ್ಯಕ್ಕೆ ದಿನನಿತ್ಯ ಪೂಜೆ ಮಾತ್ರ ತಪ್ಪದೆ ನಡೆಯುತ್ತಿದೆ. ಆದರೆ ಶಿಲೆಗಳು ಹಾಗೂ ಕಲಾಕೃತಿಗಳು ಮಾಸಿ ಹೋಗುತ್ತಿವೆ. ಮೇಲ್ಭಾಗದ ಗೋಪುರ ಹಾಗೂ ವಿಗ್ರಹಗಳು ಶಿಥಿಲಾವಸ್ಥೆ ತಲುಪಿದ್ದು ಶಿಖರದ ಮೇಲೆ ಹಾಗೂ ಕಟ್ಟಡದ ಬಹುತೇಕ ಭಾಗಗಳಲ್ಲಿ ಗಿಡಗಂಟಿಗಳು ಹೇರಳವಾಗಿ ಬೆಳೆದಿದ್ದು ದೇಗುಲದ ಹಾನಿಗೆ ಕಾರಣವಾಗುತ್ತಿದೆ.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ತಾಲೂಕಿನ ಅಗ್ರಹಾರ ಬೆಳಗುಲಿ ಗ್ರಾಮದಲ್ಲಿ ನಿರ್ವಹಣೆ ಹಾಗೂ ಸಂರಕ್ಷಣೆಯ ಕೊರತೆಯಿಂದ ಶಿಥಿಲಾವಸ್ಥೆ ತಲುಪುತ್ತಿರುವ ಹೊಯ್ಸಳರ ಕಾಲದ ಶ್ರೀ ಹರಿಹರೇಶ್ವರ ದೇಗುಲಕ್ಕೆ ಕಾಯಕಲ್ಪದ ಅಗತ್ಯವಿದೆ.

ಸುಮಾರು ೮೦೦ ವರ್ಷಗಳ ಹಿಂದೆ ಅಂದರೆ ಕ್ರಿ.ಶ.೧೨೧೦ರಲ್ಲಿ ಹೊಯ್ಸಳರ ೨ನೇ ವೀರಬಲ್ಲಾಳನ ಕಾಲಘಟ್ಟದಲ್ಲಿ ದಂಡನಾಯಕನಾಗಿದ್ದ ಕೇಶವರಾಜ ಈ ದೇಗುಲವನ್ನು ಕಟ್ಟಿಸಿರುವ ಬಗ್ಗೆ ಶಾಸನದಲ್ಲಿ ಉಲ್ಲೇಖನವಿದೆ.

ಶ್ರೀ ಹರಿಹರೇಶ್ವರ ದೇಗುಲವು ದ್ವಿಕೂಟಾಚಲ ಅಂದರೆ ೨ ಗರ್ಭಗುಡಿ ಒಳಗೊಂಡಂತೆ ಹೊಯ್ಸಳ ವಾಸ್ತುಶಿಲ್ಪದಲ್ಲಿ ನಿರ್ಮಾಣಗೊಂಡಿದೆ. ಬೆಟ್ಟೇಶ್ವರ (ಕೇಶವ) ಮೂರ್ತಿಯ ಗರ್ಭಗುಡಿ ದಕ್ಷಿಣಾಭಿಮುಖವಾಗಿದ್ದರೆ ಶಿವಲಿಂಗ ವಿಗ್ರಹವಿರುವ ಗರ್ಭಗುಡಿ ಪೂರ್ವಾಭಿಮುಖವಾಗಿದ್ದು ಸದ್ಯಕ್ಕೆ ದಿನನಿತ್ಯ ಪೂಜೆ ಮಾತ್ರ ತಪ್ಪದೆ ನಡೆಯುತ್ತಿದೆ.

ದೇಗುಲದ ಅಂಕಣ, ಕಂಬ-ಸಿಂಬಿಗಳು ಹಾಗೂ ತೊಲೆಗಳ ಕುಸುರಿ-ಕೆತ್ತನೆಯು ಇನ್ನೂ ಉತ್ತಮ ಸ್ಥಿತಿಯಲ್ಲಿದ್ದು ದೇಗುಲದ ಇತಿಹಾಸವನ್ನು ಪರಿಚಯಿಸುವ ಮೂರು ಶಾಸನಗಳನ್ನು ಅಲ್ಲಲ್ಲಿ ನಿಲುಗಲ್ಲಿನಂತೆ ಕಲ್ಲಿನ ಗೋಡೆಗೆ ಅಳವಡಿಸಲಾಗಿದೆ. ಆದರೆ ಈ ಪುರಾತನ ಕಾಲದ ದೇಗುಲವು ಮುಜರಾಯಿ ಹಾಗೂ ಪುರಾತತ್ವ ಇಲಾಖೆ ಸೇರಿದಂತೆ ಯಾವುದೇ ಇಲಾಖೆಯಲ್ಲಿ ಪುರಾತನ ದೇಗುಲಗಳ ಪಟ್ಟಿಗೆ ಸೇರಿಲ್ಲದ ಪರಿಣಾಮ ನಿರ್ಲಕ್ಷ್ಯ ಹಾಗೂ ನಿರ್ವಹಣೆಯ ಕೊರತೆಯಿಂದ ಅಭಿವೃದ್ಧಿ ಕಾಣದೆ ಸೊರಗುತ್ತಿದೆ.

ಅರ್ಚಕರಿಗೆ ಸಂಬಳವಿಲ್ಲ: ಮುಜರಾಯಿ ಹಾಗೂ ಪುರಾತತ್ವ ಇಲಾಖೆಗೆ ಒಳಪಟ್ಟಿಲ್ಲದ ಕಾರಣ ದೇಗುಲದಲ್ಲಿ ಪೂಜಾ ಕಾರ್ಯದಲ್ಲಿ ತೊಡಗುವ ಅರ್ಚಕರಿಗೆ ತಸ್ತಿಕ್ ಹಾಗೂ ಇತರೆ ಯಾವುದೇ ಸಂಬಳ ಸಿಗುತ್ತಿಲ್ಲ. ಇದರಿಂದ ಅರ್ಚಕ ಕುಟುಂಬಗಳಿಗೆ ಯಾವುದೇ ಆರ್ಥಿಕ ನೆರವು ಇಲ್ಲದಂತಾಗಿದೆ ಎಂದು ಗ್ರಾಮದ ಹಿರಿಯರಾದ ನಂಜೇಗೌಡ ತಿಳಿಸಿದರು.

ಗಿಡಗಂಟಿಗಳು ಬೆಳೆದಿವೆ: ಶಿಲೆಗಳು ಹಾಗೂ ಕಲಾಕೃತಿಗಳು ಮಾಸಿ ಹೋಗುತ್ತಿವೆ. ಮೇಲ್ಭಾಗದ ಗೋಪುರ ಹಾಗೂ ವಿಗ್ರಹಗಳು ಶಿಥಿಲಾವಸ್ಥೆ ತಲುಪಿದ್ದು ಶಿಖರದ ಮೇಲೆ ಹಾಗೂ ಕಟ್ಟಡದ ಬಹುತೇಕ ಭಾಗಗಳಲ್ಲಿ ಗಿಡಗಂಟಿಗಳು ಹೇರಳವಾಗಿ ಬೆಳೆದಿದ್ದು ದೇಗುಲದ ಹಾನಿಗೆ ಕಾರಣವಾಗುತ್ತಿದೆ.

ಜಾನುವಾರುಗಳ ಬೀಡಾದ ಆವರಣ: ದೇಗುಲವನ್ನು ಸುತ್ತುವರಿದಂತೆ ಕಗ್ಗಲ್ಲುಗಳಿಂದ ನಿರ್ಮಾಣಗೊಂಡಿರುವ ಕಾಂಪೌಂಡ್‌ನ ಕಲ್ಲುಗಳು ಕುಸಿಯುತ್ತಿದ್ದು ಮುಂಭಾಗದ ಮುಖ್ಯದ್ವಾರ ಅಸ್ತಿತ್ವ ಕಳೆದುಕೊಳ್ಳತ್ತಿದೆ. ಗೇಟ್ ವ್ಯವಸ್ಥೆ ಇಲ್ಲದ ಕಾರಣ ಜಾನುವಾರುಗಳು ಆವರಣ ಹಾಗೂ ದೇಗುಲದ ಹೊರ ಅಂಕಣಗಳಲ್ಲಿ ಬೀಡು ಬಿಡುತಿದ್ದು ಕೊಟ್ಟಿಗೆಯಂತಾಗಿದೆ.

ಪುಂಡ ಪೋಕರಿಗಳ ಅಡ್ಡ: ಬೆಳಗ್ಗೆಯಿಂದ ರಾತ್ರಿ ಸುಮಾರಿನವರೆಗೆ ದೇಗುಲವೇ ಪುಂಡ ಪೋಕರಿಗಳ ಅಡ್ಡವಾಗಿದ್ದು ಅನೈತಿಕ ಚಟುವಟಿಕೆಗಳ ತಾಣವಾಗಿ ಪರಿಣಮಿಸಿದೆ. ಕಲ್ಲಿನ ಗೋಡೆ, ನಿಲುಗಲ್ಲು ಹಾಗೂ ಕಂಬಗಳ ಅಲ್ಲಲ್ಲಿ ಕಲ್ಲುಗಳಿಂದ ಹೆಸರು ಕೆತ್ತಲಾಗಿದ್ದು ಮಸಿಯಿಂದ ಮನಬಂದಂತೆ ಅಸಭ್ಯ ಪದಗಳನ್ನು ಬರೆಯಲಾಗಿದೆ. ಪ್ರವಾಸಿಗರ ವೀಕ್ಷಣಾ ಕೇಂದ್ರವಾಗಬೇಕಿದ್ದ ಸರ್ಕಾರ ನಿರ್ಲಕ್ಷ್ಯದಿಂದ ನಶಿಸುವ ಹಂತ ತಲುಪಿದೆ ಎಂಬುದು ಗ್ರಾಮಸ್ಥರ ಅಸಮಾಧಾನವಾಗಿದೆ.

ಅಭಿವೃದ್ಧಿಗೆ ಮನವಿ: ಗ್ರಾಮದ ಪ್ರಮುಖರು, ಸ್ಮಾರಕಗಳ ಸಂರಕ್ಷಣಾ ವೇದಿಕೆಯವ ಸದಸ್ಯರು ಶಿಥಿಲಾವಸ್ಥೆಯಲ್ಲಿರುವ ಪುರಾತನ ಕಾಲದ ಶ್ರೀ ಹರಿಹರೇಶ್ವರ ದೇಗುಲವನ್ನು ಪುರಾತತ್ವ ಹಾಗೂ ಮುಜರಾಯಿ ಇಲಾಖೆಗೆ ಸೇರಿಸಿ ಅಭಿವೃದ್ಧಿಪಡಿಸುವಂತೆ ಒತ್ತಾಯಿಸಿ ಹಲವು ಬಾರಿ ರಾಜ್ಯ ಪುರಾತತ್ವ ಮತ್ತು ಸಂಗ್ರಹಾಲಯ ಇಲಾಖೆ, ಜಿಲ್ಲಾ ಮುಜರಾಯಿ ಇಲಾಖೆ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು ಇದುವರೆಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ದೂರಿದರು. ಸಂಬಂಧಪಟ್ಟವರು ಇತ್ತ ಗಮನಹರಿಸಿ ಪುರಾತನ ದೇಗುಲವನ್ನು ಪುರಾತತ್ವ ಇಲ್ಲವೇ ಮುಜರಾಯಿ ಇಲಾಖೆಗೆ ಒಳಪಡಿಸಿ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸುವ ಮೂಲಕ ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಬೇಕು ಎಂಬುದು ಅಗ್ರಹಾರ ಬೆಳಗುಲಿ ಗ್ರಾಮಸ್ಥರ ಆಗ್ರಹವಾಗಿದೆ. *ಹೇಳಿಕೆ-1

೮೦೦ ವರ್ಷಗಳ ಐತಿಹಾಸಿಕ ಹಿನ್ನೆಲೆ ಹೊಂದಿರುವ ಶ್ರೀ ಹರಿಹರೇಶ್ವರ ದೇಗುಲವು ರಾಜ್ಯ ಪುರಾತತ್ವ ಸಂಗ್ರಹಾಲಯ ಇಲಾಖೆಯ ಸಂರಕ್ಷಿತ ದೇಗುಲ ಪಟ್ಟಿಯಲ್ಲಿ ಹಾಗೂ ಕೇಂದ್ರ ಪುರಾತತ್ವ ಇಲಾಖೆಯ ಪಟ್ಟಿಯಲ್ಲಿಯೂ ಸೇರಿಲ್ಲ. ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಹೊಯ್ಸಳರ ವಾಸ್ತುಶಿಲ್ಪದಲ್ಲಿ ನಿರ್ಮಾಣಗೊಂಡಿರುವ ದೇಗುಲವು ಸರ್ಕಾರದ ನಿರ್ಲಕ್ಷ್ಯದಿಂದ ನಿರ್ವಹಣೆ ಕಾಣದೆ ಸೊರಗುತ್ತಿದ್ದು ಕಾಯಕಲ್ಪದ ಅಗತ್ಯವಿದೆ. -ಟಿ.ವಿ.ನಟರಾಜ್ ಪಂಡಿತ್, ಸಂಚಾಲಕ, ಹಾಸನ ಜಿಲ್ಲಾ ಐತಿಹಾಸಿಕ ಸ್ಮಾರಕಗಳ ಸಂರಕ್ಷಣಾ ವೇದಿಕೆ.

Share this article